ಸೆಂಚುರಿಯನ್: ಭಾರತ ಕ್ರಿಕೆಟ್ ತಂಡದ ಬಲಗೈ ಬ್ಯಾಟರ್ ಕೆ.ಎಲ್. ರಾಹುಲ್, ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಾಧನೆ ಮಾಡಿದ್ದಾರೆ.
ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ರಾಹುಲ್ ಗಳಿಸಿದ ಎಂಟನೇ ಶತಕವಾಗಿದೆ. ಈ ಪೈಕಿ ಏಳು ಶತಕಗಳು ವಿದೇಶ ನೆಲದಲ್ಲೇ ದಾಖಲಾಗಿವೆ.
ದಕ್ಷಿಣ ಆಫ್ರಿಕಾ ನೆಲದಲ್ಲಿ ಎರಡು ಶತಕ ಗಳಿಸಿದ ಹಿರಿಮೆಗೂ ರಾಹುಲ್ ಭಾಜನರಾಗಿದ್ದಾರೆ. ಈ ಎರಡೂ ಶತಕಗಳನ್ನು ಸೆಂಚುರಿಯನ್‌ನ ಸೂಪರ್ ಸ್ಪೋರ್ಟ್ ಪಾರ್ಕ್‌ನಲ್ಲಿ ಗಳಿಸಿದ್ದಾರೆ. ಕಳೆದ ಪ್ರವಾಸದಲ್ಲಿ (2021/22) ರಾಹುಲ್ 123 ರನ್ ಗಳಿಸಿದ್ದರು.
ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಏಷ್ಯಾದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ (5 ಶತಕ) ಅಗ್ರಸ್ಥಾನದಲ್ಲಿದ್ದಾರೆ. ಈಗ ವಿರಾಟ್ ಕೊಹ್ಲಿ ಜೊತೆ ರಾಹುಲ್ ಜಂಟಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಪಾಕಿಸ್ತಾನದ ಅಜರ್ ಮೆಹಮೂದ್ ಹಾಗೂ ಶ್ರೀಲಂಕಾದ ತಿಲನ್ ಸಮರವೀರ ಕೂಡ ದಕ್ಷಿಣ ಆಫ್ರಿಕಾದಲ್ಲಿ ಎರಡು ಶತಕ ಗಳಿಸಿದ್ದಾರೆ.
ಸೆಂಚುರಿಯನ್‌ನಲ್ಲಿ ಎರಡು ಶತಕಗಳ ಹೊರತಾಗಿ, ಸಿಡ್ನಿ, ಓವಲ್, ಲಾರ್ಡ್ಸ್, ಕೊಲಂಬೊ ಹಾಗೂ ಸಬಿನಾ ಪಾರ್ಕ್‌ನಲ್ಲೂ ರಾಹುಲ್ ಶತಕಗಳನ್ನು ಗಳಿಸಿದ್ದಾರೆ.
ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ರಾಹುಲ್ 137 ಎಸೆತಗಳಲ್ಲಿ 101 ರನ್ (14 ಬೌಂಡರಿ, 4 ಸಿಕ್ಸರ್) ಗಳಿಸಿದರು.
ಬ್ಯಾಟಿಂಗ್‌ನಲ್ಲಿ ಮಧ್ಯಮ ಕ್ರಮಾಂಕದ ಆಪತ್ಭಾಂಧವ ಆಗಿರುವ ರಾಹುಲ್, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.