ADVERTISEMENT

ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಟೆಸ್ಟ್‌: ರಾಹುಲ್ ಆಟದ ಮೇಲೆ ಚಿತ್ತ

ಪಿಟಿಐ
Published 7 ನವೆಂಬರ್ 2024, 1:12 IST
Last Updated 7 ನವೆಂಬರ್ 2024, 1:12 IST
ಕೆ.ಎಲ್‌.ರಾಹುಲ್
ಕೆ.ಎಲ್‌.ರಾಹುಲ್   

ಮೆಲ್ಬರ್ನ್‌: ಭಾರತ ಎ ತಂಡ, ಗುರುವಾರ ಇಲ್ಲಿ ಆರಂಭವಾಗುವ ನಾಲ್ಕು ದಿನಗಳ ಎರಡನೇ ‘ಟೆಸ್ಟ್‌’ ಪಂದ್ಯದಲ್ಲಿ ಆಸ್ಟ್ರೇಲಿಯಾ ಎ ತಂಡವನ್ನು ಎದುರಿಸಲಿದ್ದು, ಅನುಭವಿ ಕೆ.ಎಲ್‌.ರಾಹುಲ್ ಅವರಿಗೆ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ತೋರಲು ಉತ್ತಮ ಅವಕಾಶ ಒದಗಿದೆ.

ಈ ಪಂದ್ಯದಲ್ಲಿ ಕನ್ನಡಿಗ ಆಟಗಾರನ ಬ್ಯಾಟಿಂಗ್ ಕ್ರಮಾಂಕ ಮತ್ತು ಫಾರ್ಮ್ ಮೇಲೆ ಚಿತ್ತ ನೆಟ್ಟಿದೆ. ತಂಡದ ಚಿಂತಕರ ಚಾವಡಿಯ ಜೊತೆ ಸಮಾಲೋಚನೆ ನಡೆಸಿದ ಆಯ್ಕೆಗಾರರು ರಾಹುಲ್ ಮತ್ತು ರಿಸರ್ವ್‌ ವಿಕೆಟ್‌ ಕೀಪರ್ ಜುರೇಲ್‌ ಅವರನ್ನು ಭಾರತ ‘ಎ’ ತಂಡದ ಎರಡನೇ ಟೆಸ್ಟ್‌ ಪಂದ್ಯಕ್ಕೆ ಕಳುಹಿಸಿದ್ದಾರೆ. ರಾಹುಲ್ ಅವರನ್ನು ತವರಿನಲ್ಲಿ ನಡೆದ ನ್ಯೂಜಿಲೆಂಡ್‌ ಟೆಸ್ಟ್ ಸರಣಿಯ ಮೊದಲ ಪಂದ್ಯದ ನಂತರ ತಂಡದಿಂದ ಕೈಬಿಡಲಾಗಿತ್ತು.

22ರಿಂದ ಪರ್ತ್‌ನಲ್ಲಿ ಭಾರತ– ಆಸ್ಟ್ರೇಲಿಯಾ ಮಧ್ಯೆ ಮೊದಲ ಟೆಸ್ಟ್‌ ಪಂದ್ಯ ನಡೆಯಲಿದೆ.

ADVERTISEMENT

ಆಸ್ಟ್ರೇಲಿಯಾ ತಂಡದ ಮೀಸಲು ವೇಗಿಗಳಲ್ಲಿ ಒಬ್ಬರಾದ ಸ್ಕಾಟ್ ಬೋಲೆಂಡ್ ಅವರ ದಾಳಿಯೆದುರು ಅಭಿಮನ್ಯು ಈಶ್ವರನ್, ಋತುರಾಜ್ ಗಾಯಕವಾಡ್, ಬಿ.ಸಾಯಿ ಸುದರ್ಶನ್ ಮತ್ತು ದೇವದತ್ತ ಪಡಿಕ್ಕಲ್ ಅಂಥ ಆಟಗಾರರು ಹೇಗೆ ಆಡುತ್ತಾರೆ ಎಂಬುದು ಕುತೂಹಲಕರ. ‘ಎ’ ತಂಡದ ಆಟಗಾರರಲ್ಲಿ ರಾಹುಲ್ ಅವರಿಗೆ ಬಾರ್ಡರ್‌–ಗಾವಸ್ಕರ್‌ ಟ್ರೋಫಿ ಸರಣಿಯಲ್ಲಿ ಆಡುವ ಸಾಧ್ಯತೆ ಹೆಚ್ಚು ಇರುವುದರಿಂದ ಅವರ ಪ್ರದರ್ಶನದ ಮೇಲೆ ಆಯ್ಕೆಗಾರರ ಗಮನವಿದೆ.

ಮೆಲ್ಬರ್ನ್‌ನಲ್ಲಿ ಬುಧವಾರ ತಾಲೀಮಿನ ವೇಳೆ ರಾಹುಲ್‌ ಉತ್ತಮ ಲಯಲ್ಲಿದ್ದಂತೆ ಕಂಡರು. ಈಶ್ವರನ್ ಮತ್ತು ಋತುರಾಜ್ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿರುವ ಕಾರಣ, ರಾಹುಲ್ ಐದನೇ ಅಥವಾ ಆರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ. ಭಾರತ ತಂಡಕ್ಕೆ ಆಯ್ಕೆಯಾದರೂ ಅವರು ಇದೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಹೆಚ್ಚು.

ಮೊದಲ ‘ಟೆಸ್ಟ್‌’ನಲ್ಲಿ ಆಸ್ಟ್ರೇಲಿಯಾ ‘ಎ’ ಏಳು ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ರಾಹುಲ್ ಅವರು ಬಾಬಾ ಇಂದ್ರಜಿತ್‌ ಸ್ಥಾನದಲ್ಲಿ ಆಡಲಿದ್ದಾರೆ. ಇಂದ್ರಜಿತ್ ಮೊದಲ ಪಂದ್ಯದಲ್ಲಿ 9 ಮತ್ತು 6 ರನ್ ಗಳಿಸಿದ್ದರು.

ಜುರೆಲ್‌ ಅವರು ಇಶಾನ್ ಕಿಶನ್ ಸ್ಥಾನದಲ್ಲಿ ಅವಕಾಶ ಪಡೆಯಲಿದ್ದಾರೆ. ಮೊದಲ ಪಂದ್ಯದ ಕೊನೆಯ ದಿನ ಚೆಂಡು ಬದಲಾವಣೆ ಮಾಡಿದ್ದ ಪ್ರಕರಣದಲ್ಲಿ ಇಶಾನ್ ಅಂಪೈರ್‌ ಜೊತೆ ವಾಗ್ವಾದದಲ್ಲಿ ತೊಡಗಿದ್ದರು.

ನವದೀಪ್ ಸೈನಿ ಬದಲು ಎಡಗೈ ವೇಗಿ ಖಲೀಲ್ ಅಹ್ಮದ್ ಮತ್ತು ಮಾನವ್ ಸುತಾರ್ ಬದಲು ತನುಷ್‌ ಕೋಟ್ಯಾನ್ ಅವಕಾಶ ಪಡೆಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.