ADVERTISEMENT

2ನೇ ‘ಟೆಸ್ಟ್‌’: ಮತ್ತೆ ಎಡವಿದ ಅಗ್ರ ಬ್ಯಾಟರ್‌ಗಳು

ಎರಡನೇ ‘ಟೆಸ್ಟ್‌’: ಮತ್ತೆ ನಿರಾಸೆ ಮೂಡಿಸಿದ ರಾಹುಲ್

ಪಿಟಿಐ
Published 9 ನವೆಂಬರ್ 2024, 0:55 IST
Last Updated 9 ನವೆಂಬರ್ 2024, 0:55 IST
<div class="paragraphs"><p>ಪ್ರಸಿದ್ಧ ಕೃಷ್ಣ </p></div>

ಪ್ರಸಿದ್ಧ ಕೃಷ್ಣ

   

ಮೆಲ್ಬರ್ನ್‌: ಕೆ.ಎಲ್.ರಾಹುಲ್ ಅವರ ನಿರಾಶಾದಾಯಕ ಬ್ಯಾಟಿಂಗ್ ಮುಂದುವರಿಯಿತು. ಭಾರತ ಎ ತಂಡದ ಅಗ್ರ ಬ್ಯಾಟರ್‌ಗಳು ಎರಡನೇ ಕ್ರಿಕೆಟ್‌ ‘ಟೆಸ್ಟ್‌’ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲೂ ಕುಸಿದರು. ಪಂದ್ಯದ ಎರಡನೇ ದಿನವಾದ ಶುಕ್ರವಾರ ಆಟ ಮುಗಿದಾಗ ಭಾರತ ಎ ತಂಡ 5 ವಿಕೆಟ್‌ಗೆ 73 ರನ್ ಗಳಿಸಿ ಸಂಕಷ್ಟದಲ್ಲಿತ್ತು.

ಒಂದು ವೇಳೆ ನಾಯಕ ರೋಹಿತ್ ಶರ್ಮಾ ಅವರು 22ರಂದು ಆರಂಭವಾಗುವ ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾದರೆ, ರಾಹುಲ್‌ ಅವರಿಗೆ ಆ ಹೊಣೆ ವಹಿಸಬಹುದೆಂಬ ನಿರೀಕ್ಷೆಯಿದೆ. ಆದರೆ ಅವರು ಇಲ್ಲಿ ಕೊಟ್ಟ ಅವಕಾಶದಲ್ಲಿ ಎಡವಿದರು. ಎರಡೂ ಇನಿಂಗ್ಸ್‌ಗಳಲ್ಲಿ ಅವರು ಗಳಿಸಿದ್ದು ಒಟ್ಟು 14 ರನ್‌ಗಳನ್ನಷ್ಟೇ.

ADVERTISEMENT

ಇದಕ್ಕೆ ಮೊದಲು ಭಾರತ ಎ ತಂಡದ 161 ರನ್‌ಗಳಿಗೆ ಉತ್ತರವಾಗಿ ಆತಿಥೇಯ ತಂಡ 223 ರನ್ ಗಳಿಸಿ 62 ರನ್‌ಗಳ ಲೀಡ್ ಪಡೆಯಿತು. ಎರಡನೇ ಸರದಿಯಲ್ಲಿ ಭಾರತ ಅರ್ಧದಷ್ಟು ವಿಕೆಟ್‌ಗಳನ್ನು ಕಳೆದುಕೊಂಡಿದ್ದು ಬರೇ 11 ರನ್‌ಗಳಿಂದ ಮುಂದಿದೆ.

ಆಸ್ಟ್ರೇಲಿಯಾದ ವೇಗ–ಸ್ಪಿನ್‌ ಬೌಲರ್‌ಗಳು ಈಗ ತಮ್ಮ ತಂಡಕ್ಕೆ ಸರಣಿ ಸ್ವೀಪ್ ಮಾಡುವ ಅವಕಾಶ ಮಾಡಿಕೊಟ್ಟಿದ್ದಾರೆ. ಸರಣಿಯ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ಎ ಏಳು ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು.

ಲಯಕ್ಕೆ ಪರದಾಡುತ್ತಿರುವ ರಾಹುಲ್ 44 ಎಸೆತಗಳನ್ನು ಆಡಿ 10 ರನ್ ಗಳಿಸಿದ ನಂತರ ಆಫ್ ಸ್ಪಿನ್ ಬೌಲರ್ ಕೋರಿ ರಾಕಿಸಿಯೋಲಿ ಎಸೆತದಲ್ಲಿ ಹೊಡೆತಕ್ಕೆ ಹೋಗದೇ ಪ್ಯಾಡ್‌ನಿಂದ ತಡೆಯಲು ಹೋದರು. ಆದರೆ ಪ್ಯಾಡ್‌ಗೆ ಬಡಿದ ಚೆಂಡು ಕಾಲುಗಳ ಮಧ್ಯದಿಂದ ನುಸುಳಿ ಬೇಲ್ಸ್‌ ಉರುಳಿಸಿತು.

ಟೆಸ್ಟ್‌ ಸರಣಿಗೆ ಬ್ಯಾಕಪ್ ಓಪನರ್ ಆಗಿರುವ ಅಭಿಮನ್ಯು ಈಶ್ವರನ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಖಾತೆ ತೆರೆಯುವ ಮೊದಲೇ ನಿರ್ಗಮಿಸಿದರೆ, ಎರಡನೇ ಇನಿಂಗ್ಸ್‌ನಲ್ಲಿ 31 ಎಸೆತಗಳಲ್ಲಿ 17 ರನ್ ಗಳಿಸಿದ್ದಷ್ಟೇ ಬಂತು. ವೇಗ ಮತ್ತು ಸ್ಪಿನ್ ದಾಳಿಗೆ ಭಾರತದ ಆಟಗಾರರು ಪರದಾಡಿದರು. ಪಡಿಕ್ಕಲ್ (1) ಕೂಡ ಬೇರೂರಲಿಲ್ಲ.

ದಿನದಾಟ ಮುಗಿದಾಗ ವಿಕೆಟ್ ಕೀಪರ್ ಧ್ರುವ್ ಜುರೇಲ್ (ಬ್ಯಾಟಿಂಗ್ 19) ಮತ್ತು ನಿತೀಶ್ ರೆಡ್ಡಿ (ಬ್ಯಾಟಿಂಗ್ 9) ಕ್ರೀಸ್‌ನಲ್ಲಿದ್ದರು.

ಇದಕ್ಕೆ ಮೊದಲು 2 ವಿಕೆಟ್‌ಗೆ 53 ರನ್‌ಗಳಿಂದ ದಿನದಾಟ ಮುಂದುವರಿಸಿದ ಆಸ್ಟ್ರೇಲಿಯಾ ಎ, ಭಾರತದ ವೇಗದ ಬೌಲರ್‌ಗಳಾದ ಪ್ರಸಿದ್ಧ ಕೃಷ್ಣ (50ಕ್ಕೆ4) ಮತ್ತು ಮುಕೇಶ್ ಕುಮಾರ್ (41ಕ್ಕೆ3) ದಾಳಿಗೆ ಸಿಲುಕಿ 62.1 ಓವರುಗಳಲ್ಲಿ 223 ರನ್‌ಗಳಿಗೆ ಆಲೌಟ್ ಆಯಿತು. ಆರಂಭ ಆಟಗಾರ ಮಾರ್ಕಸ್‌ ಹ್ಯಾರಿಸ್ 138 ಎಸೆತಗಳಲ್ಲಿ 74 ರನ್ ಗಳಿಸಿದರು. ಕೆಳಕ್ರಮಾಂಕದಲ್ಲಿ ರಾಕಿಸಿಯೊಲಿ ಬಿರುಸಿನ ಆಟವಾಡಿ 28 ಎಸೆತಗಳಲ್ಲಿ 35 ರನ್ (6x2, 4x3) ಸಿಡಿಸಿದರು.

ಸಂಕ್ಷಿಪ್ತ ಸ್ಕೋರು: ಭಾರತ ಎ: 161 ಮತ್ತು 31 ಓವರುಗಳಲ್ಲಿ 5 ವಿಕೆಟ್‌ಗೆ 73 (ಧ್ರುವ್ ಜುರೆಲ್ ಬ್ಯಾಟಿಂಗ್ 19; ನಥಾನ್‌ ಮೆಕ್‌ಆ್ಯಂಡ್ರೂ 22ಕ್ಕೆ2, ಬ್ಯೂ ವೆಬ್‌ಸ್ಟರ್‌ 14ಕ್ಕೆ2); ಆಸ್ಟ್ರೇಲಿಯಾ ಎ: 62.1 ಓವರುಗಳಲ್ಲಿ 223 (ಮಾರ್ಕಸ್ ಹ್ಯಾರಿಸ್ 74; ಪ್ರಸಿದ್ಧ ಕೃಷ್ಣ 50ಕ್ಕೆ4, ಮುಕೇಶ್ ಕುಮಾರ್ 41ಕ್ಕೆ3, ಖಲೀಲ್ ಅಹ್ಮದ್ 56ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.