ಮುಂಬೈ: ಐಪಿಎಲ್–2025ರ ಆವೃತ್ತಿಗೆ ಆಟಗಾರರ ಉಳಿಸಿಕೊಳ್ಳುವ ಪ್ರಕ್ರಿಯೆಗೆ ನಾಳೆ ಕೊನೆಯ ದಿನವಾಗಿದ್ದು, 10 ತಂಡಗಳು ಉಳಿಸಿಕೊಳ್ಳುವ ಮತ್ತು ತಂಡದಿಂದ ಕೈಬಿಡುವ ಆಟಗಾರರ ಮೇಲೆ ಕ್ರೀಡಾಭಿಮಾನಿಗಳ ಗಮನ ನೆಟ್ಟಿದೆ. ಆ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವುದು ಕನ್ನಡಿಗ ಕೆ.ಎಲ್. ರಾಹುಲ್.
ಲಖನೌ ಸೂಪರ್ ಜೈಂಟ್ಸ್ ಆಫರ್ ತಿರಸ್ಕರಿಸಿರುವ ಅವರು ಬಿಡ್ಡಿಂಗ್‌ಗೆ ಹೋಗುವ ಸಾಧ್ಯತೆ ಇದ್ದು, ಬಿಡ್ಡಿಂಗ್‌ನಲ್ಲಿ ಗಮನ ಸೆಳೆಯಲಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಆಗಸ್ಟ್ 26 ರಂದು ಎಲ್‌ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ ಅವರ ಭೇಟಿಗೆ ರಾಹುಲ್ ಕೋಲ್ಕತ್ತಗೆ ತೆರಳಿದ್ದರು. ಈ ಭೇಟಿಯು ಎಲ್‌ಎಸ್‌ಜಿ ಪಾಲಿಗೆ ಫಲಪ್ರದವಾಗಲಿದ್ದು, ಮನಸ್ತಾಪ ಬಿಟ್ಟು ತಂಡದಲ್ಲಿ ಮುನ್ನಡೆಯುವ ಸಾಧ್ಯತೆ ಇದೆ ಎಂಬ ವದಂತಿ ಹಬ್ಬಿತ್ತು. ಆದರೆ, ಈ ಬಗ್ಗೆ ಮಾಲೀಕರು ಸಹ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ವಾರ ಇಎಸ್‌ಪಿಎನ್ ಕ್ರಿಕ್ ಇನ್ಫೋ ಮಾಡಿದ್ದ ವರದಿಯಲ್ಲಿ, ಆಟಗಾರರನ್ನು ಉಳಿಸಿಕೊಳ್ಳುವ ಪಟ್ಟಿಯಲ್ಲಿ ವಿಕೆಟ್ ಕೀಪರ್, ಬ್ಯಾಟರ್ ರಾಹುಲ್ ಹೆಸರು ಇರುವುದಿಲ್ಲ. ನಿಕೋಲಸ್ ಪೂರನ್, ಮಯಾಂಕ್ ಯಾದವ್, ರವಿ ಬಿಷ್ಣೋಯಿ ಮತ್ತು ಮೊಹ್ಸಿನ್ ಖಾನ್ ಅವರನ್ನು ತಂಡ ಉಳಿಸಿಕೊಳ್ಳಲಿದೆ ಎಂದು ಉಲ್ಲೇಖಿಸಲಾಗಿತ್ತು.
ಲಖನೌ ತಂಡದಲ್ಲಿ ಮುಂದುವರಿಯಲು ರಾಹುಲ್‌ಗೆ ದೊಡ್ಡ ಆಫರ್ ನೀಡಲಾಗಿತ್ತು. ಆದರೆ, ವೈಯಕ್ತಿಕ ಮತ್ತು ವೃತ್ತಿಪರ ಕಾರಣಗಳನ್ನು ನೀಡಿ ಅವರು ಮುಂದುವರಿಯದಿರಲು ನಿರ್ಧರಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮೂರು ಆವೃತ್ತಿಗಳಲ್ಲಿ ಎಲ್‌ಎಸ್‌ಜಿ ತಂಡವನ್ನು ರಾಹುಲ್ ಪ್ರತಿನಿಧಿಸಿದ್ದರು. ಎರಡು ಬಾರಿ ತಂಡ ಪ್ಲೇಆಫ್ಸ್ ತಲುಪಿತ್ತು.
ಮುಂದಿನ ವರ್ಷದ ಐಪಿಎಲ್ ಪಂದ್ಯಾವಳಿಗೆ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್‌ನಲ್ಲಿ ನಡೆಯಲಿದ್ದು, ಕೆ.ಎಲ್. ರಾಹುಲ್ ಖರೀದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟನ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆಸಕ್ತಿ ತೋರಿಸಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಐಪಿಎಲ್‌ನ ನಾಲ್ಕು ಫ್ರಾಂಚೈಸಿಗಳನ್ನು ಪ್ರತಿನಿಧಿಸಿರುವ ರಾಹುಲ್, 132 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಆರ್‌ಸಿಬಿ (2013-16), ಸನ್‌ರೈಸರ್ಸ್ ಹೈದರಾಬಾದ್ (2014-15), ಕಿಂಗ್ಸ್ ಇಲೆವೆನ್ ಪಂಜಾಬ್ (2018-21) ಮತ್ತು ಎಲ್‌ಎಸ್‌ಜಿ ಫ್ರಾಂಚೈಸಿಗಳಲ್ಲಿ ಆಡಿರುವ ಅವರು, 134.61 ಸ್ಟ್ರೈಕ್ ರೇಟ್‌ನೊಂದಿಗೆ 45.47 ಸರಾಸರಿಯಲ್ಲಿ 4,683 ರನ್ ಗಳಿಸಿದ್ದಾರೆ. ನಾಲ್ಕು ಶತಕ ಮತ್ತು 37 ಅರ್ಧಶತಕ ಸಿಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.