ಬೆಂಗಳೂರು: ‘ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಏಕದಿನ ಮಾದರಿಯ ಸಾರ್ವಕಾಲಿಕ ಶ್ರೇಷ್ಠ ಆಟಗಾರ. ರೋಹಿತ್ ಶರ್ಮಾ ಕೂಡ ಈ ಸಾಲಿಗೆ ಸೇರುತ್ತಾರೆ’ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಆ್ಯರನ್ ಫಿಂಚ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳಿಂದ ಗೆದ್ದು ಸರಣಿ ತನ್ನದಾಗಿಸಿಕೊಂಡಿತ್ತು. ಈ ಪಂದ್ಯದಲ್ಲಿ ರೋಹಿತ್ ಮತ್ತು ವಿರಾಟ್ ಕ್ರಮವಾಗಿ ಶತಕ ಹಾಗೂ ಅರ್ಧಶತಕ ಸಿಡಿಸಿದ್ದರು. ಈ ಜೋಡಿ ಎರಡನೇ ವಿಕೆಟ್‌ಗೆ 137ರನ್ ಸೇರಿಸಿ ಮಿಂಚಿತ್ತು.
ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫಿಂಚ್ ‘ಕೊಹ್ಲಿ ಮತ್ತು ರೋಹಿತ್ ಅವರಂತಹ ವಿಶ್ವ ಶ್ರೇಷ್ಠ ಆಟಗಾರರು ಭಾರತ ತಂಡದಲ್ಲಿದ್ದಾರೆ. ಅವರು ಎಂತಹುದೇ ಪರಿಸ್ಥಿತಿಯಲ್ಲೂ ಎದೆಗುಂದದೆ ಹೋರಾಡುತ್ತಾರೆ. ಇದು ಆತಿಥೇಯ ತಂಡಕ್ಕೆ ವರವಾಗಿ ಪರಿಣಮಿಸಿದೆ’ ಎಂದಿದ್ದಾರೆ.
‘ಶಿಖರ್ ಧವನ್ ಅನುಪಸ್ಥಿತಿಯಲ್ಲೂ ರೋಹಿತ್ ಅಮೋಘ ಆಟ ಆಡಿದರು. ಕೊನೆಯ ಹತ್ತು ಓವರ್‌ಗಳಲ್ಲಿ ನಮ್ಮ ಆಟಗಾರರು ಹೆಚ್ಚು ರನ್ ಗಳಿಸಲಿಲ್ಲ. ಇದರಿಂದ ನಮಗೆ ಹಿನ್ನಡೆ ಎದುರಾಯಿತು’ ಎಂದು ಹೇಳಿದ್ದಾರೆ.
‘ಭಾರತದ ಗೆಲುವಿನಲ್ಲಿ ಬೌಲರ್‌ಗಳ ಪಾತ್ರವೂ ಮಹತ್ವದ್ದಾಗಿತ್ತು. ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ ಮತ್ತು ನವದೀಪ್ ಸೈನಿ ಅವರು ‘ಡೆತ್’ ಓವರ್‌ಗಳಲ್ಲಿ ಅಮೋಘ ದಾಳಿ ಸಂಘಟಿಸಿದರು. ಈ ವಿಷಯದಲ್ಲಿ ನಾವು ಹಿಂದೆ ಬಿದ್ದೆವು’ ಎಂದು ನುಡಿದರು.
‘ಮಾರ್ನಸ್ ಲಾಬುಶೇನ್, ತವರಿನಲ್ಲಿ ನಡೆದಿದ್ದ ಟೆಸ್ಟ್ ಸರಣಿಗಳಲ್ಲಿ ಮಿಂಚಿದ್ದರು. ಭಾರತದ ಎದುರಿನ ಸರಣಿಯ ಎರಡು ಪಂದ್ಯಗಳಲ್ಲಿ ಲಭಿಸಿದ ಅವಕಾಶಗಳನ್ನು ಚೆನ್ನಾಗಿಯೇ ಬಳಸಿಕೊಂಡರು. ತಾವು ಪ್ರಬುದ್ಧ ಬ್ಯಾಟ್ಸ್‌ಮನ್ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನ್ಯೂಜಿಲೆಂಡ್ ಮೇಲೂ ಒತ್ತಡ ಹೇರುತ್ತೇವೆ: ‘ಹೋದ ವರ್ಷ ನ್ಯೂಜಿಲೆಂಡ್ ಪ್ರವಾಸದಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದೇವೆ. ಇದರಿಂದ ವಿಶ್ವಾಸ ಇಮ್ಮಡಿಸಿದೆ. ಈ ಸಲವೂ ಕಿವೀಸ್ ನೆಲದಲ್ಲಿ ಶ್ರೇಷ್ಠ ಆಟ ಆಡಿ ಆತಿಥೇಯರ ಮೇಲೆ ಒತ್ತಡ ಹೇರುತ್ತೇವೆ’ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ ತಂಡವು ಈ ಬಾರಿ ನ್ಯೂಜಿಲೆಂಡ್‌ನಲ್ಲಿ ಐದು ಪಂದ್ಯಗಳ ಟ್ವೆಂಟಿ–20, ಮೂರು ಪಂದ್ಯಗಳ ಏಕದಿನ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಗಳನ್ನು ಆಡಲಿದೆ. ಟ್ವೆಂಟಿ–20 ಸರಣಿಯ ಮೊದಲ ಪಂದ್ಯ ಇದೇ ತಿಂಗಳ 24ರಿಂದ ನಡೆಯಲಿದೆ.
‘ನ್ಯೂಜಿಲೆಂಡ್ ಎದುರಿನ ಟ್ವೆಂಟಿ–20 ಸರಣಿಯಲ್ಲಿ ಮೊದಲು ಬ್ಯಾಟ್ ಮಾಡುವ ಅವಕಾಶ ಸಿಕ್ಕರೆ ದೊಡ್ಡ ಮೊತ್ತ ಕಲೆಹಾಕುವತ್ತ ಚಿತ್ತ ಹರಿಸಬೇಕು. ಮೊದಲ ಪಂದ್ಯದಲ್ಲೇ ಗೆಲ್ಲಲು ಶ್ರಮಿಸಬೇಕು. ಹಾಗಾದಾಗ ನಂತರದ ಪಂದ್ಯಗಳಲ್ಲಿ ಹೆಚ್ಚು ಒತ್ತಡವಿಲ್ಲದೆ ಕಣಕ್ಕಿಳಿಯಬಹುದು’ ಎಂದಿದ್ದಾರೆ.
‘ಹೋದ ವರ್ಷಕ್ಕೆ ಹೋಲಿಸಿದರೆ ಈಗ ಆಸ್ಟ್ರೇಲಿಯಾ ತಂಡ ಬಲಿಷ್ಠವಾಗಿದೆ. ಸಾಂಘಿಕ ಹೋರಾಟದಿಂದ ಮಾತ್ರ ಫಿಂಚ್ ಪಡೆಯನ್ನು ಮಣಿಸಲು ಸಾಧ್ಯ ಎಂಬುದನ್ನು ಚೆನ್ನಾಗಿ ಅರಿತುಕೊಂಡಿದ್ದೆವು. ಮೊದಲ ಪಂದ್ಯದಲ್ಲಿ ಸೋತರೂ ಹತಾಶರಾಗದೆ ನಂತರದ ಎರಡು ಪಂದ್ಯಗಳಲ್ಲಿ ಗುಣಮಟ್ಟದ ಸಾಮರ್ಥ್ಯ ತೋರಿದೆವು. ಮೂರನೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಆಸ್ಟ್ರೇಲಿಯಾದ ವೇಗದ ಬೌಲರ್‌ಗಳನ್ನು ನಿರ್ಭೀತಿಯಿಂದ ಎದುರಿಸಿದರು. ಹೀಗಾಗಿ ಇನ್ನೊಂದು ಬದಿಯಲ್ಲಿದ್ದ ನಾನು ಒತ್ತಡ ರಹಿತವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಯಿತು’ ಎಂದು ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.