ನವದೆಹಲಿ: ಏಕದಿನ ಕ್ರಿಕೆಟ್‌ನಲ್ಲಿ 50 ಶತಕಗಳನ್ನು ಸಿಡಿಸುವ ಮೂಲಕ ತಮ್ಮ ದಾಖಲೆ ಸಮೀಪ ಯಾರೂ ಸುಳಿಯದಂತ ಸಾಧನೆಯನ್ನು ರನ್ ಮಷಿನ್ ವಿರಾಟ್ ಕೊಹ್ಲಿ ಸಾಧಿಸಿದ್ದಾರೆ ಎಂದು 1983ರ ವಿಶ್ವಕಪ್ ವಿಜೇತ ತಂಡದ ಆಟಗಾರ ಗುಂಡಪ್ಪ ವಿಶ್ವನಾಥ್ ಬಣ್ಣಿಸಿದ್ದಾರೆ.
‘2011ರಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್‌ನಲ್ಲಿ ತಮ್ಮ 117ನೇ ಏಕದಿನ ಕ್ರಿಕೆಟ್ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಆಡಿದ ಆಟದಲ್ಲಿ ಸಚಿನ್ 49ನೇ ಶತಕ ದಾಖಲಿಸಿದರು. ಸಚಿನ್ ಅವರ ಈ ಸಾಧನೆಯ ಸಮೀಪ ಯಾರಾದರೂ ಒಬ್ಬರು ಬರುತ್ತಾರೆಂದರೆ ಅದು ಕೊಹ್ಲಿ ಮಾತ್ರ ಎಂದು ನಾನು ಅಂದೇ ಹೇಳಿದ್ದೆ. ಆದರೆ ಆ ದಾಖಲೆ ಮುರಿಯುತ್ತಾರೆ ಎಂದು ಎಣಿಸಿರಲಿಲ್ಲ’ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ
'ಪ್ರತಿಯೊಬ್ಬರೂ ಕೊಹ್ಲಿ ಸಿಡಿಸಿದ ಶತಕದ ಕುರಿತು ಮಾತನಾಡುತ್ತಾರೆ. ಆದರೆ ಅವರು 70 ಅಥವಾ 80 ರನ್ ಗಳಿಸುವಾಗಿನ ಅವರ ಬ್ಯಾಟಿಂಗ್‌ನಲ್ಲಿ ಸ್ಥಿರತೆ ಅದ್ಭುತ. ಅವರ ಈ ಸ್ಥಿರ ಆಟದ ಪ್ರದರ್ಶನದಿಂದಲೇ 50 ರನ್‌ಗಳನ್ನು ಸುಲಭವಾಗಿ ಪಡೆಯುತ್ತಿದ್ದಾರೆ. ಅವರಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಇದೆ’ ಎಂದು ವಿಶ್ವನಾಥ್ ಹೇಳಿದ್ದಾರೆ.
‘ರೋಹಿತ್ ಶರ್ಮಾ ಅವರು ಈವರೆಗೂ 30 ಶತಕಗಳನ್ನು ದಾಖಲಿಸಿದ್ದಾರೆ. ಆದರೆ ಕೊಹ್ಲಿ ದಾಖಲೆ ಸಮೀಪ ಬರುವ ಮತ್ತೊಬ್ಬರನ್ನು ನಾನು ಊಹಿಸಲಾರೆ. ದಾಖಲೆಯಲ್ಲಿ ಮತ್ತೊಬ್ಬ ಸಚಿನ್ ಎಂದಷ್ಟೇ ಹೇಳಬಲ್ಲೆ’ ಎಂದು ಬಣ್ಣಿಸಿದ್ದಾರೆ.
‘ಇಲ್ಲಿ ನಾನು ಕೊಹ್ಲಿಯನ್ನು ಸಚಿನ್ ಜೊತೆ ಹೋಲಿಸುತ್ತಿಲ್ಲ. ಇಬ್ಬರೂ ಬೇರೆಯದೇ ಶೈಲಿ ಹೊಂದಿರುವ ಅದ್ಭುತ ಕ್ರಿಕೆಟರ್‌ಗಳು. ಕ್ರಿಕೆಟ್‌ನ ದಿಗ್ಗಜರು. ಇಬ್ಬರಲ್ಲಿರುವ ಸಾಮ್ಯತೆ ಎಂದರೆ ತಾವು ಏನು ಮಾಡುತ್ತಿದ್ದೇವೆ ಎಂಬ ಕಲ್ಪನೆ ಈ ಎರಡೂ ಅತ್ಯುತ್ತಮ ಆಟಗಾರರಲ್ಲಿ ಕಂಡಿದ್ದೇನೆ. ನಾನು ಏನು ಆಡುತ್ತಿದ್ದೇನೆ ಎಂಬ ಅರಿವು ನನಗಿದೆ ಎಂದು ಸಚಿನ್ ಹೇಳಿದ್ದಾರೆ. ಸಚಿನ್ ನನ್ನ ಗುರು ಎಂದು ಕೊಹ್ಲಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಇವರ ಆಟವೂ ಅದೇ ಲಯದಲ್ಲಿ ಸಾಗುತ್ತಿದೆ’ ಎಂದು ವಿಶ್ವನಾಥ್ ವಿಶ್ಲೇಷಿಸಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ 50 ಶತಕ. ಟೆಸ್ಟ್ ಕ್ರಿಕೆಟ್‌ನಲ್ಲಿ 29 ಶತಕ, ಟಿ–20 ಕ್ರಿಕೆಟ್‌ನಲ್ಲಿ ಒಂದು ಶತಕ ಸೇರಿದಂತೆ 80 ಶತಕಗಳನ್ನು ಅವರು ದಾಖಲಿಸಿದ್ದಾರೆ. ಇದು 100 ಮೀರಲಿದೆ ಎಂದು ಹಿರಿಯ ಕ್ರಿಕೆಟಿಗ ಭವಿಷ್ಯ ನುಡಿದಿದ್ದಾರೆ.
ಒಂದು ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪಂದ್ಯದಲ್ಲಿ 700 ರನ್ ಗಡಿ ದಾಟಿದ ಮೊದಲ ಬ್ಯಾಟರ್ ಎಂದೆನಿಸಿಕೊಂಡರು. ಸಚಿನ್ ದಾಖಲಿಸಿರುವ 100 ಶತಕಗಳ ದಾಖಲೆಯನ್ನು ಮುರಿಯಲು ಕೊಹ್ಲಿಗೆ ಇನ್ನಷ್ಟು ಸಮಯ ಬೇಕು. ಹೆಚ್ಚು ಟೆಸ್ಟ್ ಕ್ರಿಕೆಟ್‌ಗಳು ನಡೆಯಬೇಕು. ಸದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಟೆಸ್ಟ್ ನಡೆಯಬೇಕಿದೆ. ಆದರೆ ಎಲ್ಲಾ ಪಂದ್ಯಗಳಲ್ಲೂ ಶತಕ ಸಿಡಿಸುವುದೂ ಸುಲಭದ ಕೆಲಸವಲ್ಲ. ಆದರೆ ಕೊಹ್ಲಿಯಲ್ಲಿ ಆ ಸಾಮರ್ಥ್ಯವಿದೆ. ಕಾದು ನೋಡಬೇಕು’ ಎಂದಿದ್ದಾರೆ ಜಿ.ವಿಶ್ವನಾಥ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.