ನವದೆಹಲಿ: ಈ ತಿಂಗಳ ಕೊನೆಯಲ್ಲಿ ಐರ್ಲೆಂಡ್ ಪ್ರವಾಸಕ್ಕೆ ತೆರಳಲಿರುವ ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆಯನ್ನು ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರಿಗೆ ವಹಿಸಲಾಗಿದೆ.
ಸೀತಾಂಶು ಕೋಟಕ್, ಸಾಯಿರಾಜ್ ಬಹುತುಲೆ ಮತ್ತು ಮುನೀಷ್ ಬಾಲಿ ಅವರನ್ನು ಕ್ರಮವಾಗಿ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್ ಆಗಿ ನೇಮಿಸಲಾಗಿದೆ.
ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಇತರ ಸಹಾಯಕ ಸಿಬ್ಬಂದಿ, ಟೆಸ್ಟ್ ತಂಡದ ಜತೆ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿದ್ದಾರೆ. ಇದೇ ಅವಧಿಯಲ್ಲಿ ಐರ್ಲೆಂಡ್ ಪ್ರವಾಸ ಕೂಡಾ ಆಯೋಜನೆಯಾಗಿರುವುದರಿಂದ ಬಿಸಿಸಿಐ ಈ ತೀರ್ಮಾನ ತೆಗೆದುಕೊಂಡಿದೆ.
ಐರ್ಲೆಂಡ್ ಪ್ರವಾಸದಲ್ಲಿ ಭಾರತ ತಂಡ ಜೂನ್ 26 ಮತ್ತು 28 ರಂದು ಎರಡು ಟಿ20 ಪಂದ್ಯಗಳನ್ನು ಆಡಲಿದೆ. ಈ ಸರಣಿಗೆ ಯುವ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆಯಿದೆ.
’ಈಗ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮಧ್ಯೆಯೇ ದ್ರಾವಿಡ್ ಹಾಗೂ ಸೀನಿಯರ್ ತಂಡದ ಇತರ ಸಹಾಯಕ ಸಿಬ್ಬಂದಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವರು. ಆದ್ದರಿಂದ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಬಹುತುಲೆ, ಕೋಟಕ್ ಮತ್ತು ಬಾಲಿ ಅವರೇ ಸಹಾಯಕ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುವರು‘ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.