ADVERTISEMENT

ಕ್ರಿಕೆಟ್ | ಮುಂಬೈ ಮಡಿಲಿಗೆ ಇರಾನಿ ಕಪ್

27 ವರ್ಷಗಳ ನಂತರ ಒಲಿದ ಪ್ರಶಸ್ತಿ; ತನುಷ್ ಕೋಟ್ಯಾನ್ ಅಮೋಘ ಶತಕ

ಪಿಟಿಐ
Published 5 ಅಕ್ಟೋಬರ್ 2024, 16:02 IST
Last Updated 5 ಅಕ್ಟೋಬರ್ 2024, 16:02 IST
ಇರಾನಿ ಟ್ರೋಫಿಯೊಂದಿಗೆ ಮುಂಬೈ ತಂಡದ ಆಟಗಾರರ ಸಂಭ್ರಮ –ಎಕ್ಸ್‌ ಚಿತ್ರ
ಇರಾನಿ ಟ್ರೋಫಿಯೊಂದಿಗೆ ಮುಂಬೈ ತಂಡದ ಆಟಗಾರರ ಸಂಭ್ರಮ –ಎಕ್ಸ್‌ ಚಿತ್ರ   

ಲಖನೌ: ಮುಂಬೈ ಕ್ರಿಕೆಟ್ ತಂಡವು 27 ವರ್ಷಗಳ ನಂತರ ಇರಾನಿ ಕಪ್‌ ಜಯಿಸಿತು. ತಂಡವು 15ನೇ ಬಾರಿ ಈ ಸಾಧನೆ ಮಾಡಿದೆ. 

ಶನಿವಾರ ಮುಕ್ತಾಯವಾದ ಪಂದ್ಯದಲ್ಲಿ ಮುಂಬೈ ತಂಡವು ಭಾರತ ಇತರೆ ತಂಡದ ಎದುರು ಡ್ರಾ ಸಾಧಿಸುವಲ್ಲಿ ಸಫಲವಾಯಿತು. ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ ಮುನ್ನಡೆಯ ಆಧಾರದ ಮೇಲೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಮುಂಬೈ ತಂಡವು ಕಳೆದ ಋತುವಿನಲ್ಲಿ ರಣಜಿ ಚಾಂಪಿಯನ್ ಕೂಡ ಆಗಿತ್ತು. 

ಎಂಟನೇ ಕ್ರಮಾಂಕದ ಬ್ಯಾಟರ್ ತನುಷ್ ಕೋಟ್ಯಾನ್ (ಅಜೇಯ 114; 150ಎ) ಮತ್ತು ಹತ್ತನೇ ಕ್ರಮಾಂಕದ ಮೋಹಿತ್ ಅವಸ್ತಿ (ಔಟಾಗದೆ  51; 93ಎ) ಅವರು ಮುರಿಯದ 9ನೇ ವಿಕೆಟ್ ಜೊತೆಯಾಟದಲ್ಲಿ 162 ರನ್ ಸೇರಿಸಿದರು. ಇದರಿಂದಾಗಿ ತಂಡವು ಯಾವುದೇ ಒತ್ತಡಕ್ಕೊಳಗಾಗದೇ ಪ್ರಶಸ್ತಿ ಜಯಿಸುವಂತಾಯಿತು. 

ADVERTISEMENT

ಪಂದ್ಯದ ನಾಲ್ಕನೇ ದಿನದಾಟದ (ಶುಕ್ರವಾರ) ಅಂತ್ಯಕ್ಕೆ ಮುಂಬೈ ತಂಡವು 6 ವಿಕೆಟ್‌ಗಳಿಗೆ 153 ರನ್ ಗಳಿಸಿತ್ತು. ಕೊನೆಯ ದಿನದಾಟದ ಬೆಳಿಗ್ಗೆಯೇ ಉಳಿದ ವಿಕೆಟ್‌ಗಳನ್ನು ಕಬಳಿಸಿದ ನಂತರ ಲಭಿಸುವ ಗುರಿಯನ್ನು ಬೆನ್ನಟ್ಟಿ ಜಯಿಸುವ ಭಾರತ ಇತರೆ ತಂಡದ ಯೋಚನೆ ಫಲಿಸಲಿಲ್ಲ. 

ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದ ತನುಷ್ ಎರಡನೇಯದ್ದರಲ್ಲಿಯೂ ಮಿಂಚಿದರು. ಅವರೊಂದಿಗೆ ಮೋಹಿತ್ ಕೂಡ ತಮ್ಮ ಬ್ಯಾಟಿಂಗ್ ಪ್ರತಿಭೆಯನ್ನು ತೋರಿಸಿದರು. ಇದರಿಂದಾಗಿ ತಂಡವು ಒಟ್ಟು 450 ರನ್‌ಗಳ ಮುನ್ನಡೆ ಸಾಧಿಸಿತು. ಮಧ್ಯಾಹ್ನದ ನಂತರ ಈ ಗುರಿಯನ್ನು ಬೆನ್ನತ್ತಿ ಜಯಿಸುವುದು ಅಸಾಧ್ಯ ಎಂಬುದನ್ನು ಅರಿತ ಭಾರತ ಇತರೆ ತಂಡದ ನಾಯಕ ಋತುರಾಜ್ ಗಾಯಕವಾಡ ಅವರು ಡ್ರಾ ಮಾಡಿಕೊಳ್ಳಲು ಸಮ್ಮತಿಸಿ, ಮುಂಬೈ ತಂಡದ ನಾಯಕ ಅಜಿಂಕ್ಯ ರಹಾನೆ ಅವರ ಕೈಕುಲುಕಿದರು. 

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್: ಮುಂಬೈ: 141 ಓವರ್‌ಗಳಲ್ಲಿ 537. ಭಾರತ ಇತರೆ: 110 ಓವರ್‌ಗಳಲ್ಲಿ 416. ಎರಡನೇ ಇನಿಂಗ್ಸ್: ಮುಂಬೈ: 78 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 329 (ಸರ್ಫರಾಜ್ ಖಾನ್ 17, ತನುಷ್ ಕೋಟ್ಯಾನ್ ಔಟಾಗದೆ 114, ಮೋಹಿತ್ ಅವಸ್ತಿ ಔಟಾಗದೆ 51, ಸಾರಾಂಶ್ ಜೈನ್ 121ಕ್ಕೆ6, ಮಾನವ್ ಸುತಾರ್ 78ಕ್ಕೆ2) ಫಲಿತಾಂಶ: ಡ್ರಾ. ಪಂದ್ಯದ ಆಟಗಾರ: ಸರ್ಫರಾಜ್ ಖಾನ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.