ADVERTISEMENT

ಕೆಪಿಎಲ್: ಬೆಳಗಾವಿ ಪ್ಯಾಂಥರ್ಸ್‌ಗೆ ಮೊದಲ ಗೆಲುವು

ಸ್ಟುವರ್ಟ್, ಅವಿನಾಶ್ ಆಲ್‌ರೌಂಡ್ ಆಟ

ಮಹಮ್ಮದ್ ನೂಮಾನ್
Published 25 ಆಗಸ್ಟ್ 2018, 17:21 IST
Last Updated 25 ಆಗಸ್ಟ್ 2018, 17:21 IST
ಬೆಳಗಾವಿ ಪ್ಯಾಂಥರ್ಸ್‌ ಆಟಗಾರ ಸ್ಟುವರ್ಟ್‌ ಬಿನ್ನಿ ಅವರ ಬೌಲಿಂಗ್ ಶೈಲಿ ಪ್ರಜಾವಾಣಿ ಚಿತ್ರ/ಬಿ.ಆರ್.ಸವಿತಾ
ಬೆಳಗಾವಿ ಪ್ಯಾಂಥರ್ಸ್‌ ಆಟಗಾರ ಸ್ಟುವರ್ಟ್‌ ಬಿನ್ನಿ ಅವರ ಬೌಲಿಂಗ್ ಶೈಲಿ ಪ್ರಜಾವಾಣಿ ಚಿತ್ರ/ಬಿ.ಆರ್.ಸವಿತಾ   

ಮೈಸೂರು: ನಾಯಕ ಸ್ಟುವರ್ಟ್‌ ಬಿನ್ನಿ ಮತ್ತು ಡಿ.ಅವಿನಾಶ್ ಅವರ ಆಲ್‌ರೌಂಡ್ ಆಟದ ಬಲದಿಂದಬೆಳಗಾವಿ ಪ್ಯಾಂಥರ್ಸ್ ತಂಡ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟ್ವೆಂಟಿ–20 ಕ್ರಿಕೆಟ್‌ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿತು.

ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಪ್ಯಾಂಥರ್ಸ್ ತಂಡ 22 ರನ್‌ಗಳಿಂದ ಬಳ್ಳಾರಿ ಟಸ್ಕರ್ಸ್‌ ತಂಡವನ್ನು ಮಣಿಸಿತು. ಗೆಲುವಿಗೆ 158 ರನ್‌ಗಳ ಗುರಿ ಪಡೆದಸಿ.ಎಂ.ಗೌತಮ್‌ ನೇತೃತ್ವದ ಟಸ್ಕರ್ಸ್ 18.5 ಓವರ್‌ಗಳಲ್ಲಿ 135 ರನ್‌ಗಳಿಗೆ ಅಲೌಟಾಯಿತು.

ಸಾಧಾರಣ ಗುರಿ ಮುಂದಿದೆ ಎಂದು ಅವಸರ ತೋರಿದ ಟಸ್ಕರ್ಸ್ ಅದಕ್ಕೆ ಭಾರಿ ಬೆಲೆ ತೆತ್ತಿತು. ಪ್ಯಾಂಥರ್ಸ್‌ಗೆ ಟೂರ್ನಿಯಲ್ಲಿ ದೊರೆತ ಮೊದಲ ಗೆಲುವು ಇದು. ಟಸ್ಕರ್ಸ್ ಮೂರನೇ ಸೋಲುಅನುಭವಿಸಿದ್ದು, ಸೆಮಿಫೈನಲ್ ಪ್ರವೇಶದ ಕನಸು ಅಸ್ತಮಿಸಿದೆ.

ADVERTISEMENT

ಅಬ್ಬರದ ಆರಂಭ: ಟಸ್ಕರ್ಸ್‌ ಮೊದಲ ಓವರ್‌ನಲ್ಲಿ 18 ರನ್‌ ಗಳಿಸಿ ದಿಟ್ಟ ಆರಂಭ ಪಡೆಯಿತು. ಸಿ.ಎ.ಕಾರ್ತಿಕ್ (31 ರನ್, 11 ಎಸೆತ, 4 ಬೌಂ, 2 ಸಿ.) ಬಿರುಸಿನ ಆಟವಾಡಿದರು. ಒಂದೆರಡು ವಿಕೆಟ್‌ ಬಿದ್ದರೂ ರನ್‌ ವೇಗಕ್ಕೆ ಕಡಿವಾಣ ಬೀಳಲಿಲ್ಲ. ಕಾರ್ತಿಕ್ ಔಟಾದ ಬಳಿಕ ದೇವದತ್ತ ಪಡಿಕ್ಕಲ್ (23, 19 ಎಸೆತ) ಮತ್ತು ಗೌತಮ್ (24, 23 ಎಸೆತ) ತಂಡಕ್ಕೆ ಆಸರೆಯಾದರು. ಆದರೆ ಪದೇ ಪದೇ ಬೌಲಿಂಗ್‌ನಲ್ಲಿ ಬದ
ಲಾವಣೆ ತಂದ ಬಿನ್ನಿ ಅವರು ಎದುರಾಳಿಗಳ ಮೇಲೆ ಒತ್ತಡ ಹೇರಿದರು.

10 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 89 ರನ್‌ ಗಳಿಸಿದ್ದ ಟಸ್ಕರ್ಸ್ ಬಳಿಕ ಕುಸಿತದ ಹಾದಿಹಿಡಿಯಿತು. 46 ರನ್‌ಗಳಿಗೆ ಕೊನೆಯ ಏಳು ವಿಕೆಟ್‌ಗಳನ್ನು ಕಳೆದುಕೊಂಡು ಸೋಲೊಪ್ಪಿಕೊಂಡಿತು.

ಸಂಕ್ಷಿಪ್ತ ಸ್ಕೋರ್: ಬೆಳಗಾವಿ ಪ್ಯಾಂಥರ್ಸ್, 20 ಓವರ್‌ಗಳಲ್ಲಿ 7 ವಿಕೆಟ್‌ಗೆ 157 (ಸ್ಟಾಲಿನ್ಹೂವರ್ 38, ಡಿ.ಅವಿನಾಶ್ 25, ಸ್ಟುವರ್ಟ್ ಬಿನ್ನಿ 31, ಎಂ.ನಿಧೀಶ್ 17, ಟಿ.ಪ್ರದೀಪ್ 28ಕ್ಕೆ 2, ರಿತೇಶ್ ಭಟ್ಕಳ್ 19ಕ್ಕೆ 2); ಬಳ್ಳಾರಿ ಟಸ್ಕರ್ಸ್: 18.5 ಓವರ್‌ಗಳಲ್ಲಿ 135 (ಸಿ.ಎ.ಕಾರ್ತಿಕ್ 31, ದೇವದತ್ತ ಪಡಿಕ್ಕಲ್ 23, ಸಿ.ಎಂ.ಗೌತಮ್ 24, ನಿಯಾಜ್ ನಿಸಾರ್ 23ಕ್ಕೆ 2, ಡಿ.ಅವಿನಾಶ್ 20ಕ್ಕೆ 3, ಸ್ಟುವರ್ಟ್‌ ಬಿನ್ನಿ 27ಕ್ಕೆ 2).

ಫಲಿತಾಂಶ: ಬೆಳಗಾವಿ ಪ್ಯಾಂಥರ್ಸ್‌ಗೆ 22 ರನ್‌ ಗೆಲುವು. ಪಂದ್ಯಶ್ರೇಷ್ಠ: ಸ್ಟುವರ್ಟ್ ಬಿನ್ನಿ

ಬಿನ್ನಿ ಅದ್ಭುತ ಕ್ಯಾಚ್

ಸ್ಟುವರ್ಟ್‌ ಬಿನ್ನಿ 19ನೇ ಓವರ್‌ನಲ್ಲಿ ಪ್ರದೀಪ್ ಅವರನ್ನು ಸೊಗಸಾದ ಕ್ಯಾಚ್ ಮೂಲಕ ಔಟ್ ಮಾಡಿದರು. ಅವಿನಾಶ್ ಬೌಲಿಂಗ್‌ನಲ್ಲಿ ಪ್ರದೀಪ್‌ ಬಾರಿಸಿದ ಚೆಂಡನ್ನು ಬಿನ್ನಿ ಅವರು ಡೀಪ್‌ ಮಿಡ್‌ವಿಕೆಟ್‌ ಬೌಂಡರಿ ಗೆರೆ ಬಳಿ ಮೇಲಕ್ಕೆ ನೆಗೆದು ಎಡಗೈನಲ್ಲಿ ಅದ್ಭುತವಾಗಿ ಹಿಡಿತಕ್ಕೆ ಪಡೆದುಕೊಂಡರು.

ಬ್ಲಾಸ್ಟರ್ಸ್ ಜಯಭೇರಿ

ಕೊನೆಯ ಓವರ್‌ಗಳಲ್ಲಿ ಬಿರುಸಿನ ಆಟವಾಡಿದ ಅಭಿಷೇಕ್ ಭಟ್ (ಅಜೇಯ 40, 19 ಎಸೆತ, 3 ಬೌಂಡರಿ, 3 ಸಿಕ್ಸರ್.) ಅವರು ಬೆಂಗಳೂರು ಬ್ಲಾಸ್ಟರ್ಸ್‌ ತಂಡಕ್ಕೆ ಶಿವಮೊಗ್ಗ ಲಯನ್ಸ್ ವಿರುದ್ಧ ಎರಡು ವಿಕೆಟ್‌ಗಳ ಜಯ ತಂದಿತ್ತರು.

ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಶನಿವಾರ ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ ಲಯನ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 146 ರನ್‌ ಗಳಿಸಿತು. ಬ್ಲಾಸ್ಟರ್ಸ್ ತಂಡ 19.1 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು ಗೆಲುವಿನ ಗಡಿ ದಾಟಿತು.

ಮೂರನೇ ಗೆಲುವು ಸಾಧಿಸಿದ ರಾಬಿನ್ ಉತ್ತಪ್ಪ ಬಳಗ ಏಳು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಸಂಕ್ಷಿಪ್ತ ಸ್ಕೋರ್: ಶಿವಮೊಗ್ಗ ಲಯನ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 146 (ನಿಹಾಲ್ ಉಲ್ಲಾಳ್ 34, ಕೆ.ರೋಹಿತ್ 36,ಆರ್‌.ಜೊನಾಥನ್ 37, ಅನಿರುದ್ಧ್ ಜೋಷಿ 28, ವಿ.ಕೌಶಿಕ್ 16ಕ್ಕೆ1, ಅಭಿಷೇಕ್ ಭಟ್ 16ಕ್ಕೆ 1)

ಬೆಂಗಳೂರು ಬ್ಲಾಸ್ಟರ್ಸ್: 19.1 ಓವರ್‌ಗಳಲ್ಲಿ 8 ವಿಕೆಟ್‌ಗೆ 147 (ಪವನ್ ದೇಶಪಾಂಡೆ 34, ಭರತ್ ದೇವರಾಜ್ 38, ಅಭಿಷೇಕ್ ಭಟ್ ಔಟಾಗದೆ 40, ಸೋಮಣ್ಣ 34ಕ್ಕೆ 3)

ಫಲಿತಾಂಶ: ಬ್ಲಾಸ್ಟರ್ಸ್‌ಗೆ 2 ವಿಕೆಟ್ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.