ADVERTISEMENT

ಪ್ರಶಸ್ತಿಗೆ ಬ್ಲಾಸ್ಟರ್ಸ್‌–ಬುಲ್ಸ್‌ ಸೆಣಸು

ಕೆಪಿಎಲ್‌: ಟೈಗರ್ಸ್‌ಗೆ ತಿವಿದು ಫೈನಲ್‌ ಪ್ರವೇಶಿಸಿದ ಬುಲ್ಸ್‌

ಮಹಮ್ಮದ್ ನೂಮಾನ್
Published 5 ಸೆಪ್ಟೆಂಬರ್ 2018, 19:30 IST
Last Updated 5 ಸೆಪ್ಟೆಂಬರ್ 2018, 19:30 IST
ಬಿಜಾಪುರ ಬುಲ್ಸ್‌ ತಂಡದ ಎಂ.ಜಿ. ನವೀನ್‌ ಬ್ಯಾಟಿಂಗ್‌ ವೈಖರಿ –ಪ್ರಜಾವಾಣಿ ಚಿತ್ರ/ ಸವಿತಾ ಬಿ.ಆರ್‌
ಬಿಜಾಪುರ ಬುಲ್ಸ್‌ ತಂಡದ ಎಂ.ಜಿ. ನವೀನ್‌ ಬ್ಯಾಟಿಂಗ್‌ ವೈಖರಿ –ಪ್ರಜಾವಾಣಿ ಚಿತ್ರ/ ಸವಿತಾ ಬಿ.ಆರ್‌   

ಮೈಸೂರು: ನಾಯಕ ಭರತ್‌ ಚಿಪ್ಲಿ ಮತ್ತು ಎಂ.ಜಿ.ನವೀನ್‌ ಅವರ ಭರ್ಜರಿ ಬ್ಯಾಟಿಂಗ್‌ ಬಲದಿಂದ ಹುಬ್ಬಳ್ಳಿ ಟೈಗರ್ಸ್‌ ವಿರುದ್ಧ ಒಂಬತ್ತು ವಿಕೆಟ್‌ಗಳಿಂದ ಗೆದ್ದ ಬಿಜಾಪುರ ಬುಲ್ಸ್‌ ತಂಡ ಕೆಪಿಎಲ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಫೈನಲ್‌ ಪ್ರವೇಶಿಸಿತು.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ನಡೆಯಲಿರುವ ಫೈನಲ್‌ನಲ್ಲಿ ಬುಲ್ಸ್‌ ತಂಡವು ಬೆಂಗಳೂರು ಬ್ಲಾಸ್ಟರ್ಸ್‌ ತಂಡದ ವಿರುದ್ಧ ಪೈಪೋಟಿ ನಡೆಸಲಿದೆ.

ಬುಧವಾರ ನಡೆದ ಎರಡನೇ ಸೆಮಿ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಟೈಗರ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 134 ರನ್‌ ಗಳಿಸಿದರೆ, ಬುಲ್ಸ್‌ ತಂಡ 14.5 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು ಜಯ ಸಾಧಿಸಿತು.

ADVERTISEMENT

ಆರ್‌.ವಿನಯ್‌ ಕುಮಾರ್‌ ಅವರನ್ನೊಳಗೊಂಡ ಬೌಲಿಂಗ್‌ ವಿಭಾಗದ ಮೇಲೆ ದಂಡೆತ್ತಿ ಹೋದ ಚಿಪ್ಲಿ (73, 46 ಎಸೆತ, 9 ಬೌಂ, 3 ಸಿ.) ಮತ್ತು ನವೀನ್‌ (ಔಟಾಗದೆ 62, 43 ಎಸೆತ) ತಂಡಕ್ಕೆ ನಿರಾಯಾಸ ಜಯ ತಂದಿತ್ತರು.

ಎದುರಾಳಿ ತಂಡವನ್ನು ಸಣ್ಣ ಮೊತ್ತಕ್ಕೆ ನಿಯಂತ್ರಿಸಿ ಬ್ಯಾಟ್ಸ್‌ಮನ್‌ಗಳ ಮೇಲಿನ ಹೊರೆಯನ್ನು ತಗ್ಗಿಸಿದ ಬುಲ್ಸ್‌ ತಂಡದ ಬೌಲರ್‌ಗಳಿಗೂ ಗೆಲುವಿನ ಶ್ರೇಯ ಸಲ್ಲಬೇಕು.

ಮೊದಲು ಬ್ಯಾಟ್‌ ಮಾಡಿದ ಟೈಗರ್ಸ್‌ ಉತ್ತಮ ಆರಂಭದ ಹೊರತಾಗಿಯೂ ಸವಾಲಿನ ಮೊತ್ತ ಪೇರಿಸಲು ವಿಫಲ ವಾಯಿತು. ಸ್ಪಿನ್ನರ್‌ ಕೆ.ಪಿ.ಅಪ್ಪಣ್ಣ, ಕೆ.ಸಿ.ಕಾರ್ಯಪ್ಪ ಮತ್ತು ನವೀನ್‌ ಪ್ರಭಾವಿ ಬೌಲಿಂಗ್‌ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಹುಬ್ಬಳ್ಳಿ ಟೈಗರ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 134 (ಅಭಿಷೇಕ್‌ ರೆಡ್ಡಿ 42, ಮೊಹಮ್ಮದ್ ತಾಹ 24, ಸುನಿಲ್ ಕುಮಾರ್‌ ಜೈನ್‌ 11, ಪ್ರವೀಣ್‌ ದುಬೆ 13, ಕ್ರಾಂತಿ ಕುಮಾರ್ ಔಟಾಗದೆ 24, ಕೆ.ಪಿ.ಅಪ್ಪಣ್ಣ 28ಕ್ಕೆ 2, ಸೂರಜ್‌ ಕಾಮತ್‌ 21ಕ್ಕೆ 1, ಎಂ.ಜಿ.ನವೀನ್ 36ಕ್ಕೆ 2)

ಬಿಜಾಪುರ ಬುಲ್ಸ್‌: 14.5 ಓವರ್‌ಗಳಲ್ಲಿ 1 ವಿಕೆಟ್‌ಗೆ 136 (ಭರತ್‌ ಚಿಪ್ಲಿ 73, ಎಂ.ಜಿ.ನವೀನ್ ಔಟಾಗದೆ 62)
ಫಲಿತಾಂಶ: ಬುಲ್ಸ್‌ಗೆ 9 ವಿಕೆಟ್‌ ಗೆಲುವು
ಪಂದ್ಯಶ್ರೇಷ್ಠ: ಭರತ್‌ ಚಿಪ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.