ADVERTISEMENT

ಕೆಪಿಎಲ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿ: ಬಳ್ಳಾರಿ ಟಸ್ಕರ್ಸ್‌ಗೆ ಜಯದ ಹ್ಯಾಟ್ರಿಕ್

ಕಾರ್ತಿಕ್ ಆಲ್‌ರೌಂಡ್ ಆಟ; ಅಭಿಷೇಕ್ ರೆಡ್ಡಿ ಅರ್ಧಶತಕದ ಸೊಬಗು

ಗಿರೀಶದೊಡ್ಡಮನಿ
Published 20 ಆಗಸ್ಟ್ 2019, 19:30 IST
Last Updated 20 ಆಗಸ್ಟ್ 2019, 19:30 IST
ಅಭಿಷೇಕ್ ರೆಡ್ಡಿ ಬ್ಯಾಟಿಂಗ್ ವೈಖರಿ –ಪ್ರಜಾವಾಣಿ ಚಿತ್ರ/ಇರ್ಷಾದ್ ಮಹಮ್ಮದ್
ಅಭಿಷೇಕ್ ರೆಡ್ಡಿ ಬ್ಯಾಟಿಂಗ್ ವೈಖರಿ –ಪ್ರಜಾವಾಣಿ ಚಿತ್ರ/ಇರ್ಷಾದ್ ಮಹಮ್ಮದ್   

ಬೆಂಗಳೂರು: ಬೀದರ್‌ನ ಅಭಿಷೇಕ್ ರೆಡ್ಡಿ ಮತ್ತು ಕೊಡಗಿನ ಕೊಡಂಡ ಅಜಿತ್ ಕಾರ್ತಿಕ್ ಅವರ ಶತಕದ ಜೊತೆಯಾಟದ ಬಲದಿಂದ ಬಳ್ಳಾರಿ ಟಸ್ಕರ್ಸ್‌ ತಂಡವು ಬಿಜಾಪುರ ಬುಲ್ಸ್‌ ಎದುರು 7 ವಿಕೆಟ್‌ಗಳಿಂದ ಜಯಭೇರಿ ಬಾರಿಸಿತು.

ಇದರೊಂದಿಗೆ ಹ್ಯಾಟ್ರಿಕ್ ಜಯ ಸಾಧಿಸಿದ ಸಿ.ಎಂ. ಗೌತಮ್ ನಾಯಕತ್ವದ ಬಳ್ಳಾರಿ ತಂಡದ ಪ್ಲೇ ಆಫ್ ಹಾದಿಯು ಸುಗಮವಾಗಿದೆ. ಆದರೆ ಹಾಲಿ ಚಾಂಪಿಯನ್ ಬುಲ್ಸ್‌ ತಂಡದ ಜಯದ ಖಾತೆ ತೆರೆಯುವ ಉದ್ದೇಶ ಈಡೇರಲಿಲ್ಲ. ಬುಲ್ಸ್‌ ತಂಡದ ಮೊದಲ ಪಂದ್ಯವು ಮಳೆಗೆ ರದ್ದಾಗಿತ್ತು.

ಟಾಸ್ ಗೆದ್ದ ಬಳ್ಳಾರಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬುಲ್ಸ್‌ ತಂಡವು ನಾಯಕ ಭರತ್ ಚಿಪ್ಲಿ (50; 39ಎಸೆತ, 3ಬೌಂಡರಿ, 4ಸಿಕ್ಸರ್) ಮತ್ತು ರಾಜು ಭಟ್ಕಳ (62; 43ಎಸೆತ, 6ಬೌಂಡರಿ, 3ಸಿಕ್ಸರ್) ಅವರ ಅರ್ಧಶತಕಗಳ ಬಲದಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 162 ರನ್ ಗಳಿಸಿತು.

ADVERTISEMENT

ಗುರಿ ಬೆನ್ನಟ್ಟಿದ ಬಳ್ಳಾರಿ ತಂಡಕ್ಕೆ ಅಮೋಘ ಆರಂಭ ಲಭಿಸಿತು. ಅಭಿಷೇಕ್ ರೆಡ್ಡಿ (ಔಟಾಗದೆ 62; 54ಎಸೆತ, 6ಬೌಂಡರಿ, 1ಸಿಕ್ಸರ್) ಮತ್ತು ಸಿ.ಎ. ಕಾರ್ತಿಕ್ (57; 36ಎಸೆತ, 7ಬೌಂಡರಿ, 2ಸಿಕ್ಸರ್) ಮೊದಲ ವಿಕೆಟ್‌ ಜೊತೆಯಾಟದಲ್ಲಿ 100 ರನ್ ಗಳಿಸಿದರು. ಇದರಿಂದಾಗಿ ತಂಡವು ಇನಿಂಗ್ಸ್‌ನಲ್ಲಿ ಏಳು ಎಸೆತಗಳು ಬಾಕಿಯಿರುವಾಗಲೇ ಜಯ ದಾಖಲಿಸಿತು. 18.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 163 ರನ್ ಗಳಿಸಿತು.

ಅಭಿಷೇಕ್ ಮತ್ತು ಕಾರ್ತಿಕ್ ಜೋಡಿಯು ಕೇವಲ 68 ಎಸೆತಗಳಲ್ಲಿ ನೂರು ರನ್‌ಗಳನ್ನು ಕಲೆಹಾಕಿತು. ಅದರೊಂದಿಗೆ ಬುಲ್ಸ್‌ ಬೌಲರ್‌ಗಳ ಶ್ರಮಕ್ಕೆ ತಣ್ಣೀರೆರಚಿತು.

12ನೇ ಓವರ್‌ನಲ್ಲಿ ಕಾರ್ತಿಕ್ ವಿಕೆಟ್ ಗಳಿಸಿದ ಸುನಿಲ್ ರಾಜು ಸಂಭ್ರಮಿಸಿದರು. ಹೋದ ಎರಡು ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ್ದ ದೇವದತ್ತ ಪಡಿಕ್ಕಲ್ (29 ರನ್) ಮತ್ತೊಮ್ಮೆ ಉತ್ತಮ ಕಾಣಿಕೆ ನೀಡಿದರು. ತಂಡವು ಜಯದ ಹಳಿಯಲ್ಲಿಯೇ ಸಾಗುವಂತೆ ನೋಡಿಕೊಂಡರು. ಅವರು ಔಟಾದ ನಂತರ ಕ್ರೀಸ್‌ಗೆ ಬಂದ ಕೃಷ್ಣಪ್ಪ ಗೌತಮ್ ಒಂದು ಸಿಕ್ಸರ್‌ ಎತ್ತಿದರು. ಆದರೆ, ಅವರನ್ನು ಪ್ರತೀಕ್ ಜೈನ್ ಔಟ್ ಮಾಡಿದರು. ಆದರೆ, ಹೆಚ್ಚಿನ ಆತಂಕವೇನೂ ಇರಲಿಲ್ಲ. ಅಭಿಷೇಕ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ಬುಲ್ಸ್‌ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಮೊದಲ ಓವರ್‌ನಲ್ಲಿ ಪ್ರಸಿದ್ಧ ಕೃಷ್ಣಅವರ ದಾಳಿಯಲ್ಲಿ ಎಂ.ಜಿ. ನವೀನ್ ವಿಕೆಟ್ ಕಬಳಿಸಿದರು.

ಆದರೆ ಎರಡನೇ ವಿಕೆಟ್ ಜೊತೆಯಾಟದಲ್ಲಿ ಭರತ್ ಮತ್ತು ಭಟ್ಕಳ ಸೇರಿ 84 ರನ್‌ ಸೇರಿಸಿದರು. ಇದರಿಂದಾಗಿ ತಂಡವು ಚೇತರಿಸಿಕೊಂಡಿತು. ಹೋರಾಟದ ಮೊತ್ತ ಗಳಿಸಿತು.

ಸಂಕ್ಷಿಪ್ತ ಸ್ಕೋರು: ಬಿಜಾಪುರ ಬುಲ್ಸ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 162 (ಭರತ್ ಚಿಪ್ಲಿ 50, ರಾಜು ಭಟ್ಕಳ 62, ಸುನೀಲ್ ರಾಜು 14, ಪ್ರಸಿದ್ಧ ಎಂ ಕೃಷ್ಣ 17ಕ್ಕೆ2, ಸಿ.ಎ. ಕಾರ್ತಿಕ್ 38ಕ್ಕೆ1, ಕೃಷ್ಣಪ್ಪ ಗೌತಮ್ 33ಕ್ಕೆ3) ಬಳ್ಳಾರಿ ಟಸ್ಕರ್ಸ್: 18.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 163 (ಅಭಿಷೇಕ್ ರೆಡ್ಡಿ ಔಟಾಗದೆ 58, ಸಿ.ಎ. ಕಾರ್ತಿಕ್ 57, ದೇವದತ್ತ ಪಡಿಕ್ಕಲ್ 29, ಪ್ರತೀಕ್ ಜೈನ್ 21ಕ್ಕೆ1, ಎಂ.ಜಿ. ನವೀನ್ 28ಕ್ಕೆ1, ಸುನೀಲ್ ರಾಜು 19ಕ್ಕೆ1) ಫಲಿತಾಂಶ: ಬಳ್ಳಾರಿ ಟಸ್ಕರ್ಸ್‌ಗೆ 7 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ಅಭಿಷೇಕ್ ರೆಡ್ಡಿ.

ಇಂದಿನ ಪಂದ್ಯ

ಬಿಜಾಪುರ ಬುಲ್ಸ್‌–ಮೈಸೂರು ವಾರಿಯರ್ಸ್ (ಮಧ್ಯಾಹ್ನ 3)

ಹುಬ್ಬಳ್ಳಿ ಟೈಗರ್ಸ್–ಬೆಳಗಾವಿ ಪ್ಯಾಂಥರ್ಸ್ (ಸಂಜೆ 7)

ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.