ಬೆಂಗಳೂರು: ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ‘ಮ್ಯಾಚ್ ಫಿಕ್ಸಿಂಗ್’ ಸದ್ದು ಮಾಡುತ್ತಿರುವ ಬೆನ್ನಲ್ಲೇ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲೂ (ಕೆಪಿಎಲ್) ಮೋಸದಾಟ ನಡೆದಿರುವುದು ಸಿಸಿಬಿ ತನಿಖೆಯಿಂದ ದೃಢಪಟ್ಟಿದೆ.
ಇಡೀ ಪ್ರಕರಣ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಶ್ಫಾಕ್ ತಾರ್ ಅವರ ಸುತ್ತ ತಿರುಗುತ್ತಿದ್ದು, ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ ಪಾಟೀಲ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ.
‘ಈ ವರೆಗೂ ಯಾರನ್ನೆಲ್ಲ ತನಿಖೆಗೆ ಒಳಪಡಿಸಲಾಗಿದೆ. ಪ್ರಕರಣದಲ್ಲಿ ಅವರ ಪಾತ್ರವೇನು ಎಂಬ ಬಗ್ಗೆ ಈ ಹಂತದಲ್ಲೇ ಬಹಿರಂಗಗೊಳಿಸಲು ಸಾಧ್ಯವಿಲ್ಲ. ಸದ್ಯ ಅಲಿ ಒಬ್ಬರನ್ನು ಮಾತ್ರ ಬಂಧಿಸಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಎಲ್ಲ ಮಾಹಿತಿಗಳನ್ನು ಹಂಚಿಕೊಳ್ಳಲು ಸಾಧ್ಯ’ ಎಂದು ಪಾಟೀಲ ಹೇಳಿದರು.
ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಪ್ರಕರಣ ಬಹಳ ಸೂಕ್ಷ್ಮ ಸ್ವರೂಪದ್ದಾಗಿರುವುದರಿಂದ ತನಿಖೆಯ ಮಾಹಿತಿ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಯಾವುದೇ ಒತ್ತಡಕ್ಕೆ ಒಳಗಾಗದೆ ತನಿಖೆಯನ್ನು ವೈಜ್ಞಾನಿಕವಾಗಿ ಮುಂದುವರಿಸಬೇಕೆಂಬ ಉದ್ದೇಶದಿಂದ ಪಾಟೀಲ ಅವರೇ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಕೆಪಿಎಲ್ ಪಂದ್ಯಗಳು ನಡೆಯುತ್ತಿದ್ದ ವೇಳೆಯಲ್ಲಿ ಒಂದು ತಂಡದ ಮಾಲೀಕರು, ಮ್ಯಾನೇಜರುಗಳು, ಆಟಗಾರರು ಮತ್ತೊಂದು ತಂಡದವರ ಜತೆ ಸಂಪರ್ಕದಲ್ಲಿರುವುದು ನಿಯಮದ ಪ್ರಕಾರ ನಿಷಿದ್ಧ. ಆದರೆ, ಸದ್ಯ ನಡೆದಿರುವ ತನಿಖೆಯಲ್ಲಿ ಈ ನಿಯಮ ಉಲ್ಲಂಘನೆಯಾಗಿರುವುದು ಗೊತ್ತಾಗಿದೆ.
ಸದ್ಯ ಬೆಟ್ಟಿಂಗ್ ನಡೆದಿರುವ ಮಾಹಿತಿಯನ್ನು ಕಲೆ ಹಾಕಿರುವ ಪೊಲೀಸರು, ಮ್ಯಾಚ್ ಫಿಕ್ಸಿಂಗ್ ಕೂಡಾ ನಡೆದಿದೆಯೇ ಎಂಬ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಮಂಗಳವಾರ ರಾತ್ರಿಯವರೆಗೂ ಕೆಪಿಎಲ್‌ಗೆ ಸಂಬಂಧಪಟ್ಟಂತೆ 20ಕ್ಕೂ ಹೆಚ್ಚು ಮಂದಿಯ ಹೇಳಿಕೆಯನ್ನು ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಬಂಧಿತ ಅಲಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆಯಲು ನಿರ್ಧರಿಸಿದ್ದಾರೆ.
ದುಬೈನಲ್ಲಿರುವ ಅಂತರರಾಷ್ಟ್ರೀಯ ಪಂದ್ಯಗಳ ಬುಕ್ಕಿಯೊಬ್ಬನ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದ ಅಲಿ, ಕೆಪಿಎಲ್ ಪಂದ್ಯಾವಳಿ ವೇಳೆ ಇತರ ತಂಡಗಳ ಆಟಗಾರರ ಜೊತೆ ನಿಯಮಬಾಹಿರವಾಗಿ ಸಂಪರ್ಕದಲ್ಲಿದ್ದುದು ತನಿಖೆಯಿಂದ ಗೊತ್ತಾಗಿದೆ.
ಬೆಳಗಾವಿ ಪ್ಯಾಂಥರ್ಸ್ ತಂಡದ ಬಹುತೇಕ ಎಲ್ಲ ಆಟಗಾರರನ್ನು ತನಿಖೆಗೆ ಒಳಪಡಿಸಲಾಗಿದೆ. ಇತರ ಕೆಲವು ತಂಡಗಳ ಆಟಗಾರರು ಮತ್ತು ತಂಡಗಳ ಆಡಳಿತ ಮಂಡಳಿಯವರನ್ನೂ ವಿಚಾರಣೆ ನಡೆಸಲಾಗಿದೆ. ಬೆಳಗಾವಿ ತಂಡದಲ್ಲಿದ್ದವರು ಬಿಜಾಪುರ ಬುಲ್ಸ್ ಮತ್ತು ಬೆಂಗಳೂರು ಬ್ಲಾಸ್ಟರ್ಸ್ ತಂಡದವರ ಜತೆ ಸಂಪರ್ಕದಲ್ಲಿದ್ದರು ಎನ್ನಲಾಗುತ್ತಿದೆ. ಒಂದೆರಡು ದಿನಗಳಲ್ಲೇ ಇನ್ನೂ ಕೆಲವರನ್ನು ಬಂಧಿಸುವ ಸಾಧ್ಯತೆಯೂ ಇದೆ.
ಕೆಎಸ್‍ಸಿಎಯಲ್ಲಿನ ಕೆಲವರಿಗೆ ನೋಟಿಸ್ ನೀಡಿ ಅವರ ಹೇಳಿಕೆಯನ್ನೂ ದಾಖಲಿಸಿಕೊಳ್ಳಲು ತಯಾರಿ ನಡೆದಿದೆ. ಪ್ರಮುಖ ಕೆಲವರ ಹೇಳಿಕೆಗಳನ್ನು ವಿಡಿಯೊ ಚಿತ್ರೀಕರಣ ಕೂಡ ಮಾಡಿಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಯಾರೀ ಅಲಿ ಅಶ್ಫಾಕ್ ತಾರ್
ಗುಜರಾತ್‌ನವರಾದ ಅಲಿ, ಶಿಕ್ಷಣಕ್ಕಾಗಿ ನಗರಕ್ಕೆ ಬಂದಿದ್ದು ಬಳಿಕ ದೊಡ್ಡ ಉದ್ಯಮಿಯಾಗಿ ಬೆಳೆದಿದ್ದಾರೆ. ಅರಬರ ದೇಶ ದುಬೈನಿಂದ ಅಂತರರಾಷ್ಟ್ರೀಯ ಗುಣಮಟ್ಟದ ಡ್ರೈ ಫ್ರೂಟ್ಸ್‌ಗಳನ್ನು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಈಗ ಅವರು, ದಕ್ಷಿಣ ಭಾರತದಲ್ಲೇ ಡ್ರೈ ಫ್ರೂಟ್ಸ್ ಪೂರೈಕೆದಾರರಲ್ಲಿ ಮುಂಚೂಣಿಯಲ್ಲಿದ್ದಾರೆ.
ಡ್ರೈಪ್ರೂಟ್ಸ್ ವ್ಯವಹಾರಕ್ಕಾಗಿ ತಿಂಗಳಿಗೆ ಎರಡು ಬಾರಿ ದುಬೈಗೆ ಹೋಗಿ ಬರುತ್ತಿದ್ದ ಅಲಿ ಅವರಿಗೆ, ಅಂತರರಾಷ್ಟ್ರೀಯ ಕ್ರಿಕೆಟ್ ಬೆಟ್ಟಿಂಗ್ ಜಾಲದ ಕಿಂಗ್‍ಪಿನ್‍ಗಳು ಪರಿಚಯವಾಗಿದ್ದರು. ಆ ನಂತರವೇ ಕೆಪಿಎಲ್ ಕಡೆಗೆ ಆಸಕ್ತಿ ಬೆಳೆಸಿಕೊಂಡ ಅಲಿ, ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಖರೀದಿಸಿದ್ದರು. ಬೆಟ್ಟಿಂಗ್ ದಂಧೆಗೆ ತೆರೆದುಕೊಳ್ಳಲು ಇದು ಅವಕಾಶ ಮಾಡಿಕೊಟ್ಟಿದೆ ಎನ್ನುತ್ತವೆ ಪೊಲೀಸ್ ಮೂಲಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.