ಬೆಂಗಳೂರು: ಯುವ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಗಳಿಸಿದ ಅರ್ಧಶತಕವು ವ್ಯರ್ಥವಾಗದಂತೆ ಬಳ್ಳಾರಿ ಟಸ್ಕರ್ಸ್ ಬೌಲರ್‌ಗಳು ನೋಡಿಕೊಂಡರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬಳ್ಳಾರಿ ತಂಡವು ದೇವದತ್ತ ಪಡಿಕಲ್ (70; 56ಎಸೆತ, 4ಬೌಂಡರಿ, 3ಸಿಕ್ಸರ್) ಅರ್ಧಶತಕದ ಬಲದಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 163 ರನ್ ಗಳಿಸಿತು.
ಗುರಿ ಬೆನ್ನತ್ತಿದ ಹುಬ್ಬಳ್ಳಿ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 154 ರನ್ ಗಳಿಸಿತು. ಇದರೊಂದಿಗೆ ಬಳ್ಳಾರಿ ತಂಡವು 9 ರನ್‌ಗಳಿಂದ ಜಯಿಸಿತು. ಸಿ.ಎಂ. ಗೌತಮ್ ನಾಯಕತ್ವದ ಬಳ್ಳಾ ರಿಗೆ ಇದು ಸತತ ಎರಡನೇ ಜಯ. ದೇವದತ್ತಗೆ ಇದು ಎರಡನೇ ಅರ್ಧಶತಕವಾಗಿದೆ. ಅವರು ಬೆಳಗಾವಿ ಪ್ಯಾಂಥರ್ಸ್ ಎದುರಿನ ಪಂದ್ಯದಲ್ಲಿಯೂ ದಿಟ್ಟ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಸರೆಯಾಗಿದ್ದರು.
ಈ ಪಂದ್ಯದಲ್ಲಿ ಅವರ ಆಟ ದಿಂದಾಗಿ ಆರ್. ವಿನಯಕುಮಾರ್ ನಾಯಕತ್ವದ ಹುಬ್ಬಳ್ಳಿ ಬಳಗದ ಜಯದ ಖಾತೆ ತೆರೆಯುವ ಉದ್ದೇಶ ಈಡೇರಲಿಲ್ಲ.
ಅದಕ್ಕೆ ಕಾರಣರಾಗಿದ್ದು ಬಳ್ಳಾರಿ ಸ್ಪಿನ್ನರ್ ಅಬ್ರಾರ್ ಖಾಜಿ (17ಕ್ಕೆ2) ಮತ್ತು ಮಧ್ಯಮವೇಗಿ ಸಿ.ಎ. ಕಾರ್ತಿಕ್ (19ಕ್ಕೆ3) ಅವರ ಬೌಲಿಂಗ್.
ಸವಾಲಿನ ಗುರಿಯನ್ನು ಬೆನ್ನತ್ತಿದ್ದ ಹುಬ್ಬಳ್ಳಿ ತಂಡಕ್ಕೆ ಆರಂಭದಲ್ಲಿಯೇ ಪ್ರಸಿದ್ಧ ಕೃಷ್ಣ ಪೆಟ್ಟುಕೊಟ್ಟರು. ಎರಡನೇ ಎಸೆತದಲ್ಲಿಯೇ ಮೊಹಮ್ಮದ್ ತಾಹ ಕ್ಲೀನ್‌ಬೌಲ್ಡ್ ಆದರು. ಇನ್ನೊಂದು ಬದಿಯಲ್ಲಿದ್ದ ಎಂ. ವಿಶ್ವನಾಥನ್ (30; 37ಎಸೆತ, 1ಬೌಂಡರಿ, 1ಸಿಕ್ಸರ್) ಮತ್ತು ಲವನೀತ್ ಸಿಸೊಡಿಯಾ (22; 19ಎಸೆತ, 5ಬೌಂಡರಿ) ಎರಡನೇ ವಿಕೆಟ್‌ಗೆ 34 ರನ್ ಸೇರಿಸಿದರು. ರನ್‌ಗಳಿಕೆಯ ವೇಗವೂ ತುಸು ಹೆಚ್ಚಿತ್ತು. ಐದನೇ ಓವರ್‌ನಲ್ಲಿ ಕಾರ್ತಿಕ್ ಈ ಜೊತೆಯಾಟವನ್ನು ಮುರಿದರು. ಲವನೀತ್ ಡಗೌಟ್ ಸೇರಿದರು.
ವಿಶ್ವನಾಥ್ ತಮ್ಮ ಆಟ ಮುಂದುವರಿಸಿದರು. ಅವರಿಗೆ ಕೆ.ಎಲ್. ಶ್ರೀಜಿತ್ (22 ರನ್) ಉತ್ತಮ ಜೊತೆ ನೀಡಿದರು. ಇದರಿಂದಾಗಿ ಮೂರನೇ ವಿಕೆಟ್ ಜೊತೆಯಾಟದಲ್ಲಿ 48 ರನ್ (38ಎಸೆತ) ಸೇರಿದವು. ಆಗ ತಂಡದಲ್ಲಿ ಜಯದ ಭರವಸೆ ಮೂಡಿತ್ತು. ಈ ಹಂತದಲ್ಲಿ ಬಳ್ಳಾರಿ ಎಡಗೈ ಸ್ಪಿನ್ನರ್ ಅಬ್ರಾರ್ ಖಾಜಿ ಇನಿಂಗ್ಸ್‌ಗೆ ಮಹತ್ವದ ತಿರುವು ನೀಡಿದರು.
12ನೇ ಓವರ್‌ನಲ್ಲಿ ಖಾಜಿ ಮೋಡಿಗೆ ವಿಶ್ವನಾಥನ್ ಮತ್ತು ಕೆ.ಬಿ. ಪವನ್ ಆಟ ಮುಗಿಯಿತು.
ನಂತರದ ಆಟದಲ್ಲಿ ನಾಯಕ ವಿನಯ್ (37; 24ಎಸೆತ, 1ಬೌಂಡರಿ, 2ಸಿಕ್ಸರ್) ಮತ್ತು ಪವನ್ ದುಬೆ (28 ರನ್) ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡಿದರು. ಕಾರ್ತಿಕ್, ಕೃಷ್ಣಪ್ಪ ಗೌತಮ್ ಮತ್ತು ಕೆ.ಪಿ. ಅಪ್ಪಣ್ಣ ಅವರು ಹುಬ್ಬಳ್ಳಿ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಿದರು.
ಸಂಕ್ಷಿಪ್ತ ಸ್ಕೋರು: ಬಳ್ಳಾರಿ ಟಸ್ಕರ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 163 (ಅಭಿ ಷೇಕ್ ರೆಡ್ಡಿ 24, ದೇವದತ್ತ ಪಡಿಕ್ಕಲ್ 70, ಜೀಷನ್ ಅಲಿ 25, ವಿಷ್ಣುಪ್ರಿಯನ್ 17, ಆರ್. ವಿನಯ ಕುಮಾರ್ 23ಕ್ಕೆ1, ಆದಿತ್ಯ ಸೋಮಣ್ಣ 28ಕ್ಕೆ 2, ಡೇವಿಡ್ ಮಥಾಯಿಸ್ 35ಕ್ಕೆ2).
ಹುಬ್ಬಳ್ಳಿ ಟೈಗರ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 154 (ಎಂ. ವಿಶ್ವಾನಾಥನ್ 30, ಲವನೀತ್ ಸಿಸೊಡಿಯಾ 22, ಕೆ.ಎಲ್. ಶ್ರೀಜಿತ್ 22, ಆರ್. ವಿನಯ ಕುಮಾರ್ 37, ಪ್ರವೀಣ ದುಬೆ 28, ಸಿ.ಎ. ಕಾರ್ತಿಕ್ 19ಕ್ಕೆ3, ಅಬ್ರಾರ್ ಖಾಜಿ 17ಕ್ಕೆ2, ಕೆ. ಗೌತಮ್ 37ಕ್ಕೆ1, ಪ್ರಸಿದ್ಧ ಕೃಷ್ಣ 29ಕ್ಕೆ1) ಫಲಿತಾಂಶ: ಬಳ್ಳಾರಿ ಟಸ್ಕರ್ಸ್‌ಗೆ 9 ರನ್ ಜಯ. ಪಂದ್ಯಶ್ರೇಷ್ಠ: ದೇವದತ್ತ ಪಡಿಕ್ಕಲ್.
ಇಂದಿನ ಪಂದ್ಯಗಳು
ಬಳ್ಳಾರಿ ಟಸ್ಕರ್ಸ್–ಬಿಜಾಪುರ ಬುಲ್ಸ್ (ಮಧ್ಯಾಹ್ನ 3).
ಬೆಂಗಳೂರು ಬ್ಲಾಸ್ಟರ್ಸ್–ಶಿವಮೊಗ್ಗ ಲಯನ್ಸ್ (ರಾತ್ರಿ 7)
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.