ADVERTISEMENT

ಕೆಪಿಎಲ್‌: ಅಲಿ ಬಂಧನ

* ದುಬೈ, ಮುಂಬೈ ಬುಕ್ಕಿಗಳ ಸಂಪರ್ಕ * ಅಂತಾರಾಷ್ಟ್ರೀಯ ಆಟಗಾರರೂ ಭಾಗಿ?

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 18:43 IST
Last Updated 24 ಸೆಪ್ಟೆಂಬರ್ 2019, 18:43 IST

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಕ್ರಿಕೆಟ್ ಟೂರ್ನಿ ವೇಳೆ ನಡೆದಿದೆ ಎನ್ನಲಾದ ಮ್ಯಾಚ್‌ ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ ಸಂಬಂಧ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ, ಉದ್ಯಮಿ ಅಲಿ ಅಶ್ಫಾಕ್‌ ತಾರ್ ಅವರನ್ನು ಬಂಧಿಸಿದೆ.

‘ಸೆ. 20ರಂದು ಅಲಿ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿತ್ತು. ದುಬೈ ಮತ್ತು ಮುಂಬೈಯಲ್ಲಿರುವ ಬುಕ್ಕಿಗಳ ಜೊತೆ ಸೇರಿ ಅಲಿ ಬೆಟ್ಟಿಂಗ್‌ ದಂಧೆಯಲ್ಲಿ ಭಾಗಿಯಾಗಿರುವುದು ಖಚಿತವಾಗಿರುವುದರಿಂದ ಅವರನ್ನು ಬಂಧಿಸಲಾಗಿದೆ’ ಎಂದು ಜಂಟಿ ಕಮಿಷನರ್‌ (ಅಪರಾಧ) ಸಂದೀಪ ಪಾಟೀಲ ತಿಳಿಸಿದರು.

‘ಬೆಟ್ಟಿಂಗ್‌ ಸಂಬಂಧಿಸಿದಂತೆ ಅಲಿ ಅವರನ್ನು ಬಂಧಿಸಲಾಗಿದೆ. ಮ್ಯಾಚ್‌ ಫಿಕ್ಸಿಂಗ್‌ನಲ್ಲಿಯೂ ಭಾಗಿ ಆಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಕೆಪಿಎಲ್‌ನ ಇತರ ತಂಡಗಳ ಆಟಗಾರರ ಜೊತೆಗೂ ಅಲಿ ಸಂಪರ್ಕ ಹೊಂದಿದ್ದು, ಆ ಆಟಗಾರರನ್ನೂ ವಿಚಾರಣೆ ನಡೆಸಲಾಗುವುದು’ ಎಂದೂ ಅವರು ಹೇಳಿದರು.ಜಯನಗರದಲ್ಲಿರುವ ಟೂರ್ಸ್‌ ಆ್ಯಂಡ್‌ ಟ್ರಾವೆಲ್ಸ್‌ ಕಂಪನಿ ಮಾಲೀಕರಾಗಿರುವ ಅಲಿ, ದುಬೈನಲ್ಲಿಯೂ ಶಾಖೆ ಹೊಂದಿದ್ದಾರೆ. 2017ರಲ್ಲಿ ಬೆಳಗಾವಿ ಪ್ಯಾಂಥರ್ಸ್‌ ತಂಡವನ್ನು ಅವರು ಖರೀದಿಸಿದ್ದರು. ಅದೇ ವರ್ಷ ಕೆಪಿಎಲ್‌ ಟೂರ್ನಿಯಲ್ಲಿ ಬೆಳಗಾವಿ ಪ್ಯಾಂಥರ್ಸ್‌ ತಂಡ ಚಾಂಪಿಯನ್‌ ಆಗಿತ್ತು.

ADVERTISEMENT

‘ಅಲಿ ಸಂಪರ್ಕದಲ್ಲಿದ್ದಾರೆಂದು ಶಂಕಿಸಲಾಗಿದ್ದ ಸುಮಾರು 30 ಆಟಗಾರರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಲಿ ಅವರ ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ನಲ್ಲಿರುವ ಮಾಹಿತಿಯ ಆಧಾರದಲ್ಲಿ ಈ ಆಟಗಾರರನ್ನು ವಿಚಾರಣೆ ನಡೆಸಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಆಟಗಾರರಿಗೆ ವೈಡ್ ಬಾಲ್ ಮತ್ತು ನೋ ಬಾಲ್ ಎಸೆಯುವಂತೆ ಹೇಳಿ ಅಲಿ ‘ಸ್ಪಾಟ್‌ ಫಿಕ್ಸಿಂಗ್’ ಮಾಡಿಸುತ್ತಿದ್ದರು. ಅಲಿ ನಡೆಸುತ್ತಿದ್ದ ಫಿಕ್ಸಿಂಗ್‌ನಲ್ಲಿ ಸ್ಥಳೀಯ ಆಟಗಾರರೊಂದಿಗೆ ಇಬ್ಬರು ಅಂತರರಾಷ್ಟ್ರೀಯ ಆಟಗಾರರು ಭಾಗಿಯಾಗಿದ್ದಾರೆ. ಫಿಕ್ಸಿಂಗ್ ಬಗ್ಗೆ ಕೆಲವು ರಣಜಿ ಆಟಗಾರರಿಗೆ ಮಾಹಿತಿ ಇತ್ತು. ಅಪಾರ ಪ್ರಮಾಣದಲ್ಲಿ ಬೆಟ್ಟಿಂಗ್ ಕಟ್ಟಿ ಹಣ ಸಂಪಾದಿಸಿದ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ’ ಎಂದೂ ಮೂಲಗಳು ಹೇಳಿವೆ. ಉತ್ತರ ಕರ್ನಾಟಕ ಭಾಗದ ಆಟಗಾರರೊಂದಿಗೆ ಸಂಪರ್ಕ ಹೊಂದಿದ್ದ ಅಲಿ, ಆ ಆಟಗಾರರಿಗೆ ಇಂದಿರಾ ನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ ವಸತಿ ವ್ಯವಸ್ಥೆ ಮಾಡಿ ಪಾರ್ಟಿ, ಹಣ ನೀಡಿ ಫಿಕ್ಸಿಂಗ್ ನಡೆಸುತ್ತಿದ್ದರು. 20ಕ್ಕೂ ಹೆಚ್ಚು ಆಟಗಾರರು ಅಲಿಯ ಜಾಲದಲ್ಲಿದ್ದು, ಅವರು ಎಲ್ಲ ತಂಡಗಳಲ್ಲೂ ಇದ್ದಾರೆ ಎಂದೂ ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.