ADVERTISEMENT

ಕೆಪಿಎಲ್ ಸಹವಾಸವೇ ಸಾಕು: ಕೆಎಸ್‌ಸಿಎ ವಿರುದ್ಧ ಫ್ರ್ಯಾಂಚೈಸ್‌ಗಳ ಬೇಸರ

ಫಿಕ್ಸಿಂಗ್ ಪ್ರಕರಣ

ಗಿರೀಶದೊಡ್ಡಮನಿ
Published 30 ನವೆಂಬರ್ 2019, 18:40 IST
Last Updated 30 ನವೆಂಬರ್ 2019, 18:40 IST
ಹೋದ ಆಗಸ್ಟ್‌ನಲ್ಲಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಉದ್ಘಾಟನೆ ಸಮಾರಂಭದಲ್ಲಿ ತಂಡಗಳ ಮಾಲೀಕರು, ನಾಯಕರು, ಆಗಿನ ಕೆಎಸ್‌ಸಿಎ ಪದಾಧಿಕಾರಿಗಳು ಇದ್ದಾರೆ
ಹೋದ ಆಗಸ್ಟ್‌ನಲ್ಲಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಉದ್ಘಾಟನೆ ಸಮಾರಂಭದಲ್ಲಿ ತಂಡಗಳ ಮಾಲೀಕರು, ನಾಯಕರು, ಆಗಿನ ಕೆಎಸ್‌ಸಿಎ ಪದಾಧಿಕಾರಿಗಳು ಇದ್ದಾರೆ   

ಬೆಂಗಳೂರು: ‘ಯುವಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದು ನಮ್ಮ ಉದ್ದೇಶವಾಗಿತ್ತು. ಅದಕ್ಕಾಗಿ ಈ ಟೂರ್ನಿಗೆ ದುಡ್ಡು ಹಾಕಿದ್ದೆವು. ಆದರೆ ಈಗ ನಮ್ಮ ಜೀವಮಾನದಲ್ಲಿಯೇ ಆಗದಂತಹ ಅವಮಾನವನ್ನು ಅನುಭವಿಸಬೇಕಿದೆ. ಯಾರೋ ಕೆಲವರು ಮಾಡಿದ ತಪ್ಪಿಗೆ ನಮ್ಮೆಲ್ಲ ರನ್ನೂ ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ. ಭವಿಷ್ಯದಲ್ಲಿ ಈ ಟೂರ್ನಿ ನಡೆಯದಿದ್ದರೇ ಒಳ್ಳೆಯದು....‌’

– ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯಲ್ಲಿ ಆಡುವ ಫ್ರ್ಯಾಂಚೈಸ್‌ ಒಂದರ ಸಹಮಾಲೀಕರ ಬೇಸರ ತುಂಬಿದ ಮಾತುಗಳು ಇವು.

‘ನಮ್ಮ ಮಾಲೀಕರು ದೊಡ್ಡ ಉದ್ಯಮಿಗಳು. ಬಹಳ ಅಸ್ಥೆಯಿಂದ ಆಟಗಾರರನ್ನು ನೋಡಿಕೊಂಡಿದ್ದಾರೆ. ಆದರೆ ಅವರು ಇದೇ ಮೊದಲ ಬಾರಿ ಪೊಲೀಸ್‌ ಠಾಣೆಯ ಮೆಟ್ಟಿಲೇರಬೇಕಿದೆ. ಇದರಿಂದ ಬಹಳ ಆಘಾತಕ್ಕೆ ಒಳಗಾಗಿದ್ದಾರೆ. ಕೆಪಿಎಲ್ ಸಹವಾಸವೇ ಬೇಡ ಎನ್ನುತ್ತಿದ್ದಾರೆ’ ಎಂದು ಉತ್ತರ ಕರ್ನಾಟಕ ಮೂಲದ ತಂಡವೊಂದರ ವ್ಯವಸ್ಥಾಪಕರು ಬೇಸರ ವ್ಯಕ್ತಪಡಿಸುತ್ತಾರೆ.

ADVERTISEMENT

2017ರಿಂದ ಇಲ್ಲಿಯವರೆಗೆ ನಡೆದಿರುವ ಮೂರು ಟೂರ್ನಿಗಳಲ್ಲಿ ಮೋಸದಾಟ ನಡೆದಿರುವ ಬಗ್ಗೆ ಕೇಂದ್ರ ಅಪರಾಧ ದಳ (ಸಿಸಿಬಿ) ಸಂಶಯ ವ್ಯಕ್ತಪಡಿಸಿದೆ. ಬೆಳಗಾವಿ ಪ್ಯಾಂಥರ್ಸ್‌ ತಂಡದ ಮಾಲೀಕ ಅಲಿ ಅಶ್ಫಾಕ್ ತಾರ್‌, ಕ್ರಿಕೆಟಿಗರಾದ ಸಿ.ಎಂ. ಗೌತಮ್, ಅಬ್ರಾರ್ ಖಾಜಿ, ಎಂ.ವಿಶ್ವನಾಥನ್, ನಿಶಾಂತ್ ಸಿಂಗ್ ಶೇಖಾವತ್, ಕೋಚ್ ವಿನೂ ಪ್ರಸಾದ್ ಸೇರಿದಂತೆ ಎಂಟು ಮಂದಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಹೋದ ಎರಡು ತಿಂಗಳಿನಿಂದ ತನಿಖೆ ನಡೆಸುತ್ತಿರುವ ಸಿಸಿಬಿ ಕೆಪಿಎಲ್‌ ಬೆಟ್ಟಿಂಗ್ ನಂಟು ಐಪಿಎಲ್ ಮತ್ತು ಅಂತರರಾಷ್ಟ್ರೀಯ ಬುಕ್ಕಿಗಳೊಂದಿಗೆ ಇದೆ ಎಂದಿದ್ದಾರೆ.

ಅದಕ್ಕಾಗಿಯೇ ಆ ಎಲ್ಲ ಟೂರ್ನಿಗಳ ವಿಡಿಯೊ, ಆಟಗಾರರ ಚಲನವಲನಗಳ ದಾಖಲೆಗಳನ್ನು ಸಲ್ಲಿಸುವಂತೆ ಫ್ರ್ಯಾಂಚೈಸ್‌ಗಳಿಗೆ ನೋಟಿಸ್ ಕೂಡ ಜಾರಿಗೊಳಿಸಲಾಗಿದೆ.

ನೂರಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿ ಮಾಹಿತಿ ಕಲೆಹಾಕುತ್ತಿದೆ. ಇದರಿಂದಾಗಿ ತಂಡಗಳ ಮಾಲೀಕರು ಹುಬ್ಬಳ್ಳಿ ಟೈಗರ್ಸ್‌, ಬಿಜಾಪುರ ಬುಲ್ಸ್, ಶಿವಮೊಗ್ಗ ಲಯನ್ಸ್, ಮೈಸೂರು ವಾರಿಯರ್ಸ್‌ ತಂಡಗಳ ಮಾಲೀಕ, ಅಧಿಕಾರಿಗಳ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದರು.

‘ಇಷ್ಟಕ್ಕೆ ಕೆಲಸ ಮುಗಿದಿಲ್ಲ. ಈ ಮೂರು ವರ್ಷಗಳಲ್ಲಿ ನಮ್ಮ ತಂಡದ ಕಾರ್ಯಚಟುವಟಿಕೆ ಅಂಗವಾಗಿ ಸಂಚರಿಸಿದ ಊರುಗಳು, ತಂಗಿದ ಹೋಟೆಲ್‌ಗಳು, ಔತಣಕೂಟಗಳನ್ನು ಏರ್ಪಡಿಸಿದ ಜಾಗಗಳ ಮಾಹಿತಿಗಳನ್ನು ಸಂಗ್ರಹಿಸಿ ಕೊಡಬೇಕಿದೆ. ಅದಕ್ಕಾಗಿ ಆಯಾ ಜಾಗಗಳಿಗೆ ಹೋಗಿ ಬರುವುದಿದೆ. ಪ್ರತಿ ವರ್ಷ ಕೆಪಿಎಲ್ ಮುಗಿದ ಮೇಲೆ ನಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದೆವು. ಒಂದು ಋತುವಿನಲ್ಲಿ ಹೆಚ್ಚೆಂದರೆ ಮೂರು ತಿಂಗಳು ಕೆಪಿಎಲ್‌ಗಾಗಿ ಶ್ರಮಿಸುತ್ತಿದ್ದೆವು ಅಷ್ಟೇ. ಆದರೆ ಈ ಬಾರಿ ನಮ್ಮ ವೈಯಕ್ತಿಕ ಕಾರ್ಯಗಳೆಲ್ಲ ನಿಂತುಹೋಗಿವೆ. ಕ್ರಿಕೆಟ್‌ ನಮಗೆ ಹಣಗಳಿಕೆಯ ಮೂಲವಲ್ಲ. ಕ್ರಿಕೆಟ್‌ನೊಂದಿಗೆ ನಂಟು ಉಳಿಸಿಕೊಳ್ಳುವ ಆಸೆಯಷ್ಟೇ ಇದೆ’ ಎಂದು ತಂಡವೊಂದರ ವ್ಯವಸ್ಥಾಪಕರೊಬ್ಬರು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

‘ಟೂರ್ನಿಯಲ್ಲಿ ಮೋಸದಾಟಗಳು ನಡೆಯುವ ಕುರಿತು ಈ ಹಿಂದೆಯೂ ಕೆಎಸ್‌ಸಿಎಗೆ ಮಾಹಿತಿಗಳು ಇದ್ದವೆಂದು ಈಗ ಕೆಲವು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಆಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೆ, ಇವತ್ತು ನಾವು ತಲೆತಗ್ಗಿಸುವ ಸ್ಥಿತಿ ಬರುತ್ತಿರಲಿಲ್ಲ’ ಎಂದು ತಂಡದ ಕೋಚ್ ಒಬ್ಬರು ಆಕ್ರೋಶ
ವ್ಯಕ್ತಪಡಿಸುತ್ತಾರೆ.

‘ಕೆಎಸ್‌ಸಿಎ, ಫ್ರ್ಯಾಂಚೈಸ್‌ ಮಾಲೀ ಕರು, ಸಿಬ್ಬಂದಿಗಳಿಗೆ ಎಲ್ಲ ಗೊತ್ತಿದ್ದೂ ಮೌನವಾಗಿದ್ದಾರೆ. ಅದಕ್ಕಾಗಿಯೇ ಈಗ ಅವರೆಲ್ಲರಿಂದ ಮಾಹಿತಿ ಕೇಳಲಾಗಿದೆ’ ಎಂದು ಈ ಹಿಂದೆ ಪೊಲೀಸ್ ಆಯುಕ್ತ ಭಾಸ್ಕರರಾವ್ ಮಾಧ್ಯಮಗೋಷ್ಠಿಯಲ್ಲೇ ಹೇಳಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ, ‘ಕೆಪಿಎಲ್‌ ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಈ ತನಿಖೆಯು ಮುಗಿದ ನಂತರವೇ ಕೆಪಿಎಲ್ ಟೂರ್ನಿಯನ್ನು ಮರಳಿ ಆರಂಭಿಸಬೇಕೋ ಬೇಡವೋ ಎಂಬುದರ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷಾರ್ಹರು. ಕ್ರಿಕೆಟ್‌ನ ಹಿತಾಸಕ್ತಿ ನಮಗೆ ಮುಖ್ಯ. ಇದುವರೆಗೂ ಯಾವ ಫ್ರ್ಯಾಂಚೈಸ್‌ ಮಾಲೀಕರೂ ನಮ್ಮ ಬಳಿ ಏನೂ ಹೇಳಿಲ್ಲ. ಒಮ್ಮೆ ತನಿಖೆ ಮುಗಿದ ಮೇಲೆ ಚರ್ಚಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.