ADVERTISEMENT

ಕೆಪಿಎಲ್‌: ಮೈಸೂರಿನಲ್ಲಿ ಶನಿವಾರದದಿಂದ ಪಂದ್ಯಗಳು ಆರಂಭ

ಹುಬ್ಬಳ್ಳಿಯಿಂದ ಆರು ಪಂದ್ಯಗಳು ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 18:20 IST
Last Updated 23 ಆಗಸ್ಟ್ 2018, 18:20 IST
ಕೆಪಿಎಲ್‌ ಪಂದ್ಯಗಳ ಆಯೋಜನೆಗೆ ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣ ಸಜ್ಜಾಗಿದೆ
ಕೆಪಿಎಲ್‌ ಪಂದ್ಯಗಳ ಆಯೋಜನೆಗೆ ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣ ಸಜ್ಜಾಗಿದೆ   

ಮೈಸೂರು: ಕರ್ನಾಟಕ ಪ್ರೀಮಿಯರ್‌ ಲೀಗ್ (ಕೆಪಿಎಲ್) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿ ನಿಗದಿತ ವೇಳಾಪಟ್ಟಿಗಿಂತ ಮುಂಚಿತವಾಗಿಯೇ ಮೈಸೂರಿಗೆ ಕಾಲಿಡಲಿದ್ದು, ಶನಿವಾರದಿಂದ ಪಂದ್ಯಗಳು ಆರಂಭವಾಗಲಿವೆ.

ಈ ಮುಂಚಿನ ವೇಳಾಪಟ್ಟಿಯಂತೆ ಮೈಸೂರಿನಲ್ಲಿ ಆಗಸ್ಟ್‌ 28ರಿಂದ ಪಂದ್ಯಗಳು ಆರಂಭವಾಗಬೇಕಿತ್ತು. ಆದರೆ, ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ಆರು ಪಂದ್ಯಗಳನ್ನು ಮಳೆಯ ಕಾರಣ ಮೈಸೂರಿಗೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಆ.25ರಿಂದಲೇ ಪಂದ್ಯಗಳು ನಡೆಯಲಿವೆ.

ಹುಬ್ಬಳ್ಳಿಯಲ್ಲಿ 11 ಪಂದ್ಯಗಳನ್ನು ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಎರಡು ಪಂದ್ಯಗಳು ಮಾತ್ರ ನಡೆದಿದ್ದು, ಮೂರು ಪಂದ್ಯಗಳು ಮಳೆಯಿಂದ ರದ್ದಾಗಿವೆ. ಇನ್ನುಳಿದಿರುವ ಪಂದ್ಯಗಳನ್ನು ಮೈಸೂರಿನಲ್ಲಿ ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ನಿರ್ಧರಿಸಿದೆ.

ADVERTISEMENT

ಈ ಮೊದಲಿನ ವೇಳಾಪಟ್ಟಿಯಂತೆ ನಗರದ ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣವು ಎರಡು ಸೆಮಿಫೈನಲ್‌ ಮತ್ತು ಫೈನಲ್‌ ಸೇರಿದಂತೆ ಒಟ್ಟು 10 ಪಂದ್ಯಗಳಿಗೆ ಆತಿಥ್ಯ ವಹಿಸಬೇಕಿತ್ತು. ಇದೀಗ 16 ಪಂದ್ಯಗಳನ್ನು ಆಯೋಜಿಸುವ ಅವಕಾಶ ಮೈಸೂರಿಗೆ ಲಭಿಸಿದೆ.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಸಿದ್ಧತೆಗಳು ಭರದಿಂದ ನಡೆದಿದ್ದು, ಸ್ಪೋರ್ಟಿಂಗ್‌ ಪಿಚ್‌ ಸಿದ್ಧಪಡಿಸಲಾಗಿದೆ. ನಗರದಲ್ಲಿ ಕೆಲವೊಮ್ಮೆ ತುಂತುರು ಮಳೆಯಾಗುತ್ತಿದೆಯಾದರೂ, ಪಂದ್ಯಗಳಿಗೆ ಅಡ್ಡಿಯಾಗದು ಎಂಬ ವಿಶ್ವಾಸದಲ್ಲಿ ನಗರದ ಕ್ರಿಕೆಟ್‌ ಪ್ರೇಮಿಗಳಿದ್ದಾರೆ.

ಹುಬ್ಬಳ್ಳಿಯಿಂದ ಪಂದ್ಯಗಳು ಸ್ಥಳಾಂತರಗೊಂಡಿರುವುದರಿಂದ ಮೈಸೂರಿನಲ್ಲಿ ಶನಿವಾರದಿಂದಲೇ ಪಂದ್ಯಗಳು ನಡೆಯಲಿವೆ ಎಂದು ಕೆಎಸ್‌ಸಿಎ ಮೈಸೂರು ವಲಯ ನಿಮಂತ್ರಕ ಎಸ್‌.ಬಾಲಚಂದರ್ ತಿಳಿಸಿದರು.

ಚುನಾವಣೆ ದಿನ ಎರಡು ಪಂದ್ಯ: ಪಾಲಿಕೆ ಚುನಾವಣೆ ನಡೆಯುವ ಆಗಸ್ಟ್‌ 31ರಂದು ಎರಡು ಪಂದ್ಯಗಳು ನಡೆಯಲಿವೆ. ಈ ಹಿಂದಿನ ವೇಳಾಪಟ್ಟಿಯಂತೆ ಆ.30 ಮತ್ತು 31ರಂದು ಯಾವುದೇ ಪಂದ್ಯಗಳಿರಲಿಲ್ಲ. ಚುನಾವಣೆ ದಿನ ಶಾಂತಿ, ಸುವ್ಯವಸ್ಥೆ ಕಾಪಾಡುವ ಜತೆಗೆ ಪಂದ್ಯಕ್ಕೆ ಭದ್ರತೆ ಒದಗಿಸಬೇಕಾದ ಅನಿವಾರ್ಯತೆ ಪೊಲೀಸರಿಗೆ ಎದುರಾಗಿದೆ.

ಶನಿವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್–ಬಳ್ಳಾರಿ ಟಸ್ಕರ್ಸ್ ತಂಡಗಳು ಪೈಪೋಟಿ ನಡೆಸಲಿವೆ. ಎರಡನೇ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್– ಬೆಂಗಳೂರು ಬ್ಲಾಸ್ಟರ್ಸ್ ಎದುರಾಗಲಿವೆ. ಮೈಸೂರು ವಾರಿಯರ್ಸ್‌ ತಂಡದದವರು ಆ.26 ರಂದು ತವರಿನಲ್ಲಿ ಮೊದಲ ಪಂದ್ಯ ಆಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.