ಬೆಂಗಳೂರು: ಆಗಸ್ಟ್ 15ರಿಂದ ಆರಂಭವಾಗಲಿರುವ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಅನುಭವಿ ಆಟಗಾರ ರಾಬಿನ್ ಉತ್ತಪ್ಪ ಕಣಕ್ಕಿಳಿಯಲಿದ್ದಾರೆ.
ಹೋದ ವರ್ಷ ರಣಜಿ ಟ್ರೋಫಿ ಟೂರ್ನಿಯಲ್ಲಿ ರಾಬಿನ್ ಅವರು ಸೌರಾಷ್ಟ್ರ ತಂಡದ ಪರ ಆಡಿದ್ದರು. ಶನಿವಾರ ನಡೆಯಲಿರುವ ಕೆಪಿಎಲ್ ಟೂರ್ನಿಯ ಹರಾಜು ಪ್ರಕ್ರಿಯೆಯ ‘ಎ’ ಗುಂಪಿನಲ್ಲಿ ರಾಬಿನ್ ಉತ್ತಪ್ಪ ಇದ್ದಾರೆ. ಆದರೆ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ ಭಾರತ ತಂಡಕ್ಕೆ ಆಯ್ಕೆಯಾಗಿರುವ ಕರುಣ್ ನಾಯರ್ ಅವರು ಕೆಪಿಎಲ್‌ನಲ್ಲಿ ಆಡುವುದಿಲ್ಲ.
ಗುರುವಾರ ಸಂಜೆ ಕೆಎಸ್‌ಸಿಎನಲ್ಲಿ ನಡೆದ ಕೆಪಿಎಲ್ ಟೂರ್ನಿಗೆ ಅಧಿಕೃತ ಚಾಲನೆ ಕಾರ್ಯಕ್ರಮದಲ್ಲಿ ಜಂಟಿ ಕಾರ್ಯದರ್ಶಿ ಸಂತೋಷ್ ಮೆನನ್ ಈ ವಿಷಯ ತಿಳಿಸಿದರು.
‘ರಾಬಿನ್ ಕರ್ನಾಟಕದವರು ಮತ್ತು ಕೆಎಸ್‌ಸಿಎಯ ನೋಂದಾಯಿತ ಆಟಗಾರ. ಸೌರಾಷ್ಟ್ರ ಪರ ಆಡಲು ಅವರು ನಮ್ಮ ಸಂಸ್ಥೆಯಿಂದ ನಿರಾಕ್ಷೇಪಣ ಪತ್ರ ಪಡೆದಿದ್ದರು. ಅವರು ಈ ರಾಜ್ಯದ ನಿವಾಸಿ ಆಗಿರುವುದರಿಂದ ಕೆಪಿಎಲ್‌ನಲ್ಲಿ ಆಡಲು ಅರ್ಹರಾಗಿದ್ದಾರೆ. ಈ ಹಿಂದೆ ಅಮಿತ್ ವರ್ಮಾ, ನಿತಿನ್ ಭಿಲ್ಲೆ, ಯರೇಗೌಡ ಅವರು ಇದೇ ರೀತಿ ಆಡಿದ್ದರು’ಎಂದು ಸಂತೋಷ್ ಮೆನನ್ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಎಸ್‌ಸಿಎ ಅಧ್ಯಕ್ಷ ಸಂಜಯ್ ದೇಸಾಯಿ, ‘ರಾಜ್ಯದ ಗದಗ, ಕಾರವಾರ ಸೇರಿದಂತೆ ಹಲವೆಡೆ ಕ್ರಿಕೆಟ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಇದೆ. ಕೆಪಿಎಲ್‌ನಿಂದ ಗ್ರಾಮೀಣ ಪ್ರದೇಶದ ಆಟಗಾರರಿಗೆ ಉತ್ತಮ ವಕಾಶ ಸಿಗುತ್ತಿದೆ. ಈ ಸಲವೂ
ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಪಂದ್ಯಗಳು ನಡೆಯಲಿವೆ’ ಎಂದರು.
ಈ ಸಂದರ್ಭದಲ್ಲಿ ಹಿರಿಯ ಕ್ರಿಕೆಟಿಗರಾದ ಜಿ.ಆರ್. ವಿಶ್ವನಾಥ್, ಸೈಯದ್ ಕಿರ್ಮಾನಿ, ಬಿ.ಎಸ್. ಚಂದ್ರಶೇಖರ್, ಸದಾನಂದ ವಿಶ್ವನಾಥ್, ಹಂಗಾಮಿ ಕಾರ್ಯದರ್ಶಿ ಸುಧಾಕರ್ ರಾವ್, ಕೆಪಿಎಲ್ ಪ್ರಚಾರ ರಾಯಭಾರಿ, ಚಿತ್ರನಟಿ ರಾಗಿಣಿ ದ್ವಿವೇದಿ ಹಾಜರಿದ್ದರು.
ಸುದೀಪ್‌ಗೆ ರೋನಿತ್ ಎಸೆತದ ನೆನಪು
‘ಆ ಪಂದ್ಯದಲ್ಲಿ ರೋನಿತ್ ಮೋರೆ ಅವರ ಎಸೆತವನ್ನು ಬೌಂಡರಿಗೆ ಹೊಡೆದಿದ್ದೆ. ನಂತರದ ಎಸೆತವನ್ನು ನನ್ನ ಕಣ್ಣಿಗೆ ಕಾಣದಷ್ಟು ವೇಗವಾಗಿ ದಾಟಿ ಹೋಗಿತ್ತು. ನಂತರ ಒಂದು, ಎರಡು ರನ್ ಗಳಿಸಿ ಆಡಿದ್ದೆ’–
ಚಿತ್ರನಟ ಸುದೀಪ್ ಅವರು ಕೆಪಿಎಲ್ ಆಡಿದ ದಿನಗಳನ್ನು ನೆನಪಿಸಿಕೊಂಡಿದ್ದು ಹೀಗೆ. ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಆರಂಭದ ಟೂರ್ನಿಗಳಲ್ಲಿ ಆಡಿದ್ದೆ. ಚಿತ್ರರಂಗದಿಂದ ಹೊರಗೆ ವಿಭಿನ್ನ ಅನುಭವ ಮತ್ತು ಖ್ಯಾತಿ ಗಳಿಸಿಕೊಟ್ಟ ಟೂರ್ನಿ ಇದು. ಕರ್ನಾಟಕದಲ್ಲಿ ಉತ್ತಮ ಆಟಗಾರರಿದ್ದಾರೆ. ಅವರ ಸಾಮಿಪ್ಯ ಲಭಿಸಿದ್ದು ನನಗೆ ಖುಷಿ ಕೊಟ್ಟಿದೆ. ಕೆಪಿಎಲ್ ಪಂದ್ಯಗಳನ್ನು ಟಿವಿ. ಮೊಬೈಲ್ ಆ್ಯಪ್‌ಗಳಲ್ಲಿ ತಪ್ಪದೇ ನೋಡುತ್ತೇನೆ. ಅಷ್ಟೊಂದು ಮಧುರ ನಂಟು ಬೆಸೆದುಕೊಂಡಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.