ADVERTISEMENT

ಮೈಸೂರು: ಕಣ್ತುಂಬ ಕೆಪಿಎಲ್‌ ಪ್ರೀತಿ...

ಕೆ.ಓಂಕಾರ ಮೂರ್ತಿ
Published 27 ಆಗಸ್ಟ್ 2018, 19:30 IST
Last Updated 27 ಆಗಸ್ಟ್ 2018, 19:30 IST
ಕ್ರಿಕೆಟ್‌
ಕ್ರಿಕೆಟ್‌   

ಕ್ರಿಕೆಟ್‌ ಪ್ರಿಯರಿಗೆ ಮತ್ತೆ ಸುಗ್ಗಿ ಕಾಲ. ಚುಟುಕು ಕ್ರಿಕೆಟ್‌ನ ಪ್ರೀತಿಯನ್ನು ಕಣ್ತುಂಬಿಕೊಳ್ಳುವ ಸಮಯ. ಕ್ರಿಕೆಟ್‌ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಅದೊಂದು ಭಾವನೆಗಳ ಬಿಂಬ. ಹೃದಯಗಳನ್ನು ಬೆಸೆಯುವ ಸೇತುವೆ. ಮನಸ್ಸು, ಹೃದಯಗಳಿಗೆ ಖುಷಿ ನೀಡುವ ಸಂಗಾತಿ.

ಸಾಂಸ್ಕೃತಿಕ ನಗರಿಯಲ್ಲಿ ಈಗ ಕ್ರಿಕೆಟ್‌ನದ್ದೇ ಧಮಾಕಾ. ಹೊಡಿಬಡಿ ಆಟದ ರೋಮಾಂಚನ. ಅದಕ್ಕೆ ಕಾರಣ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿ. ಸೆಪ್ಟೆಂಬರ್‌ 6ರವರೆಗೆ ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಕ್ರಿಕೆಟ್‌ನದ್ದೇ ಧ್ಯಾನ. ನಗರದ ವಿವಿಧೆಡೆ ಕೆಪಿಎಲ್‌ ಟೂರ್ನಿ ಹಾಗೂ ಆತಿಥೇಯ ವಾರಿಯರ್ಸ್‌ ಜಾಹೀರಾತುಗಳು ರಾರಾಜಿಸುತ್ತಿವೆ.

ಈ ಬಾರಿ ಮೈಸೂರಿಗೆ ಹೆಚ್ಚುವರಿ ಪಂದ್ಯಗಳು ಲಭಿಸಿವೆ. ಹುಬ್ಬಳ್ಳಿಯಲ್ಲಿ ಮಳೆಯ ಕಾರಣ ಕೆಲ ಪಂದ್ಯಗಳನ್ನು ಅರಮನೆಗಳ ನಗರಿಗೆ ಸ್ಥಳಾಂತರಿಸಲಾಗಿದೆ. ಹೀಗಾಗಿ, ಅಭಿಮಾನಿಗಳ ಪಾಲಿಗೆ ಸಹಜವಾಗಿಯೇ ಖುಷಿ ತಂದಿದೆ. ಈಗ ಮೈಸೂರು ಮಹಾನಗರ ಪಾಲಿಕೆಗೆ ಚುನಾವಣೆ ಕೂಡ ನಡೆಯುತ್ತಿದೆ. ಅತ್ತ ಪ್ರಚಾರದ ಕಾವು ಜೋರಾಗಿದ್ದರೆ, ಇತ್ತ ಬೌಂಡರಿ, ಸಿಕ್ಸರ್‌ಗಳ ಸುರಿಮಳೆ. ಮತದಾನದ ದಿನದಂದೇ ಎರಡು ಪಂದ್ಯಗಳು ನಡೆಯಲಿವೆ. ಈ ಮೊದಲಿನ ವೇಳಾಪಟ್ಟಿಯಲ್ಲಿ ಆ ದಿನ ಪಂದ್ಯಗಳು ಇರಲಿಲ್ಲ.

ADVERTISEMENT

ನಿಜ, ಎರಡು ವರ್ಷಗಳ ಹಿಂದೆ ಕಾವೇರಿ ನದಿ ನೀರಿನ ಗಲಾಟೆ ವಿಚಾರದಲ್ಲಿ ಕೆಪಿಎಲ್‌ ಪಂದ್ಯಗಳನ್ನು ಮೈಸೂರಿನಿಂದ ಹುಬ್ಬಳ್ಳಿಗೆ ಸ್ಥಳಾಂತರಿಸಲಾಗಿತ್ತು. ಆಗ ಸ್ಥಳೀಯ ಕ್ರಿಕೆಟ್‌ ಪ್ರೇಮಿಗಳಿಗೆ ಆಗಿದ್ದ ನೋವು ಅಷ್ಟಿಷ್ಟಲ್ಲ. ಈ ಬಾರಿ ಮೈಸೂರಿನಲ್ಲೇ ಸೆಮಿಫೈನಲ್‌, ಫೈನಲ್‌ ಪಂದ್ಯ ನಡೆಯಲಿವೆ. ಸಾಂಸ್ಕೃತಿಕ ನಗರಿಯಲ್ಲಿ ಫೈನಲ್‌ ನಡೆಯುತ್ತಿರುವುದು ಎರಡನೇ ಬಾರಿ.

ಕ್ರಿಕೆಟ್ ಪಾಲಿಗೆ ಮೈಸೂರು ನಗರಿಯು ಹಲವು ನೆನಪುಗಳನ್ನು ಕಟ್ಟಿಕೊಟ್ಟಿದೆ. 2010ರಲ್ಲಿ ಕರ್ನಾಟಕ ತಂಡ ಕೇವಲ ಆರು ರನ್‌ಗಳಿಂದ ರಣಜಿ ಫೈನಲ್‌ನಲ್ಲಿ ಸೋತ ನೆನಪು ಇರಬಹುದು, ಮನೀಷ್‌ ಪಾಂಡೆ ಗಾಳಿಯಲ್ಲಿ ಹಾರಿ ಪಡೆದ ಕ್ಯಾಚ್‌, ರಾಬಿನ್ ಉತ್ತಪ್ಪ–ಸ್ಥಳೀಯ ಪ್ರೇಕ್ಷಕರ ನಡುವಿನ ‘ಲವ್‌ ಅಂಡ್‌ ಹೇಟ್‌’ ಸಂಬಂಧ ಇರಬಹುದು, ವೀರೇಂದ್ರ ಸೆಹ್ವಾಗ್‌ ಸಿಡಿಸಿದ್ದ ಅಬ್ಬರದ ಶತಕ, ಮೈಸೂರು ವಾರಿಯರ್ಸ್‌ ಬಳಗ ಕಟ್ಟಿಕೊಟ್ಟ ನೆನಪು ಆಗಿರಬಹುದು. ಮತ್ತಷ್ಟು ಸುಂದರ ನೆನಪುಗಳು ಒಡಮೂಡುವ ನಿರೀಕ್ಷೆಯೂ ಇದೆ.

ಒಂದೊಮ್ಮೆ ಚಾಂಪಿಯನ್‌ ಆಗಿದ್ದ ಸ್ಥಳೀಯ ತಂಡ ಮೈಸೂರು ವಾರಿಯರ್ಸ್‌ ಈ ಬಾರಿ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಆಡಿದ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದಿದೆ. ಭಾನುವಾರ ನಡೆದ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್‌ ಎದುರು ಕೇವಲ ಮೂರು ರನ್‌ಗಳಿಂದ ಸೋಲು ಕಂಡಿದೆ. ಇನ್ನೂ ನಾಲ್ಕು ಪಂದ್ಯಗಳನ್ನು ಆಡಬೇಕಿದೆ. ಬ್ಯಾಟಿಂಗ್‌ನಲ್ಲಿ ರಾಜು ಭಟ್ಕಳ್‌, ಅಮಿತ್‌ ವರ್ಮ, ಶೊಯೇಬ್‌ ಮ್ಯಾನೇಜರ್‌, ಬೌಲಿಂಗ್‌ನಲ್ಲಿ ನಾಯಕ ಜೆ.ಸುಚಿತ್‌, ವೈಶಾಕ್‌ ವಿಜಯಕುಮಾರ್‌ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಹೀಗಾಗಿ, ಮತ್ತೊಮ್ಮೆ ಚಾಂಪಿಯನ್‌ ಆಗಲು ಅವಕಾಶ ಉಂಟು. ಸದ್ಯ ಪಾಯಿಂಟ್‌ ಪಟ್ಟಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌, ಹುಬ್ಬಳ್ಳಿ ಟೈಗರ್ಸ್‌, ಬಿಜಾಪುರ ಬುಲ್ಸ್‌, ಬೆಳಗಾವಿ ಪ್ಯಾಂಥರ್ಸ್‌ ಕ್ರಮವಾಗಿ ಮೊದಲ ನಾಲ್ಕು ಸ್ಥಾನದಲ್ಲಿವೆ. ನಂತರದ ಸ್ಥಾನದಲ್ಲಿ ವಾರಿಯರ್ಸ್‌, ಬಳ್ಳಾರಿ ಟಸ್ಕರ್ಸ್‌, ಶಿವಮೊಗ್ಗ ಲಯನ್ಸ್‌ ತಂಡಗಳಿವೆ.

ಆರಂಭದ ಕೆಲ ಪಂದ್ಯಗಳಿಗೆ ಹೇಳಿಕೊಳ್ಳುವ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದಿಲ್ಲ. ಆದರೆ, ಪೈಪೋಟಿ ಬಿರುಸುಗೊಂಡಂತೆ ಕ್ರೀಡಾಂಗಣದತ್ತ ಪ್ರೇಕ್ಷಕರು ದಾಪುಗಾಲು ಇಡಲಿದ್ದಾರೆ.

ಕ್ರಿಕೆಟ್‌ ವೀಕ್ಷಿಸುತ್ತಿರುವ ಪ್ರೇಕ್ಷಕರು

2014ರಲ್ಲಿ ಚಾಂಪಿಯನ್‌ ಆಗಿದ್ದ ಮೈಸೂರು ವಾರಿಯರ್ಸ್‌ ಈ ಬಾರಿಯೂ ಅಗಾಧ ಭರವಸೆ ಸೃಷ್ಟಿಸಿದೆ. ಮತ್ತೊಮ್ಮೆ ಪ್ರಶಸ್ತಿ ಗೆದ್ದು ಅಭಿಮಾನಿಗಳ ಹೃದಯ ಗೆಲ್ಲುವ ಮಾತುಗಳನ್ನು ತಂಡದ ಮಾಲೀಕರು ಹೇಳುತ್ತಿದ್ದಾರೆ. ಉತ್ತಮ ಆಟಗಾರರನ್ನು ಹೊಂದಿರುವ ಈ ತಂಡ ಹೊಸ ಕನಸುಗಳನ್ನು ಬಿತ್ತಿದೆ. ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗಿ ವೆಂಕಟೇಶ್‌ ಪ್ರಸಾದ್ ಅವರ ಮಾರ್ಗದರ್ಶನವಿದೆ.

ಅದೇನೇ ಇರಲಿ, ದಸರಾ ಮಹೋತ್ಸಕ್ಕೆ ಮುನ್ನ ಕ್ರಿಕೆಟ್‌ ಸಂಭ್ರಮ ಸವಿಯುವ ಅವಕಾಶ ಮೈಸೂರು ಕ್ರೀಡಾ ಪ್ರೇಮಿಗಳಿಗೆ ಲಭಿಸಿದೆ. ನೇರ ಪ್ರಸಾರ ಇರುವುದರಿಂದ ಮನೆಯಲ್ಲಿ ಕುಳಿತೂ ವೀಕ್ಷಿಸಬಹುದು. ರಾಬಿನ್ ಉತ್ತಪ್ಪ, ಆರ್‌.ವಿನಯಕುಮಾರ್‌, ಜೆ.ಸುಚಿತ್‌, ಅಮಿತ್‌ ವರ್ಮ, ಗೌತಮ್‌, ವೈಶಾಕ್‌ ವಿಜಯಕುಮಾರ್‌ ಆಟವನ್ನು ಕಣ್ತುಂಬಿಕೊಳ್ಳಬಹುದು.

ಚಿತ್ರಗಳು: ಬಿ.ಆರ್‌.ಸವಿತಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.