ADVERTISEMENT

ಗೆಲುವಿನ ಓಟ ಮುಂದುವರಿಸಲು ವಾರಿಯರ್ಸ್‌–ಪ್ಯಾಂಥರ್ಸ್‌ ತವಕ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 18:48 IST
Last Updated 30 ಆಗಸ್ಟ್ 2018, 18:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚುನಾವಣೆಯ ಕಾವು ಒಂದೆಡೆಯಾದರೆ, ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಕಾವು ಮತ್ತೊಂದೆಡೆ.

ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಶುಕ್ರವಾರ ನಡೆಯಲಿದ್ದು, ಅದೇ ದಿನ ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಕೆಪಿಎಲ್‌ ಟೂರ್ನಿಯ ಎರಡು ಪಂದ್ಯಗಳು ಆಯೋಜನೆಯಾಗಿವೆ.

ಮಧ್ಯಾಹ್ನ ನಡೆಯಲಿರುವ ಪಂದ್ಯದಲ್ಲಿ ಮೈಸೂರು ವಾರಿಯರ್ಸ್‌ ಮತ್ತು ಬೆಳಗಾವಿ ಪ್ಯಾಂಥರ್ಸ್‌ ತಂಡಗಳು ಎದುರಾಗಲಿವೆ. ಎರಡೂ ತಂಡಗಳು ಹಿಂದಿನ ಪಂದ್ಯದಲ್ಲಿ ಗೆಲುವು ಪಡೆದಿದ್ದು, ಹೊಸ ಹುಮ್ಮಸ್ಸಿನೊಂದಿಗೆ ಈ ಪಂದ್ಯವನ್ನು ಎದುರುನೋಡುತ್ತಿವೆ.

ADVERTISEMENT

ತವರು ಪ್ರೇಕ್ಷಕರ ಬೆಂಬಲದೊಂದಿಗೆ ಕಣಕ್ಕಿಳಿಯಲಿರುವ ವಾರಿಯರ್ಸ್‌ ತಂಡವು ರಾಜು ಭಟ್ಕಳ್, ಅರ್ಜುನ್‌ ಹೊಯ್ಸಳ ಮತ್ತು ಶೋಯೆಬ್‌ ಮ್ಯಾನೇಜರ್‌ ಅವರಿಂದ ಬಿರುಸಿನ ಆಟವನ್ನು ನಿರೀಕ್ಷಿಸುತ್ತಿದೆ. ನಾಯಕ ಜೆ.ಸುಚಿತ್‌, ವೈಶಾಖ್ ವಿಜಯಕುಮಾರ್ ಅವರು ಬೌಲಿಂಗ್‌ ವಿಭಾಗದ ಬಲ ಎನಿಸಿದ್ದಾರೆ.

ಪ್ಯಾಂಥರ್ಸ್‌ ತಂಡ ಆಲ್‌ರೌಂಡರ್‌ಗಳಾದ ಸ್ಟುವರ್ಟ್‌ ಬಿನ್ನಿ ಮತ್ತು ಡಿ.ಅವಿನಾಶ್ ಅವರನ್ನು ನೆಚ್ಚಿಕೊಂಡಿದೆ.ಈ ಹಿಂದಿನ ಎರಡು ಪಂದ್ಯಗಳಲ್ಲಿ ಇವರಿಬ್ಬರು ಆಲ್‌ರೌಂಡ್‌ ಆಟದ ಮೂಲಕ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಪಾಯಿಂಟ್ ಪಟ್ಟಿಯಲ್ಲಿ ಪ್ಯಾಂಥರ್ಸ್‌ (4 ಪಂದ್ಯಗಳಿಂದ 5 ಪಾಯಿಂಟ್) ಮೂರನೇ ಸ್ಥಾನಲ್ಲಿದ್ದರೆ, ವಾರಿಯರ್ಸ್‌ (ಮೂರು ಪಂದ್ಯಗಳಿಂದ 4 ಪಾಯಿಂಟ್) ನಾಲ್ಕನೇ ಸ್ಥಾನದಲ್ಲಿದೆ.

ಬಲಾಢ್ಯರ ಪೈಪೋಟಿ: ಶುಕ್ರವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್‌ ಮತ್ತು ಬೆಂಗಳೂರು ಬ್ಲಾಸ್ಟರ್ಸ್‌ ತಂಡಗಳು ಪೈಪೋಟಿ ನಡೆಸಲಿವೆ.‌

ಇವೆರಡು ತಂಡಗಳು ತಲಾ ನಾಲ್ಕು ಪಂದ್ಯಗಳನ್ನಾಡಿದ್ದು, ಮೂರು ಗೆಲುವಿನೊಂದಿಗೆ ಏಳು ಪಾಯಿಂಟ್‌ ಸಂಗ್ರಹಿಸಿವೆ. ಒಂದು ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ. ಉತ್ತಮ ರನ್‌ರೇಟ್‌ ಹೊಂದಿರುವ ಬ್ಲಾಸ್ಟರ್ಸ್‌ ತಂಡ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಟೈಗರ್ಸ್‌ ಎರಡನೇ ಸ್ಥಾನದಲ್ಲಿದೆ. ಶುಕ್ರವಾರ ಗೆಲ್ಲುವ ತಂಡ ಅಗ್ರಸ್ಥಾನಕ್ಕೇರಲಿದೆ.

ರಾಬಿನ್‌ ಉತ್ತಪ್ಪ ನೇತೃತ್ವದ ಬ್ಲಾಸ್ಟರ್ಸ್‌ ಕಳೆದ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್‌ ವಿರುದ್ಧ ಪ್ರಯಾಸದ ಗೆಲುವು ಪಡೆದಿತ್ತು. ಎದುರಾಳಿಗಳು ನೀಡಿದ್ದ 147 ರ‌ನ್‌ಗಳ ಗುರಿ ಮುಟ್ಟಲು ತಿಣುಕಾಡಿತ್ತು. ಟೈಗರ್ಸ್‌ ವಿರುದ್ಧ ಜಯ ಸಾಧಿಸಬೇಕಾದರೆ ಆಟದ ಎಲ್ಲ ವಿಭಾಗಗಳಲ್ಲಿ ಚೇತೋಹಾರಿ ಪ್ರದರ್ಶನ ನೀಡಬೇಕಾಗಿದೆ.

ಶುಕ್ರವಾರದ ಪಂದ್ಯಗಳು
ಮೈಸೂರು ವಾರಿಯರ್ಸ್– ಬೆಳಗಾವಿ ಪ್ಯಾಂಥರ್ಸ್
ಆರಂಭ: ಮಧ್ಯಾಹ್ನ 2
**
ಹುಬ್ಬಳ್ಳಿ ಟೈಗರ್ಸ್– ಬೆಂಗಳೂರು ಬ್ಲಾಸ್ಟರ್ಸ್‌
ಆರಂಭ: ಸಂಜೆ 6.40
ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ 2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.