ADVERTISEMENT

ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿ: ಇಂದು ಆಟಗಾರರ ಹರಾಜು ಪ್ರಕ್ರಿಯೆ

ಶ್ರೇಯಸ್ ಗೋಪಾಲ್, ಗೌತಮ್ ಮೇಲೆ ಕಣ್ಣುc

​ಪ್ರಜಾವಾಣಿ ವಾರ್ತೆ
Published 26 ಜುಲೈ 2019, 19:45 IST
Last Updated 26 ಜುಲೈ 2019, 19:45 IST
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯ ಪ್ರಚಾರ ರಾಯಭಾರಿ, ಚಿತ್ರನಟಿ ರಾಗಿಣಿ ದ್ವಿವೇದಿ ಅವರನ್ನು ಹಿರಿಯ ಕ್ರಿಕೆಟಿಗ ವೆಂಕಟೇಶಪ್ರಸಾದ್ ಅಭಿನಂದಿಸಿದರು. ವಿನಯ್ ಮೃತ್ಯುಂಜಯ, ಸುಧಾಕರ್ ರಾವ್ ಮತ್ತು ಸಂತೋಷ್‌ ಮೆನನ್ ಇದ್ದಾರೆ  –ಪ್ರಜಾವಾಣಿ ಚಿತ್ರ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯ ಪ್ರಚಾರ ರಾಯಭಾರಿ, ಚಿತ್ರನಟಿ ರಾಗಿಣಿ ದ್ವಿವೇದಿ ಅವರನ್ನು ಹಿರಿಯ ಕ್ರಿಕೆಟಿಗ ವೆಂಕಟೇಶಪ್ರಸಾದ್ ಅಭಿನಂದಿಸಿದರು. ವಿನಯ್ ಮೃತ್ಯುಂಜಯ, ಸುಧಾಕರ್ ರಾವ್ ಮತ್ತು ಸಂತೋಷ್‌ ಮೆನನ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಆಗಸ್ಟ್ 16ರಿಂದ ಆರಂಭವಾಗಲಿರುವ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯಲ್ಲಿ ಆಡಲಿರುವ ತಂಡಗಳಿಗೆ ಆಟಗಾರರ ಹರಾಜು ಪ್ರಕ್ರಿಯೆಯು ಶನಿವಾರ ನಡೆಯಲಿದೆ. ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಮತ್ತು ಕೃಷ್ಣಪ್ಪ ಗೌತಮ್ ಅವರನ್ನು ಖರೀದಿಸಲು ತಂಡಗಳು ತುರುಸಿನ ಪೈಪೋಟಿ ನಡೆಸುವ ನಿರೀಕ್ಷೆ ಇದೆ.

ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಬೆಳಿಗ್ಗೆ 10ರಿಂದ ಹರಾಜು ಆರಂಭವಾಗಲಿದೆ.ಒಟ್ಟು 223 ಆಟಗಾರರು ಸ್ಪರ್ಧೆಯಲ್ಲಿದ್ದಾರೆ. ಒಟ್ಟು ಏಳು ತಂಡಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲಿವೆ. ಎಲ್ಲ ತಂಡಗಳೂ ತಲಾ ಇಬ್ಬರನ್ನು ಈಗಾಗಲೇ ರಿಟೇನ್ ಮಾಡಿಕೊಂಡಿವೆ. ಅದರಲ್ಲಿ ಅನುಭವಿ ಆರ್. ವಿನಯಕುಮಾರ್ (ಹುಬ್ಬಳ್ಳಿ ಟೈಗರ್ಸ್‌) ಪ್ರಮುಖರಾಗಿದ್ದಾರೆ.

ಶ್ರೇಯಸ್ ಗೋಪಾಲ್ ಮತ್ತು ಕೃಷ್ಣಪ್ಪ ಗೌತಮ್

ಎ ವಿಭಾಗದಲ್ಲಿ 35 ಆಟಗಾರರು ಮತ್ತು ಬಿ ವಿಭಾಗದಲ್ಲಿ ಉಳಿದ ಆಟಗಾರರು ಹರಾಜಿಗೆ ಲಭ್ಯರಿದ್ದಾರೆ. ಹೋದ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಉತ್ತಮವಾಗಿ ಆಡಿದ್ದ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರನ್ನು ಖರೀದಿಸಲು ಬಹಳಷ್ಟು ಪೈಪೋಟಿ ನಡೆಯುವ ನಿರೀಕ್ಷೆ ಇದೆ. ರಾಜಸ್ಥಾನ ರಾಯಲ್ಸ್ ಪರ ಮಿಂಚಿದ್ದ ಶ್ರೆಯಸ್ 14 ಪಂದ್ಯಗಳಲ್ಲಿ 20 ವಿಕೆಟ್‌ಗಳನ್ನು ಗಳಿಸಿದ್ದರು. ಈಗ ನಡೆಯುತ್ತಿರುವ ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಟೂರ್ನಿಯಲ್ಲಿ ಬ್ಯಾಟಿಂಗ್‌ನಲ್ಲಿಯೂ ಅವರು ಮಿಂಚಿದ್ದಾರೆ. ಕೆಳಕ್ರಮಾಂಕದಲ್ಲಿ ಉತ್ತಮ ಬ್ಯಾಟ್ಸ್‌ಮನ್ ಆಗಿರುವ ಅವರಿಗೆ ಹೆಚ್ಚು ಬೆಲೆ ಸಿಗುವ ನಿರೀಕ್ಷೆ ಇದೆ. ಅವರ ಗೆಳೆಯ, ಆಫ್‌ಸ್ಪಿನ್ನರ್ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ಗೌತಮ್‌ ಅವರಿಗೂ ಉತ್ತಮ ಬೇಡಿಕೆ ಇದೆ.

ADVERTISEMENT

ಕರ್ನಾಟಕ ತಂಡದ ಪ್ರಮುಖ ಆಟಗಾರ ಕರುಣ್ ನಾಯರ್, ಹೋದ ಸಲ ಅತಿ ಹೆಚ್ಚು ಮೌಲ್ಯಪಡೆದಿದ್ದ ಮಧ್ಯಮವೇಗಿ ಅಭಿಮನ್ಯು ಮಿಥುನ್, ಬೆಳಗಾವಿಯ ರೋಹನ್ ಕದಂ ಅವರಿಗೂ ಬೇಡಿಕೆ ಹೆಚ್ಚಿದೆ.

ವೆಸ್ಟ್ ಇಂಡೀಸ್ ಎದುರಿನ ಸರಣಿಯಲ್ಲಿ ಆಡಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಮಯಂಕ್ ಅಗರವಾಲ್, ಕೆ.ಎಲ್. ರಾಹುಲ್ ಮತ್ತು ಮನೀಷ್ ಪಾಂಡೆ ಅವರು ಬಹುತೇಕ ಕೆಪಿಎಲ್ ಟೂರ್ನಿಗೆ ಅಲಭ್ಯರಾಗುವ ಸಾಧ್ಯತೆ ಇದೆ. ಆದ್ದರಿಂದ ಫ್ರ್ಯಾಂಚೈಸ್‌ಗಳು ಅವರತ್ತ ಹೆಚ್ಚಿನ ಒಲವು ತೋರುವುದು ಕೂಡ ಅನುಮಾನ.

‘ಪ್ರತಿ ತಂಡವು ಕನಿಷ್ಠ 15 ಮತ್ತು ಗರಿಷ್ಠ 18 ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ. ತಂಡಗಳು ಪ್ರತಿನಿಧಿಸುವ ಊರು ಮತ್ತು ಆ ಭಾಗದ ಇಬ್ಬರು ಆಟಗಾರರನ್ನು ಹೆಚ್ಚುವರಿಯಾಗಿ ಆಯ್ಕೆ ಮಾಡಿಕೊಳ್ಳಬೇಕು. ಪೂಲ್‌ ಎನಲ್ಲಿರುವ ಆಟಗಾರನಿಗೆ ತಲಾ ₹ 50 ಸಾವಿರ ಮತ್ತು ಬಿ ಪೂಲ್‌ನಲ್ಲಿರುವ ಆಟಗಾರರಿಗೆ ತಲಾ ₹ 10 ಸಾವಿರ ಮೂಲಬೆಲೆ ನಿಗದಿಗೊಳಿಸಲಾಗಿದೆ’ ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕೆಎಸ್‌ಸಿಎ ಜಂಟಿ ಕಾರ್ಯದರ್ಶಿ ಸಂತೋಷ್ ಮೆನನ್ ಹೇಳಿದರು.

ಶಿವಮೊಗ್ಗದಲ್ಲಿ ಸಿಗದ ಹೋಟೆಲ್‌ಕೋಣೆಗಳು

ಈ ಬಾರಿ ಶಿವಮೊಗ್ಗದಲ್ಲಿಯೂ ಕೆಪಿಎಲ್ ಪಂದ್ಯಗಳನ್ನು ನಡೆಸುವ ಉದ್ದೇಶವಿತ್ತು. ಎಲ್ಲ ಮೂಲಸೌಲಭ್ಯಗಳೂ ಸಿದ್ಧವಾಗಿದ್ದವು. ಆದರೆ ಟೂರ್ನಿಯ ಅವಧಿಯಲ್ಲಿ ತಂಗಲು ನಮಗೆ ಅಗತ್ಯವಿದ್ದಷ್ಟು ಕೋಣೆಗಳು ಇಲ್ಲಿಯ ಹೋಟೆಲ್‌ಗಳಲ್ಲಿ ಲಭ್ಯವಿರಲಿಲ್ಲ. ಆದ್ದರಿಂದ ಅಲ್ಲಿ ಪಂದ್ಯಗಳನ್ನು ನಡೆಸುವ ಯೋಚನೆಯನ್ನು ಕೈಬಿಟ್ಟೆವು ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ ಹೇಳಿದರು.

‘ಪಂದ್ಯಗಳ ನೇರಪ್ರಸಾರ ಮಾಡುವ ಸ್ಟಾರ್ ಸ್ಪೋರ್ಟ್ಸ್‌ ಸಿಬ್ಬಂದಿಗೆ ಸುಮಾರು ಎಂಬತ್ತು ರೂಮುಗಳ ಅಗತ್ಯವಿರುತ್ತದೆ. ಅದಲ್ಲದೇ ಒಟ್ಟು ಏಳು ತಂಡಗಳ ಆಟಗಾರರು, ನೆರವು ಸಿಬ್ಬಂದಿ, ಅಧಿಕಾರಿಗಳಿಗೆಲ್ಲ ಕೋಣೆಗಳನ್ನು ಒದಗಿಸಬೇಕು. ಮುಂದಿನ ವರ್ಷ ಶಿವಮೊಗ್ಗದಲ್ಲಿ ನಡೆಸಲು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತೇವೆ’ ಎಂದರು.

ಪ್ರತಿಭಾನ್ವಿತರಿಗೆ ಸೂಕ್ತ ವೇದಿಕೆ: ವೆಂಕಿ

ಟ್ವೆಂಟಿ–20 ಕ್ರಿಕೆಟ್ ಬಹಳಷ್ಟು ಜನಪ್ರಿಯವಾಗುತ್ತಿದೆ. ಕ್ರಿಕೆಟ್‌ನಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಪ್ರತಿಭಾನ್ವಿತರಿಗೆ ಕೆಪಿಎಲ್ ಉತ್ತಮ ವೇದಿಕೆಯಾಗಿದೆ. ಕರ್ನಾಟಕವು ಇವತ್ತು ಭಾರತದ ಕ್ರಿಕೆಟ್‌ನ ಶಕ್ತಿ ಕೇಂದ್ರವಾಗಿದೆ ಎಂದು ಹಿರಿಯ ಕ್ರಿಕೆಟಿಗ ವೆಂಕಟೇಶಪ್ರಸಾದ್ ಹೇಳಿದರು.

ಕೆಎಸ್‌ಸಿಎನಲ್ಲಿ ನಡೆದ ಕಾರ್ಯಕ್ರಮದಲ್ಲಿ ಫ್ರ್ಯಾಂಚೈಸ್ ಮಾಲೀಕರನ್ನು ಗೌರವಿಸಿದ ಅವರು, ‘ಇಂಡಿಯನ್ ಪ್ರೀಮಿಯರ್ ಲೀಗ್ ನಂತಹ ದೊಡ್ಡ ಟೂರ್ನಿಗಳಲ್ಲಿ ಕರ್ನಾಟಕದ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿ ಆಡಿದರು. ಇಲ್ಲಿ ಅಭಿವೃದ್ಧಿಪಡಿಸಲಾಗಿರುವ ಸೌಲಭ್ಯಗಳು ಮತ್ತು ಕೆಪಿಎಲ್‌ನಂತಹ ಟೂರ್ನಿಯಿಂದಾಗಿ ಈ ಸಾಧನೆ ಸಾಧ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸಂಸ್ಥೆಯ ಹಂಗಾಮಿ ಕಾರ್ಯದರ್ಶಿ ಸುಧಾಕರ್ ರಾವ್, ಟೂರ್ನಿಯ ಪ್ರಚಾರ ರಾಯಭಾರಿ, ಚಿತ್ರನಟಿ ರಾಗಿಣಿ ದ್ವಿವೇದಿ ಹಾಜರಿದ್ದರು.

ಟ್ವೆಂಟಿ–20 ಕ್ರಿಕೆಟ್ ‘ಟ್ವೆಂಟಿ–20 ಮಾದರಿಗೆ ಹೊಂದಿಕೊಂಡಿರುವ ಸ್ಪಿನ್ನರ್‌ಗಳು’

‌ಮಾದರಿಗೆ ಸ್ಪಿನ್ನರ್‌ಗಳೂ ಹೊಂದಿಕೊಂಡಿದ್ದಾರೆ. ಬ್ಯಾಟ್ಸ್‌ಮನ್‌ಗಳ ಅಬ್ಬರವನ್ನು ಕಟ್ಟಿಹಾಕುವ ಸಾಮರ್ಥ್ಯವನ್ನು ಸ್ಪಿನ್ನರ್‌ಗಳು ಬೆಳೆಸಿಕೊಂಡಿದ್ದಾರೆ ಎಂದು ಹಿರಿಯ ಕ್ರಿಕೆಟಿಗ ಬಿ.ಎಸ್. ಚಂದ್ರಶೇಖರ್ ಹೇಳಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಕೆಪಿಎಲ್ ಮತ್ತು ಐಪಿಎಲ್‌ನಲ್ಲಿ ಇವತ್ತು ಪ್ರತಿಯೊಂದು ತಂಡವೂ ಇಬ್ಬಿಬ್ಬರು ಸ್ಪಿನ್ನರ್‌ಗಳನ್ನು ಆಡಿಸುತ್ತಿವೆ. ಇದು ಸ್ಪಿನ್‌ ಬೌಲರ್‌ಗಳ ಮಹತ್ವವನ್ನು ತೋರಿಸುತ್ತದೆ. ಕ್ರಿಕೆಟ್‌ ಅಗಾಧವಾಗಿ ಬೆಳೆದಿದೆ. ಅದಕ್ಕೆ ತಕ್ಕಂತೆ ಸ್ಪಿನ್ ವಿಭಾಗವೂ ಸುಧಾರಣೆಯಾಗಿದೆ. ಹೊಸ ತಂತ್ರ, ಪ್ರತಿತಂತ್ರಗಳು ರೂಢಿಯಾಗುತ್ತಿವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.