ADVERTISEMENT

ಭಾರತದ ವಿಶ್ವಕಪ್‌ ಸಾರಥಿಗಳು...

ಜಿ.ಶಿವಕುಮಾರ
Published 6 ಜೂನ್ 2019, 7:32 IST
Last Updated 6 ಜೂನ್ 2019, 7:32 IST
ಮಹೇಂದ್ರ ಸಿಂಗ್‌ ಧೋನಿ
ಮಹೇಂದ್ರ ಸಿಂಗ್‌ ಧೋನಿ   

ರಾಷ್ಟ್ರೀಯ ತಂಡಕ್ಕೆ ನಾಯಕರಾಗಬೇಕೆಂಬುದು ಎಲ್ಲಾ ಕ್ರಿಕೆಟಿಗರ ಕನಸಾಗಿರುತ್ತದೆ. ಈ ಅದೃಷ್ಟ ಎಲ್ಲರ ಕೈ ಹಿಡಿಯುವುದಿಲ್ಲ. ಈ ಜವಾಬ್ದಾರಿ ನಿಭಾಯಿಸುವುದು ಸುಲಭವೂ ಅಲ್ಲ. ಅತಿರಥ ಮಹಾರಥರೆನಿಸಿಕೊಂಡವರೇ ಈ ಹೊಣೆಯಿಂದ ನುಣುಚಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಈ ಹಾದಿಯಲ್ಲಿ ಎದುರಾದ ಸವಾಲುಗಳನ್ನೆಲ್ಲಾ ಚಾಣಾಕ್ಷತೆಯಿಂದ ಹಿಮ್ಮೆಟ್ಟಿಸಿ ಅಭಿಮಾನಿಗಳ ಮನ ಗೆದ್ದ ನಾಯಕರು ವಿರಳ.

ವಿಶ್ವಕಪ್‌ನಂತಹ ‍ಕ್ರಿಕೆಟ್‌ ಮಹಾಮೇಳದಲ್ಲಿ ತಂಡದ ಸಾರಥ್ಯ ವಹಿಸುವುದೆಂದರೇ ಅದು ಮತ್ತೊಂದು ಬಗೆಯ ಸವಾಲು. ಈ ಸದವಕಾಶ ಎಲ್ಲರಿಗೂ ಸಿಗುವುದಿಲ್ಲ. ನಾಯಕತ್ವದ ನೊಗ ಹೊತ್ತಿದ್ದವರ ಪೈಕಿ ಬಹುತೇಕರು ಸಿಹಿಗಿಂತಲೂ ಕಹಿಯನ್ನೇ ಹೆಚ್ಚು ಅನುಭವಿಸಿದ್ದಾರೆ. ಈಗಾಗಲೇ 11 ವಿಶ್ವಕಪ್‌ಗಳು ಮುಗಿದಿವೆ. ಈ ಟೂರ್ನಿಗಳಲ್ಲಿ ಆರು ಮಂದಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಆ ಸಾರಥಿಗಳ ಏಳು ಬೀಳುಗಳ ಕುರಿತ ಬರಹ ಇಲ್ಲಿದೆ.

ಎಸ್‌.ವೆಂಕಟರಾಘವನ್‌

ಎಸ್‌.ವೆಂಕಟರಾಘವನ್‌

ADVERTISEMENT

ನೇರ ನಡೆ ನುಡಿಯ ಆಟಗಾರ ಎಸ್‌.ವೆಂಕಟರಾಘವನ್‌. ತಮಿಳುನಾಡಿನ ರಾಘವನ್‌ ಅವರು 1975 ಮತ್ತು 1979ರಲ್ಲಿ ನಡೆದಿದ್ದ ವಿಶ್ವಕಪ್‌ಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಇವರ ಸಾರಥ್ಯದಲ್ಲಿ ಭಾರತ, ಹೇಳಿಕೊಳ್ಳುವಂತಹ ಸಾಧನೆ ಮಾಡಲಿಲ್ಲ. ಎರಡು ವಿಶ್ವಕಪ್‌ಗಳಿಂದ ಒಟ್ಟು ಆರು ಪಂದ್ಯಗಳನ್ನು ಆಡಿದ್ದ ತಂಡವು ಗೆದ್ದಿದ್ದು ಒಂದು ಪಂದ್ಯವನ್ನಷ್ಟೇ. ಆಟಗಾರನಾಗಿಯೂ ವೆಂಕಟರಾಘವನ್‌ ಹೆಜ್ಜೆ ಗುರುತು ಮೂಡಿಸಲಿಲ್ಲ. ಆರು ಪಂದ್ಯಗಳಲ್ಲಿ ಬೌಲಿಂಗ್‌ ಮಾಡಿದರೂ ಅವರ ಖಾತೆಗೆ ಒಂದೂ ವಿಕೆಟ್‌ ಸೇರ್ಪಡೆಯಾಗಲಿಲ್ಲ.

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ ರಾಘವನ್‌ ಅವರು ಐಸಿಸಿ ಅಂಪೈರ್‌ ಆಗಿ ಕೆಲಸ ಮಾಡಿದ್ದರು.

ಕ‍ಪಿಲ್‌ ದೇವ್‌

ಕ‍ಪಿಲ್‌ ದೇವ್‌

ಭಾರತ ಕಂಡ ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್‌ ಕಪಿಲ್‌ ದೇವ್‌. ಭಾರತಕ್ಕೆ ಚೊಚ್ಚಲ ವಿಶ್ವಕಪ್‌ ಗೆದ್ದುಕೊಟ್ಟ ಹಿರಿಮೆಯೂ ಇವರದ್ದು. ಚಂಡೀಗಡದ ಕಪಿಲ್‌, 1983 ಮತ್ತು 1987ರ ವಿಶ್ವಕಪ್‌ಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.

ನಾಯಕನಾಗಿ ಆಡಿದ ಚೊಚ್ಚಲ ವಿಶ್ವಕಪ್‌ನಲ್ಲೇ (1983) ಭಾರತಕ್ಕೆ ಟ್ರೋಫಿ ಗೆದ್ದುಕೊಟ್ಟಿದ್ದ ಅವರು ಕ್ರಿಕೆಟ್‌ ಜಗತ್ತಿನ ಗಮನ ಸೆಳೆದಿದ್ದರು. ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ತಂಡ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿದ್ದಾಗ ಕಪಿಲ್‌, ಕೆಚ್ಚೆದೆಯಿಂದ ಹೋರಾಡಿದ್ದರು. ಆ ಪಂದ್ಯದಲ್ಲಿ ಅವರು ಕಟ್ಟಿದ ಇನಿಂಗ್ಸ್‌ (ಔಟಾಗದೆ 175) ಅಭಿಮಾನಿಗಳ ಮನದಂಗಳದಲ್ಲಿ ಇನ್ನೂ ಹಸಿರಾಗಿದೆ. ವೆಸ್ಟ್‌ ಇಂಡೀಸ್‌ ಎದುರಿನ ಫೈನಲ್‌ ಹೋರಾಟದಲ್ಲಿ ವಿವಿಯನ್‌ ರಿಚರ್ಡ್ಸ್‌ ಬಾರಿಸಿದ ಚೆಂಡನ್ನು ಆಕರ್ಷಕ ರೀತಿಯಲ್ಲಿ ಹಿಡಿತಕ್ಕೆ ಪಡೆದಿದ್ದು ಕೂಡಾ ಅಭಿಮಾನಿಗಳ ಕಣ್ಣಿಗೆ ಕಟ್ಟಿದಂತಿದೆ. ಅವರು ಹಿಡಿದ ಆ ಕ್ಯಾಚ್‌ ಪಂದ್ಯಕ್ಕೆ ತಿರುವು ನೀಡಿತ್ತು. ಭಾರತದ ಪ್ರಶಸ್ತಿಯ ಹಾದಿಯನ್ನು ಸುಗಮ ಮಾಡಿತ್ತು.

1987ರಲ್ಲೂ ಕಪಿಲ್‌, ನಾಯಕತ್ವದ ಜಾದೂ ಮುಂದುವರಿದಿತ್ತು. ಗುಂಪು ಹಂತದಲ್ಲಿ ಆಡಿದ ಆರು ಪಂದ್ಯಗಳ ‍ಪೈಕಿ ಐದರಲ್ಲಿ ಗೆದ್ದಿದ್ದ ತಂಡವು ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿ ಸೆಮಿಫೈನಲ್‌ ಹಂತಕ್ಕೇರಿತ್ತು. ನಾಲ್ಕರ ಘಟ್ಟದಲ್ಲಿ ಇಂಗ್ಲೆಂಡ್‌ ಎದುರು ಮಂಕಾಗಿದ್ದರಿಂದ ತಂಡದ ಸತತ ಎರಡನೇ ಪ್ರಶಸ್ತಿಯ ಕನಸು ಕೈಗೂಡಿರಲಿಲ್ಲ.

ಮೊಹಮ್ಮದ್‌ ಅಜರುದ್ದೀನ್‌

ಮೊಹಮ್ಮದ್‌ ಅಜರುದ್ದೀನ್‌

ಸತತ ಮೂರು ವಿಶ್ವಕಪ್‌ಗಳಲ್ಲಿ ತಂಡವನ್ನು ಮುನ್ನಡೆಸಿದ ಭಾರತದ ಏಕೈಕ ನಾಯಕ ಎಂಬ ಹೆಗ್ಗಳಿಕೆ ಮೊಹಮ್ಮದ್‌ ಅಜರುದ್ದೀನ್‌ ಅವರದ್ದು. 1992, 1996 ಮತ್ತು 1999ರ ವಿಶ್ವಕಪ್‌ಗಳಲ್ಲಿ ಅಜರ್‌, ಭಾರತದ ಸಾರಥಿಯಾಗಿದ್ದರು.

1992ರ ಟೂರ್ನಿಯಲ್ಲಿ ಅಜರ್‌, ನಾಯಕನಾಗಿ ಛಾಪು ಒತ್ತಲು ವಿಫಲರಾಗಿದ್ದರು. ಅವರ ಮುಂದಾಳತ್ವದಲ್ಲಿ ಎಂಟು ಪಂದ್ಯಗಳನ್ನು ಆಡಿದ್ದ ತಂಡವು ಕೇವಲ ಎರಡರಲ್ಲಿ ಗೆದ್ದಿತ್ತು.

ನಾಲ್ಕು ವರ್ಷಗಳ ನಂತರ ನಡೆದಿದ್ದ ಮತ್ತೊಂದು ಟೂರ್ನಿಯಲ್ಲಿ ಭಾರತವು ಸೆಮಿಫೈನಲ್‌ಗೆ ದಾಪುಗಾಲಿಟ್ಟಿತ್ತು. ಆಗ ಸಚಿನ್‌ ತೆಂಡೂಲ್ಕರ್‌ ಅಮೋಘ ಸಾಮರ್ಥ್ಯ ತೋರಿ ಗಮನ ಸೆಳೆದಿದ್ದರು.

1999ರಲ್ಲಿ ತಂಡವು ಸೂಪರ್‌ ಸಿಕ್ಸ್‌ ಹಂತದಲ್ಲಿ ಎಡವಿತ್ತು. ಐದು ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಗೆದ್ದು ಜಿಂಬಾಬ್ವೆಗಿಂತಲೂ ಕೆಳಗಿನ ಸ್ಥಾನದಲ್ಲಿ (ಆರನೇ) ಕಾಣಿಸಿಕೊಂಡಿತ್ತು. ಆ ಟೂರ್ನಿಯ ಬಳಿಕ ಅಜರ್‌ ಅವರನ್ನು ನಾಯಕತ್ವದಿಂದ ಕಿತ್ತುಹಾಕಲಾಗಿತ್ತು.

ಸೌರವ್‌ ಗಂಗೂಲಿ

ಸೌರವ್‌ ಗಂಗೂಲಿ

2003ರ ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಸೌರವ್‌ ಗಂಗೂಲಿ ಅವರ ಹೆಗಲೇರಿತ್ತು. ಆ ಟೂರ್ನಿಯಲ್ಲಿ ತಂಡವು ಚಾರಿತ್ರಿಕ ಸಾಧನೆಯ ಹೊಸ್ತಿಲಲ್ಲಿ ಎಡವಿತ್ತು.

ಗಂಗೂಲಿ ಬಳಗವು ಜೊಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಸೋತು ರನ್ನರ್ಸ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಆ ಟೂರ್ನಿಯಲ್ಲಿ ‘ದಾದಾ’ ತಂಡವನ್ನು ಮುನ್ನಡೆಸಿದ ರೀತಿಗೆ ಎಲ್ಲರೂ ಶಹಬ್ಬಾಸ್‌ ಎಂದಿದ್ದರು. ನಾಯಕನಾಗಿ ಮಾತ್ರವಲ್ಲ ಬ್ಯಾಟ್ಸ್‌ಮನ್‌ ಆಗಿಯೂ ಸೌರವ್‌ ಸದ್ದು ಮಾಡಿದ್ದರು. ಎಡಗೈ ಬ್ಯಾಟ್ಸ್‌ಮನ್‌ ಗಂಗೂಲಿ, ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಅವರ ಬ್ಯಾಟ್‌ನಿಂದ ಮೂರು ಶತಕಗಳು ಸಿಡಿದಿದ್ದವು. ಸಚಿನ್‌ ತೆಂಡೂಲ್ಕರ್‌ ಅವರು ಗರಿಷ್ಠ ರನ್‌ ಗಳಿಸಿದ ಗೌರವ ತಮ್ಮದಾಗಿಸಿಕೊಂಡಿದ್ದರು.

ರಾಹುಲ್‌ ದ್ರಾವಿಡ್‌

ರಾಹುಲ್‌ ದ್ರಾವಿಡ್‌

ವಿಶ್ವಕಪ್‌ನಲ್ಲಿ ಭಾರತದ ಸಾರಥ್ಯ ವಹಿಸಿದ ಕರ್ನಾಟಕದ ಏಕೈಕ ಆಟಗಾರ ರಾಹುಲ್ ದ್ರಾವಿಡ್‌. ‘ಗೋಡೆ’ ಖ್ಯಾತಿಯ ದ್ರಾವಿಡ್‌ ನಾಯಕತ್ವದಲ್ಲಿ ಭಾರತವು 2007ರ ಟೂರ್ನಿಯಲ್ಲಿ ಕಣಕ್ಕಿಳಿದಿತ್ತು. ವೆಸ್ಟ್‌ ಇಂಡೀಸ್‌ನಲ್ಲಿ ಆಯೋಜನೆಯಾಗಿದ್ದ ಈ ಟೂರ್ನಿಯಲ್ಲಿ ‘ಜಾಮಿ’ ಕಹಿ ಅನುಭವಿಸಿದ್ದೇ ಹೆಚ್ಚು.

ಸಚಿನ್‌, ಯುವರಾಜ್‌ ಸಿಂಗ್‌, ವೀರೇಂದ್ರ ಸೆಹ್ವಾಗ್‌, ಗಂಗೂಲಿ ಅವರಂತಹ ಘಟಾನುಘಟಿಗಳನ್ನು ಹೊಂದಿದ್ದ ತಂಡವು ಗುಂಪು ಹಂತದಲ್ಲೇ ಮುಗ್ಗರಿಸಿತ್ತು. ಬಾಂಗ್ಲಾದೇಶ ಎದುರಿನ ಸೋಲು ಅಭಿಮಾನಿಗಳ ಕಣ್ಣು ಕೆಂಪಾಗಿಸಿತ್ತು. ಕೋಚ್‌ ಗ್ರೆಗ್‌ ಚಾಪೆಲ್‌ ಅವರ ಏಕಪಕ್ಷೀಯ ನಿರ್ಧಾರಗಳು ತಂಡದ ವೈಫಲ್ಯಕ್ಕೆ ಕಾರಣವಾಗಿದ್ದವು ಎಂದು ವಿಶ್ಲೇಷಿಸಲಾಗಿತ್ತು.

ಮಹೇಂದ್ರ ಸಿಂಗ್‌ ಧೋನಿ

ಭಾರತ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಧೋನಿ ಅಗ್ರಮಾನ್ಯರು. ಶಾಂತ ಚಿತ್ತತೆ, ನಿಖರ ತಂತ್ರಗಾರಿಕೆ ಮತ್ತು ಪ್ರಯೋಗಶೀಲತೆಯ ಮೂಲಕವೇ ಧೋನಿ ಜಗದ್ವಿಖ್ಯಾತರಾದವರು.

2011 ಮತ್ತು 2015ರ ವಿಶ್ವಕಪ್‌ಗಳಲ್ಲಿ ತಂಡವನ್ನು ಮುನ್ನಡೆಸಿದ್ದ ‘ಕ್ಯಾಪ್ಟನ್‌ ಕೂಲ್‌’, ಎರಡು ದಶಕಗಳ ನಂತರ ಭಾರತಕ್ಕೆ ವಿಶ್ವಕಪ್‌ ಗೆದ್ದುಕೊಟ್ಟಿದ್ದರು. 2011ರಲ್ಲಿ ತವರಿನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಧೋನಿ ಪಡೆಯಿಂದ ಈ ಸಾಧನೆ ಅರಳಿತ್ತು. ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಮಹಿ, ಅಜೇಯ 91ರನ್‌ ಗಳಿಸಿ ಪಂದ್ಯಶ್ರೇಷ್ಠರಾಗಿದ್ದರು. ನುವಾನ್‌ ಕುಲಶೇಖರ ಹಾಕಿದ 49ನೇ ಓವರ್‌ನ ಎರಡನೇ ಎಸೆತವನ್ನು ‘ಮಹಿ’ ಲಾಂಗ್‌ ಆನ್‌ನತ್ತ ಸಿಕ್ಸರ್‌ಗೆ ಅಟ್ಟಿದಾಗ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇತಿಹಾಸ ಸೃಷ್ಟಿಯಾಗಿತ್ತು.

2015ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ಟೂರ್ನಿಗೆ ಯುವ ‍ಪಡೆ ಕಟ್ಟಿಕೊಂಡು ಹೋಗಿದ್ದ ಧೋನಿ ತಂಡವನ್ನು ಸೆಮಿಫೈನಲ್‌ಗೆ ಕೊಂಡೊಯ್ದಿದ್ದರು. 2011ರ ವಿಶ್ವಕಪ್‌ ಹೀರೊ ಯುವರಾಜ್‌ ಸಿಂಗ್, ಗೌತಮ್‌ ಗಂಭೀರ್‌ ಅವರನ್ನು ಕೈಬಿಟ್ಟಿದ್ದರಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಇದ್ಯಾವುದರ ಬಗ್ಗೆಯೂ ಧೋನಿ ತಲೆ ಕೆಡಿಸಿಕೊಂಡಿರಲಿಲ್ಲ. ನಾಲ್ಕರ ಘಟ್ಟದಲ್ಲಿ ತಂಡವು ಆಸ್ಟ್ರೇಲಿಯಾಕ್ಕೆ ಶರಣಾಗಿತ್ತು. ಆ ಸೋಲಿನೊಂದಿಗೆ ತಂಡದ ಅಭಿಯಾನ ಕೊನೆಯಾಗಿತ್ತು.

ವಿರಾಟ್‌ ಕೊಹ್ಲಿ

ವಿರಾಟ್‌ ಕೊಹ್ಲಿ

ಕೊಹ್ಲಿಅವರು ವಿಶ್ವಕಪ್‌ನಲ್ಲಿ ಭಾರತವನ್ನು ಮುನ್ನಡೆಸುತ್ತಿರುವ ಏಳನೇ ನಾಯಕ ಎಂಬ ಹಿರಿಮೆ ಹೊಂದಿದ್ದಾರೆ. ವಿರಾಟ್‌ ಪಡೆ ಈ
ಸಲ ಪ್ರಶಸ್ತಿ ಗೆಲ್ಲುವ ಕನಸಿನೊಂದಿಗೆ ಆಂಗ್ಲರ ನಾಡಿಗೆ ತೆರಳಿದೆ. ಮೊದಲ ಅಬ್ಯಾಸ ಪಂದ್ದಲ್ಲಿ ನ್ಯೂಜಿಲೆಂಟ್‌ ಎದುರು ಮುಗ್ಗರಿಸಿದ್ದ ತಂಡ ನಂತರ ಬಾಂಗ್ಲಾದೇಶವನ್ನು ಮಣಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.