ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಅಂಪೈರ್‌ಗಳು ನೀಡಿದ ತಪ್ಪು ತೀರ್ಪುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಯು ಬಿಸಿಸಿಐಗೆ ದೂರು ಸಲ್ಲಿಸಿದೆ.
‘ನಮ್ಮ ತಂಡದ ಆಟಗಾರರು ಪಂದ್ಯದ ನಂತರ ಕಣ್ಣೀರು ಹಾಕಿದರು. ಅವರೆಲ್ಲ ಸುಮಾರು ಆರು ತಿಂಗಳುಗಳಿಂದ ಬಹಳಷ್ಟು ಪರಿಶ್ರಮಪಟ್ಟು ಈ ಹಂತಕ್ಕೆ ಏರಿದ್ದರು. ಈ ಬಾರಿ ಕಠಿಣ ಹಾದಿಯಲ್ಲಿ ಉತ್ತಮವಾಗಿ ಆಡಿ ಸೆಮಿಫೈನಲ್‌ಗೆ ಬಂದಿತ್ತು. ಆದರೆ, ಅಂಪೈರ್ ತೀರ್ಪುಗಳಿಂದಾಗಿ ನಾವು ಪಂದ್ಯ ಸೋತಿದ್ದು ತುಂಬಾ ಬೇಸರವಾಗಿದೆ. ಇದರಿಂದಾಗಿ ಫೈನಲ್ ಪ್ರವೇಶಿಸುವ ಸುವರ್ಣಾವಕಾಶ ತಪ್ಪಿಹೋಗಿದೆ’ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಸುಧಾಕರ್ ರಾವ್ ಹೇಳಿದರು.
‘ಈ ಬಗ್ಗೆ ನಾನು ಬಿಸಿಸಿಐನ ಆಪರೇಷನ್ಸ್ ವಿಭಾಗದ ಮುಖ್ಯ ವ್ಯವಸ್ಥಾಪಕ ಸಾಬಾ ಕರೀಂ ಅವರೊಂದಿಗೆ ಚರ್ಚಿಸಿದೆ. ಇಂತಹ ಮಹತ್ವದ ಘಟ್ಟದಲ್ಲಿ ಎಲೀಟ್ ಪ್ಯಾನೆಲ್ ಅಂಪೈರ್‌ಗಳನ್ನು ನೇಮಕ ಮಾಡುವಂತೆ ಕೇಳಿಕೊಂಡೆ. ಆದರೆ, ಎಲೀಟ್ ಅಂಪೈರ್‌ಗಳ ಕೊರತೆ ಇದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಇದರಲ್ಲಿ ಕರ್ನಾಟಕದ್ದೇನು ತಪ್ಪಿದೆ? ಪಂದ್ಯದ ನಂತರ ರೆಫರಿ ನನ್ನ ಬಳಿ ಬಂದು ಕ್ಷಮೆ ಕೇಳಿ ಹೋಗಿದ್ದಾರೆ’ ಎಂದು ಸುಧಾಕರ್ ತಿಳಿಸಿದರು.
ಸೋಮವಾರ ಮುಗಿದ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ಎದುರು ಕರ್ನಾಟಕ ಸೋಲನುಭವಿಸಲು ಅಂಪೈರ್ ಖಾಲೀದ್ ಸೈಯದ್ ನೀಡಿರುವ ತಪ್ಪು ತೀರ್ಪುಗಳು ಕಾರಣವಾಗಿದ್ದವು. ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಸೌರಾಷ್ಟ್ರದ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಅವರ ಬ್ಯಾಟ್ ಅಂಚಿಗೆ ಸವರಿಕೊಂಡು ಹೋಗಿದ್ದ ಚೆಂಡು ವಿಕೆಟ್ ಕೀಪರ್ ಗೆ ಕ್ಯಾಚ್ ಆಗಿತ್ತು. ಆದರೆ, ಎರಡೂ ಬಾರಿ ಸೈಯದ್ ಔಟ್ ನೀಡಿರಲಿಲ್ಲ.
ಎರಡನೇ ಇನಿಂಗ್ಸ್‌ನಲ್ಲಿ ವಿನಯಕುಮಾರ್ ಎಸೆತದಲ್ಲಿ ಈ ರೀತಿಯಾಗಿತ್ತು. ಪೂಜಾರ ಅವರು ಕೂಡ ಕ್ರೀಸ್‌ನಿಂದ ಹೊರಹೋಗದೆ ಆಟ ಮುಂದುವರಿಸಿದ್ದು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಚೇತೇಶ್ವರ್ ಆವರನ್ನು ‘ಮೋಸಗಾರ’ ಎಂದು ಟೀಕೆಗಳ ಮಳೆ ಸುರಿಸಲಾಗಿತ್ತು. ಪೂಜಾರ ಎರಡನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು.
ಕರ್ನಾಟಕ ತಂಡದ ಕೋಚ್ ಯರೇ ಗೌಡ ಅವರು ರಣಜಿ ನಾಕೌಟ್ ಹಂತದಲ್ಲಿ ಯುಡಿಆರ್‌ಎಸ್ (ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ) ಜಾರಿ ಮಾಡಿದರೆ ಒಳ್ಳೆಯದು ಎಂದು ಹೇಳಿದ್ದರು.
**
ಕರ್ನಾಟಕದ ಟೀಕೆಗೆ ಕೋಟಕ್ ತಿರುಗೇಟು
‘ಚೇತೇಶ್ವರ್ ಪೂಜಾರ ಅವರನ್ನು ಟೀಕಿಸುತ್ತಿರುವ ಕರ್ನಾಟಕದ ಆಟಗಾರರಿಗೆ ಕ್ರೀಡಾ ಮನೋಭಾವ ಇದೆಯೇ? ಮೊದಲ ಇನಿಂಗ್ಸ್‌ನಲ್ಲಿ ಪ್ರೇರಕ್ ಮಂಕಡ್ ಅವರ ಬ್ಯಾಟ್‌ಗೆ ಚೆಂಡು ಬಡಿದಿರಲಿಲ್ಲ. ವಿಕೆಟ್ ಕೀಪರ್ ಕ್ಯಾಚ್ ಪಡೆದು ಅಪೀಲ್ ಮಾಡಿದ್ದರು. ಅಂಪೈರ್ ಔಟ್ ನೀಡಿದ್ದರು. ಆಗ ಪ್ರೇರಕ್ ಅವರನ್ನು ಮರಳಿ ಕರೆಯಬಹುದಿತ್ತಲ್ಲ’ ಎಂದು ಸೌರಾಷ್ಟ್ರ ತಂಡದ ಕೋಚ್ ಸಿತಾಂಶು ಕೋಟಕ್ ಪ್ರಶ್ನಿಸಿದ್ದಾರೆ.
‘ಮಿಡ್ ಡೇ’ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಅವರು ಪೂಜಾರ ಅವರ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಕರ್ನಾಟಕದ ಧೋರಣೆಯನ್ನು ಟೀಕಿಸಿದ್ದಾರೆ.
‘ಪ್ರೇಕ್ಷಕರ ಗ್ಯಾಲರಿಯಲ್ಲಿದ್ದವರು ಕೂಡ ತಪ್ಪಾಗಿ ವರ್ತಿಸಿದ್ದಾರೆ. ಕರ್ನಾಟಕದ ವಿನಯಕುಮಾರ್ ಅವರು ಎಂದಾದರೂ ತಮ್ಮ ಬೌಲಿಂಗ್‌ನಲ್ಲಿ ಅಂಪೈರ್ ನೀಡಿದ ತಪ್ಪು ತೀರ್ಪಿನಿಂದ ಕ್ರೀಸ್ ತೊರೆದ ಬ್ಯಾಟ್ಸ್‌ಮನ್‌ನನ್ನು ಮರಳಿ ಕರೆಸಿದ್ದಾರೆಯೇ? ಅವರಿಗೆ ಬೇರೆಯವರ ಬಗ್ಗೆ ದೂರು ನೀಡುವ ಹಕ್ಕು ಎಲ್ಲಿದೆ?’ ಎಂದು ತಿರುಗೇಟು ನೀಡಿದ್ದಾರೆ.
‘ಅಂಪೈರ್‌ಗಳೂ ಮನುಷ್ಯರು. ಅವರು ಬೇಕೆಂತಲೇ ತಪ್ಪು ಮಾಡುವುದಿಲ್ಲ. ಆಟದಲ್ಲಿ ಅಂಪೈರ್ ನೀಡಿದ ತೀರ್ಮಾನವೇ ಅಂತಿಮ ಎಂಬ ನಿಯಮವನ್ನು ಪಾಲಿಸಬೇಕು. ನಮ್ಮ ತಂಡದ ವಿರುದ್ಧವೂ ಐದಾರು ತೀರ್ಪುಗಳು ತಪ್ಪು ಹೋಗಿವೆ. ವಿನಯಕುಮಾರ್, ಅಭಿಮನ್ಯು ಮಿಥುನ್ ಮತ್ತು ಮಯಂಕ್ ಅಗರವಾಲ್ ಅವರು ಬ್ಯಾಟಿಂಗ್ ಮಾಡುವಾಗ ಎಲ್‌ಬಿಡಬ್ಲ್ಯು ಆಗಿದ್ದರು. ಆದರೆ ಬ್ಯಾಟ್ ಅ್ಯಂಡ್ ಪ್ಯಾಡ್ ಎಂದು ಅಂಪೈರ್ ತೀರ್ಪು ನೀಡಿದ್ದರು. ನಾವು ಯಾರಿಗೂ ದೂರು ಕೊಡಲಿಲ್ಲ. ಇದೆಲ್ಲ ಆಟದಲ್ಲಿ ಸಾಮಾನ್ಯ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.