ADVERTISEMENT

ಕೆಎಸ್‌ಸಿಎ | ನಿಯಮ ಉಲ್ಲಂಘಿಸಿ ಆಟಗಾರರ ಆಯ್ಕೆ; ಆರೋಪ

ಕೆಎಸ್‌ಸಿಎ ಧಾರವಾಡ ವಲಯದ 16 ವರ್ಷದೊಳಗಿನವರ ತಂಡ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 17:25 IST
Last Updated 14 ಸೆಪ್ಟೆಂಬರ್ 2024, 17:25 IST
<div class="paragraphs"><p>ಕೆಎಸ್‌ಸಿಎ ಲೋಗೊ</p></div>

ಕೆಎಸ್‌ಸಿಎ ಲೋಗೊ

   

ಹುಬ್ಬಳ್ಳಿ: ‘ಕೆಎಸ್‌ಸಿಎ ಧಾರವಾಡ ವಲಯದ 16 ವರ್ಷದ ಒಳಗಿನವರ ತಂಡದ ಆಯ್ಕೆ ನಿಯಮದಂತೆ ನಡೆಸಿಲ್ಲ. ಪ್ರತಿಭಾವಂತ ಆಟಗಾರರಿಗೆ ಅನ್ಯಾಯವಾಗಿದೆ’ ಎಂದು ಕೋಚ್ ಪ್ರಮೋದ್ ಕಾಮತ್ ಆರೋಪಿಸಿದರು.

‘ಸೆ.17ರಿಂದ ಬೆಂಗಳೂರಿನಲ್ಲಿ 16 ವರ್ಷದೊಳಗಿನವರ ಅಂತರ ವಲಯ ಕ್ರಿಕೆಟ್‌ ಟೂರ್ನಿ ನಡೆಯಲಿದೆ. ಲೀಗ್ ಹಂತದ ಪಂದ್ಯಗಳನ್ನು ಸಮರ್ಪಕವಾಗಿ ನಡೆಸದೆ ಈ ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡಲಾಗಿದೆ’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ADVERTISEMENT

‘ಕೆಎಸ್‌ಸಿಎ ಧಾರವಾಡ ವಲಯದ ನಿಮಂತ್ರಕ ನಿಖಿಲ್ ಭೂಸದ್‌ ಅವರ ಬಿಡಿಕೆ ಸ್ಪೋರ್ಟ್ಸ್‌ ಫೌಂಡೇಷನ್‌ ತಂಡ ಲೀಗ್‌ ಹಂತದ ಮೂರು ಪಂದ್ಯಗಳನ್ನು ಆಡಿದ್ದು, ಉಳಿದ ಕ್ಲಬ್‌ ತಂಡಗಳು ಒಂದು ಪಂದ್ಯ ಮಾತ್ರ ಆಡಿವೆ. ಇದರಿಂದ ಪ್ರತಿಭಾವಂತ ಆಟಗಾರರು ಅವಕಾಶದಿಂದ ವಂಚಿತರಾಗಿದ್ದಾರೆ’ ಎಂದು ಹೇಳಿದರು.

‘ಏಪ್ರಿಲ್, ಮೇ ತಿಂಗಳಲ್ಲಿ ಲೀಗ್ ಹಂತದ ಪಂದ್ಯ ನಡೆಸಬಹುದಿತ್ತು. ಆದರೆ,  ಮೈದಾನದ ಲಭ್ಯ ಇಲ್ಲ ಎಂದರು. ಈ ಅವಧಿಯಲ್ಲಿ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ವತಿಯಿಂದ ಪ್ರಾಂಚೈಸಿ ಆಧಾರಿತ ಎಚ್‌ಪಿಎಲ್ ಕ್ರಿಕೆಟ್ ಟೂರ್ನಿ ನಡೆಸಿದರು. ಇದಕ್ಕೆ ಪ್ರತಿ ಆಟಗಾರರಿಂದ ₹800 ಶುಲ್ಕ ಪಡೆದಿದ್ದಾರೆ’ ಎಂದು ಅವರು ತಿಳಿಸಿದರು.

ಕೆಎಸ್‌ಸಿಎ ಕ್ವಾಲಿಫೈಡ್ ಕೋಚ್  ಜಯರಾಜ್ ನೂಲ್ವಿ ಮಾತನಾಡಿ, ‘ಶಿವಮೊಗ್ಗ, ರಾಯಚೂರು ವಲಯ ಸೇರಿ ವಿವಿಧ ವಲಯಗಳಲ್ಲಿ ಈಗಾಗಲೇ ತಂಡ ಆಯ್ಕೆ ಮಾಡಿ, ಅಭ್ಯಾಸ ನಡೆಸಿದ್ದಾರೆ. ಧಾರವಾಡ ವಲಯದ ಅಂತಿಮ ತಂಡವನ್ನು ಶನಿವಾರ ಪ್ರಕಟಿಸಿದ್ದಾರೆ. ಇದರಿಂದ ಆಟಗಾರರಿಗೆ ಅಭ್ಯಾಸ ಮಾಡಲು ಸಮಯ ಇಲ್ಲದಂತಾಗಿದೆ’ ಎಂದರು.

‘ಆಯ್ಕೆ ಪ್ರಕ್ರಿಯೆಯಲ್ಲಿ ನಿಖಿಲ್ ಭೂಸದ್‌ ಅವರು ಹಸ್ತಕ್ಷೇಪ ಮಾಡುತ್ತಾರೆ. ಆಡುವ ಹನ್ನೊಂದರ ಬಳಗದಲ್ಲಿ ಯಾರಿರಬೇಕು ಎಂಬುದು ಇವರೇ ನಿರ್ಧರಿಸುತ್ತಾರೆ. ಅವರನ್ನು ಕೂಡಲೇ ನಿಮಂತ್ರಕ ಸ್ಥಾನದಿಂದ ಕೆಳಗಿಳಿಸಬೇಕು. ಈಗ ಆಗಿರುವ  ಅನ್ಯಾಯವನ್ನು ಸರಿಪಡಿಸದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.