ಬೆಂಗಳೂರು: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ರೋಜರ್ ಬಿನ್ನಿ ಅವರು ತಾವು ಕ್ರಿಕೆಟಿಗನಾಗಿ ಬೆಳೆಯಲು ವೇದಿಕೆಯಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಸನ್ಮಾನ ಸ್ವೀಕರಿಸಿದರು.
ಕರ್ನಾಟಕದಿಂದ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೇರಿದ ಎರಡನೇ ಕ್ರಿಕೆಟಿಗ ರೋಜರ್ ಬಿನ್ನಿ ಅವರಿಗೆ ಐಪಿಎಲ್ ಸಮಿತಿಯ ನಿಕಟಪೂರ್ವ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಹಾಗೂ ಕ್ರಿಕೆಟ್ ದಂತಕಥೆ ಜಿ.ಆರ್. ವಿಶ್ವನಾಥ್ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೋಜರ್, ತಮ್ಮ ತಂದೆಯನ್ನು ನೆನಪಿಸಿಕೊಂಡು ಭಾವುಕರಾದರು.
‘ಇದು ನನಗೆ ಬಯಸದೇ ಬಂದ ಭಾಗ್ಯ. ಕಳೆದ ಎರಡು ವಾರಗಳಿಂದ ಹಲವಾರು ಜನ ಅಭಿಮಾನಿಗಳು, ಹಿತೈಷಿಗಳು ಹಾಗೂ ಸ್ನೇಹಿತರ ಅಭಿನಂದನೆಗಳ ಸಂದೇಶಗಳು ಬರುತ್ತಲೇ ಇವೆ. ಇಂತಹ ದೊಡ್ಡ ಹುದ್ದೆಗೆ ಏರಿರುವುದು ಸಂತಸ ತಂದಿದೆ. ಕ್ರಿಕೆಟ್‌ನಲ್ಲಿ ಇಲ್ಲಿಯವರೆಗೆ ಮಾಡಿರುವ ಸಾಧನೆಗಳ ಹಿಂದೆ ನನ್ನ ತಂದೆ, ತಾಯಿ ಹಾಗೂ ಕುಟುಂಬದ ಬೆಂಬಲ ಅಪಾರವಾಗಿದೆ’ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಎಸ್‌ಸಿಎ ಉಪಾಧ್ಯಕ್ಷ ಜೆ. ಅಭಿರಾಮ್, ‘ನಾನು ಮತ್ತು ರೋಜರ್ ಶಾಲಾ ಕ್ರಿಕೆಟ್ ದಿನಗಳಿಂದಲೂ ಒಡನಾಡಿಗಳು. ಅವರೊಬ್ಬ ಉತ್ತಮ ಅಥ್ಲೀಟ್ ಆಗಿದ್ದರು. ಜಾವೆಲಿನ್ ಥ್ರೋನಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದರು. ಅವರು ಕ್ರಿಕೆಟ್‌ನತ್ತ ಒಲವು ತೋರಿದ್ದು ದೇಶಕ್ಕೆ ಒಳ್ಳೆಯದಾಯಿತು’ ಎಂದರು.
ಈ ಸಂದರ್ಭದಲ್ಲಿ ರೋಜರ್ ಬಿನ್ನಿಯವರ ಪತ್ನಿ ಸಿಂಥಿಯಾ, ಕಾರ್ಯದರ್ಶಿ ಸಂತೋಷ್ ಮೆನನ್, ಖಜಾಂಚಿ ವಿನಯ್ ಮೃತ್ಯುಂಜಯ, ಜಂಟಿ ಕಾರ್ಯದರ್ಶಿ ಶಾವೀರ್ ತಾರಾಪುರ್, ತಿಲಕನಾಯ್ಡು ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.