ಬೆಂಗಳೂರು: ತಾರಸಿಯ ನೆರಳು ಬಿದ್ದು ಹಸಿರು ಸಿರಿ ಕಳೆದುಕೊಳ್ಳುವುದನ್ನ ತಡೆಯಲು ರಾಜ್ಯ ಕ್ರಿಕೆಟ್ ಸಂಸ್ಥೆಯ ಅಂಗಣದಲ್ಲಿ ಹೊಸ ತಂತ್ರವನ್ನು ಪ್ರಾಯೋಗಿಕವಾಗಿ ಬಳಸಲು ಸಿದ್ಧತೆ ನಡೆದಿದೆ.
ಇದೇ 27ರಂದು ನಡೆಯಲಿರುವ ಆಸ್ಟ್ರೇಲಿಯಾ ಎದುರಿನ ಎರಡನೇ ಟ್ವೆಂಟಿ–20 ಪಂದ್ಯದ ಸಂದರ್ಭದಲ್ಲಿ ಇದು ಬಳಕೆಗೆ ಬರಲಿದೆ.
ಸಬ್ ಏರ್ ಮತ್ತು ಸೋಲಾರ್ ವ್ಯವಸ್ಥೆ ಹಾಗೂ ಒಳಚರಂಡಿ ನೀರನ್ನು ಶುದ್ಧೀಕರಿಸಿ ಮೈದಾನದ ಹಸಿರಿಗೆ ಬಳಸುವ ಪದ್ಧತಿ ಮುಂತಾದ ಕ್ರಾಂತಿಕಾರಕ ಪ್ರಯೋಗಗಳ ಮೂಲಕ ಕೆಎಸ್‌ಸಿಎ ಗಮನ ಸೆಳೆದಿತ್ತು. ಇವುಗಳು ರಾಷ್ಟ್ರದ ಬೇರೆ ಕ್ರಿಕೆಟ್ ಸಂಸ್ಥೆಗಳಿಗೆ ಮಾದರಿಯಾಗಿದ್ದವು.
ಇದೀಗ ನೆರಳು ಬೀಳುವ ಪ್ರದೇಶದ ಹಸಿರಿನ ತಾಜಾತನ ಉಳಿಸುವ ತಂತ್ರದ ವಿಡಿಯೊ ಮಾಡಿ ಬೇರೆ ಸಂಸ್ಥೆಗಳಿಗೆ ಕಳುಹಿಸಿದ್ದು ದೇಶದ ಇತರ ಕ್ರೀಡಾಂಗಣಗಳಲ್ಲೂ ಇದು ಬಳಕೆಗೆ ಬರುವ ಸಾಧ್ಯತೆ ಇದೆ.
ಜರ್ಮನಿಯ ಬಹುರಾಷ್ಟ್ರೀಯ ಕಂಪೆನಿ ಬಿಎಎಸ್‌ಎಫ್ ಅಭಿವೃದ್ಧಿಪಡಿಸಿದ ವಿಶೇಷ ರಾಸಾಯನಿಕ ಬಳಸಿ ಹಸಿರಿನ ತಾಜಾತನ ಉಳಿಯುವಂತೆ ಮಾಡಲಾಗುತ್ತದೆ. ಇದು ಹುಲ್ಲಿನ ಸಹಜ ಬೆಳವಣಿಗೆಗೆ ಮಾರಕವಾಗುವುದಿಲ್ಲ.
‘ಸಾಕಷ್ಟು ಪ್ರಯೋಗಗಳನ್ನು ಮಾಡಿದ ನಂತರ ಈ ರಾಸಾಯನಿಕ ಬಳಸಲು ಮುಂದಾಗಿದ್ದೇವೆ. ಇದು ಯಾವುದೇ ರೀತಿಯಲ್ಲಿ ದುಷ್ಪರಿಣಾಮ ಉಂಟುಮಾಡುವುದಿಲ್ಲ. ಹುಲ್ಲನ್ನು ಗಾಢ ಬಣ್ಣಕ್ಕೆ ಮತ್ತು ತಿಳಿ ಬಣ್ಣಕ್ಕೆ ತಿರುಗಿಸಲು ಇದು ನೆರವಾಗಲಿದೆ’ ಎಂದು ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಯ ಹೆಚ್ಚವರಿ ಕ್ಯುರೇಟರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.