ಶಿವಮೊಗ್ಗ: ಕ್ರಿಕೆಟ್ ಕ್ಲಬ್ ಆಫ್ ಸಾಗರ ತಂಡದ ಆಟಗಾರ ತನ್ಮಯ್ ಮಂಜುನಾಥ್, ಕೆಎಸ್‌ಸಿಎ ಶಿವಮೊಗ್ಗ ವಲಯದ 16 ವರ್ಷದೊಳಗಿನ ಬಾಲಕರ ಕ್ರಿಕೆಟ್ ಟೂರ್ನಿಯಲ್ಲಿ 165 ಎಸೆತಗಳಲ್ಲಿ 407 ರನ್ ಗಳಿಸಿ ನೂತನ ದಾಖಲೆ ನಿರ್ಮಿಸಿದ್ದಾರೆ.
ಇಲ್ಲಿನ ಫೆಸಿಟ್ ಮೈದಾನದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭದ್ರಾವತಿಯ ಎನ್‌ಟಿಸಿಸಿ ತಂಡದ ವಿರುದ್ಧ ಅವರು ಈ ಸಾಧನೆ ಮಾಡಿದ್ದಾರೆ. ತನ್ಮಯ್ ಅಬ್ಬರದ ಬ್ಯಾಟಿಂಗ್‌ನಲ್ಲಿ 24 ಸಿಕ್ಸರ್ ಹಾಗೂ 48 ಬೌಂಡರಿಗಳು ಸೇರಿವೆ.
’ಪಂದ್ಯದ 18ನೇ ಓವರ್‌ನಲ್ಲಿ ತನ್ಮಯ್ ಮಂಜುನಾಥ್ 60 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು’ ಎಂದು ಕೋಚ್ ನಾಗೇಂದ್ರ ಕೆ.ಪಂಡಿತ್ ‘ಪ್ರಜಾವಾಣಿ‘ಗೆ ತಿಳಿಸಿದರು. ಆರಂಭದಲ್ಲಿ ನಿಧಾನವಾಗಿ ಆಡಿದ ತನ್ಮಯ್ ನಂತರ ಅಬ್ಬರಿಸಿದರು.
ಆರಂಭಿಕ ಬ್ಯಾಟರ್ ಎ.ಅಂಶು ಹಾಗೂತನ್ಮಯ್ ಜೋಡಿಯು ಮೊದಲ ವಿಕೆಟ್‌ಗೆ 350 ರನ್ ಕಲೆ ಹಾಕುವ ಮೂಲಕ ಭದ್ರಾವತಿ ತಂಡದ ಬೌಲರ್‌ಗಳನ್ನು ದಂಡಿಸಿದರು. ಅಂಶು 127 (90 ಎಸೆತ) ರನ್ ಗಳಿಸಿ ಔಟಾದರು. ಸಾಗರ ತಂಡ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 583 ರನ್‌ಗಳ ಬೃಹತ್ ಮೊತ್ತೆ ಕಲೆ ಹಾಕಿತು. ತನ್ಮಯ್ ಮಂಜುನಾಥ್ 50ನೇ ಓವರ್‌ನ ಮೂರನೇ ಎಸೆತದಲ್ಲಿ ಕವರ್ಸ್ ಫೀಲ್ಡರ್‌ಗೆ ಕ್ಯಾಚಿತ್ತು ಔಟಾದರು.
ಇದಕ್ಕೆ ಉತ್ತರವಾಗಿ ಭದ್ರಾವತಿ ತಂಡ ಕೇವಲ 73 ರನ್ ಗಳಿಸಿ ಆಲ್ ಔಟ್ ಆಯಿತು. ಸಾಗರ ತಂಡದ ಪರವಾಗಿ ಅಂಶು 5 ವಿಕೆಟ್ ಪಡೆದರೆ ಅಜಿತ್ 4 ವಿಕೆಟ್ ಗಳಿಸಿದರು.
*
ದಿನವೂ ಬೆಳಿಗ್ಗೆ ಸಂಜೆ ಎರಡೂ ಹೊತ್ತು ಪ್ರಾಕ್ಟೀಸ್ ಮಾಡುತ್ತೇನೆ. ಇವತ್ತಿನ ಆಟ ಬಹಳ ಖುಷಿ ಆಯ್ತು. ಅಪ್ಪ–ಅಮ್ಮನ ನೆರವು ಕೋಚ್ ನಾಗೇಂದ್ರ ಪಂಡಿತ್ ಅವರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ.
–ತನ್ಮಯ್ ಮಂಜುನಾಥ್, 407 ರನ್ ಬಾರಿಸಿದ ಆಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.