ಬ್ರಿಟಿಷರು ಪರಿಚಯಿಸಿದ ಆಟ ಕ್ರಿಕೆಟ್. ಇವತ್ತು ಭಾರತದ ಕೋಟಿ ಕೋಟಿ ಜನರ ಹೃದಯ ಸಿಂಹಾಸನ ಅಲಂಕರಿಸಿದೆ. ಅದರಲ್ಲೂ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯು ಜನಮಾನಸದಲ್ಲಿ ವಿಶಿಷ್ಟ ನೆಲೆ ಗಳಿಸಿಕೊಂಡಿದೆ. ಈಗ ’ಲಾಸ್ಟ್ ಬೆಂಚ್‘ ತಂಡವು ಐಪಿಎಲ್‌ಗೆ ‘ಫೋಕ್ ಕ್ರಿಕೆಟ್’ ರೂಪ ಕೊಟ್ಟಿದೆ. ಆದರೆ ಅದಕ್ಕಾಗಿ ಪಾರಂಪರಿಕ ಕಲೆಯನ್ನೇ ಪರಿಣಾಮಕಾರಿಯಾಗಿ ಬಳಸಿಕೊಂಡಿದೆ.
ಕೊರೊನಾ ಬಿಕ್ಕಟ್ಟಿನಲ್ಲಿ ಸಂಕಷ್ಟಕ್ಕೀಡಾಗಿರುವ ಕಲಾವಿದರಿಗೆ ನೆರವಿನಹಸ್ತ ಚಾಚುವ ಉದ್ದೇಶವೂ ಈ ತಂಡದ್ದು.
ತೊಗಲುಬೊಂಬೆಯಾಟ, ವರ್ಲಿ ಕಲೆ ಮತ್ತು ಕೋಲ್ಕತ್ತದ ಕಾಳಿಘಾಟ್ ಪೇಂಟಿಂಗ್‌ಗಳಲ್ಲಿ ಆಟಗಾರರ ಪ್ರತಿಕೃತಿ ಅರಳಿವೆ. ಕೊರೊನಾ ಕಾಲದಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಆಡುವ ಕ್ರಿಕೆಟಿಗರ ಹತ್ತಾರು ಬಗೆಯ ಚಿತ್ರಗಳು, ವಿಡಿಯೊಗಳು, ಮಿಮ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಿವೆ. ಇವೆಲ್ಲವುಗಳ ನಡುವೆ ಪಾರಂಪರಿಕ ಕಲೆಗಳೊಂದಿಗೆ ಕ್ರಿಕೆಟಿಗರನ್ನು ಬಿಂಬಿಸುವ ವಿನೂತನ ಪ್ರಯತ್ನವನ್ನು ಲಾಸ್ಟ್ ಬೆಂಚ್ ಮಾಡಿದೆ.
‘ನಾವು ಪ್ರೀತಿಸುವ ಮತ್ತು ಆರಾಧಿಸುವ ಕ್ರೀಡೆಗೆ ಹೊಸ ಸ್ಪರ್ಶ ನೀಡುವುದು ನಮ್ಮ ಉದ್ದೇಶ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶದಾದ್ಯಂತ ಅಸಂಖ್ಯ ಕಲಾವಿದರ ಜೀವನಾಧಾರಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಇಂತಹ ಸಂದರ್ಭದಲ್ಲಿ ‘ಫೋಕ್ ಕ್ರಿಕೆಟ್’ ಮೂಲಕ ವಿವಿಧ ರಾಜ್ಯಗಳಲ್ಲಿನ ಸಾಂಪ್ರದಾಯಿಕ ಕಲೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮತ್ತು ಕಲಾವಿದರಿಗೆ ನೆರವು ನೀಡಲು ಉದ್ದೇಶಿಸಿದ್ದೇವೆ’ ಎಂದು ಲಾಸ್ಟ್ ಬೆಂಚ್ ನವೋದ್ಯಮದ ಸ್ಥಾಪಕ ಶ್ರೀರಾಮ್ ಸಭಾಪತಿ ಹೇಳುತ್ತಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಕರ್ನಾಟಕದ ತೊಗಲು ಬೊಂಬೆಯಾಟದ ರೂಪಕ ಚಿತ್ರವನ್ನಾಗಿ ರೂಪಿಸಲಾಗಿದೆ. ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ವರ್ಲಿ ಆರ್ಟ್‌ನಲ್ಲಿ ರೂಪುಗೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ನ ಕ್ಯಾಪ್ಟನ್ ಮಹೇಂದ್ರಸಿಂಗ್ ಧೋನಿ ಬೊಮ್ಮಲಾಟಂ ಗೊಂಬೆಯ ಮಾದರಿಯಲ್ಲಿ ರೇಖೆಗಳಲ್ಲಿ ಅರಳಿದ್ದಾರೆ.
‘ಫೋಕ್ ಕ್ರಿಕೆಟ್ (Folk Cricket) ಎನ್ನುವ ಪರಿಕಲ್ಪನೆಯಲ್ಲಿ ಕ್ರಿಕೆಟ್‌ಗೆ ಜಾನಪದದ ಸ್ಪರ್ಶ ನೀಡಿರುವ ಈ ಕಲಾತ್ಮಕ ಕೆಲಸ ಮತ್ತು ರೇಖಾಚಿತ್ರಗಳನ್ನು ರಾಜ್ ರುಫಾರೊ ಅವರು ರಚಿಸಿದ್ದಾರೆ. ಲಾಸ್ಟ್‌ಬೆಂಚ್‌ನ ಮೊದಲ ಸದಸ್ಯರಲ್ಲಿ ಒಬ್ಬರಾಗಿರುವ ರಾಜ್ ಅವರು ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಾಲೇಜ್ ಆಫ್ ಫೈನ್ ಆರ್ಟ್ಸ್‌ನ ವಿದ್ಯಾರ್ಥಿಯಾಗಿದ್ದಾರೆ’ ಎಂದು ಸಭಾಪತಿ ಹೇಳುತ್ತಾರೆ.
ಹೆಚ್ಚಿನ ಮಾಹಿತಿಗಾಗಿ: www.lastbench.studio ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.