ADVERTISEMENT

ಟೆಸ್ಟ್‌ ಕ್ರಿಕೆಟ್ | ಪಾಕ್‌ಗೆ ಸತತ ಸೋಲು: ಇಂಗ್ಲೆಂಡ್‌ಗೆ ಇನಿಂಗ್ಸ್‌ ಜಯ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2024, 15:24 IST
Last Updated 12 ಅಕ್ಟೋಬರ್ 2024, 15:24 IST
ನಾಯಕ ಓಲಿ ಪೋಪ್ (ಎಡಗಡೆ) ಅವರೊಡನೆ ಯಶಸ್ಸು ಹಂಚಿಕೊಂಡ ಜಾಕ್ ಲೀಚ್‌
ನಾಯಕ ಓಲಿ ಪೋಪ್ (ಎಡಗಡೆ) ಅವರೊಡನೆ ಯಶಸ್ಸು ಹಂಚಿಕೊಂಡ ಜಾಕ್ ಲೀಚ್‌   

ಮುಲ್ತಾನ್ (ಎಎಫ್‌ಪಿ): ಎಡಗೈ ಸ್ಪಿನ್ನರ್ ಜಾಕ್ ಲೀಚ್ (6.5–1–30–4) ನೇತೃತ್ವದಲ್ಲಿ ಇಂಗ್ಲೆಂಡ್ ಬೌಲರ್‌ಗಳು ಪಾಕಿಸ್ತಾನದ ಬ್ಯಾಟಿಂಗ್‌ ಪಡೆಯನ್ನು ಧ್ವಂಸಗೊಳಿಸಿದರು. ಮೊದಲ ಟೆಸ್ಟ್‌ ಪಂದ್ಯವನ್ನು ಇಂಗ್ಲೆಂಡ್ ತಂಡ ಅಂತಿಮ ದಿನವಾದ ಶುಕ್ರವಾರ ನಿರೀಕ್ಷೆಯಂತೆ ಇನಿಂಗ್ಸ್‌ ಮತ್ತು 47 ರನ್‌ಗಳಿಂದ ಸುಲಭವಾಗಿ ಗೆದ್ದುಕೊಂಡಿತು.

ನಾಲ್ಕನೇ ದಿನವಾದ ಗುರುವಾರ ಹ್ಯಾರಿ ಬ್ರೂಕ್ ಮತ್ತು ಜೋ ರೂಟ್ ಅವರ ದಾಖಲೆ ಜೊತೆಯಾಟ ಪಂದ್ಯವನ್ನು ಇಂಗ್ಲೆಂಡ್ ಕಡೆ ವಾಲಿಸಿತ್ತು. ಬ್ರೂಕ್‌ ತ್ರಿಶತಕ (317) ದಾಖಲಿಸಿದರೆ, ಜೋ ರೂಟ್ ದ್ವಿಶತಕ (262) ಬಾರಿಸಿದ್ದರು.

ಗುರುವಾರ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 152 ರನ್ ಗಳಿಸಿದ್ದ ಆತಿಥೇಯ ತಂಡದ ಆಟ 220 ರನ್‌ಗಳಿಗೆ ಕೊನೆಗೊಂಡಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1–0 ಮುನ್ನಡೆ ಪಡೆಯಿತು.ಎರಡನೇ ಟೆಸ್ಟ್‌ ಮಂಗಳವಾರದಿಂದ ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೂರನೇ ಹಾಗೂ ಅಂತಿಮ ಟೆಸ್ಟ್‌ ಅ. 24ರಂದು ರಾವಲ್ಪಿಂಡಿಯಲ್ಲಿ ಆರಂಭವಾಗಲಿದೆ.

ADVERTISEMENT

ಇದು ಪಾಕ್ ನೆಲದಲ್ಲಿ ಇಂಗ್ಲೆಂಡ್‌ಗೆ ಸತತ ನಾಲ್ಕನೇ ಟೆಸ್ಟ್ ಜಯ. ಎರಡು ವರ್ಷಗಳ ಹಿಂದೆ 3–0 ಅಂತರದಿಂದ ಟೆಸ್ಟ್ ಸರಣಿಯನ್ನು ಜಯಿಸಿತ್ತು.

ಪಾಕ್ ತಂಡ ತವರಿನಲ್ಲಿ ನಡೆದ ಕೊನೆಯ 11 ಟೆಸ್ಟ್‌ಗಳಲ್ಲಿ ಒಂದನ್ನೂ ಗೆದ್ದಿಲ್ಲ. 2021ರ ಫೆಬ್ರುವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಬಾರಿ ಸ್ವದೇಶದಲ್ಲಿ ಪಾಕಿಸ್ತಾನ ಟೆಸ್ಟ್ ಗೆಲುವು ಕಂಡಿತ್ತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಪಾಕಿಸ್ತಾನ: 556; ಇಂಗ್ಲೆಂಡ್‌: 7 ವಿಕೆಟ್‌ಗೆ 823 ಡಿಕ್ಲೇರ್ಡ್‌; ಎರಡನೇ ಇನಿಂಗ್ಸ್‌: ಪಾಕಿಸ್ತಾನ: 54.5 ಓವರುಗಳಲ್ಲಿ 220 (ಸಲ್ಮಾನ್ ಆಘಾ 63, ಅಮೇರ್ ಜಮಾಲ್ ಔಟಾಗದೇ 55; ಗಸ್‌ ಅಟ್ಕಿನ್ಸನ್ 46ಕ್ಕೆ2, ಬ್ರೈಡನ್ ಕಾರ್ಸ್‌ 66ಕ್ಕೆ2, ಜಾಕ್ ಲೀಚ್ 30ಕ್ಕೆ4). ‍ಪಂದ್ಯದ ಆಟಗಾರ: ಹ್ಯಾರಿ ಬ್ರೂಕ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.