ಲಖನೌ: ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಐಪಿಎಲ್ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಜಿಗಿಯಿತು. ಭಾನುವಾರ ನಡೆದ ಪಂದ್ಯದಲ್ಲಿ ಸುನಿಲ್ ನಾರಾಯಣ (81, 39ಎ, 4X6, 6X7) ಅವರ ಸ್ಫೋಟಕ ಶೈಲಿಯ ಬ್ಯಾಟಿಂಗ್, ಹರ್ಷಿತ್ ರಾಣಾ (24ಕ್ಕೆ3) ಹಾಗೂ ವರುಣ್ ಚಕ್ರವರ್ತಿ (30ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಕೋಲ್ಕತ್ತ ತಂಡವು ಲಖನೌ ಸೂಪರ್ ಜೈಂಟ್ಸ್ ತಂಡದ ವಿರುದ್ಧ 98 ರನ್‌ಗಳ ಗೆಲುವು ದಾಖಲಿಸಿತು.
11 ಪಂದ್ಯಗಳನ್ನು ಆಡಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಎಂಟರಲ್ಲಿ ಗೆದ್ದು 16 ಅಂಕದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅಷ್ಟೇ ಪಂದ್ಯಗಳಲ್ಲಿ 12 ಪಾಯಿಂಟ್ಸ್ ಸಂಪಾದಿಸಿರುವ ಲಖನೌ ತಂಡವು ನಾಲ್ಕರಿಂದ ಐದನೇ ಸ್ಥಾನಕ್ಕೆ ಕುಸಿದಿದೆ.
ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಖನೌ ತಂಡದ ನಾಯಕ ಕೆ.ಎಲ್. ರಾಹುಲ್ ನಿರ್ಧಾರ ಕೈಕೊಟ್ಟಿತು.
ಆರಂಭದಿಂದಲೇ ಅಬ್ಬರಿಸಿದ ಸುನಿಲ್ ಮತ್ತು ಫಿಲ್ ಸಾಲ್ಟ್ ಅವರು ನಾಲ್ಕು ಓವರ್‌ಗಳಲ್ಲಿ 61 ರನ್ ಸೇರಿಸಿದರು. ಇವರಿಬ್ಬರ ಆರಂಭಿಕ ಜೊತೆಯಾಟದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 235 ರನ್ ಗಳಿಸಿತು.
ಈ ಗುರಿ ಬೆನ್ನತ್ತಿದ ಲಖನೌ ಸೂಪರ್ ಜೈಂಟ್ಸ್ ತಂಡ 137 ರನ್‌ಗಳಿಗೆ ಆಟ ಮುಗಿಸಿತು. ರಾಹುಲ್ (25) ಹಾಗೂ ಮಾರ್ಕಸ್ ಸ್ಟೊಯಿನಿಸ್ (36) ಹೊರತು ಪಡಿಸಿದರೆ ಉಳಿದವರಿಂದ ಬೆಂಬಲ ದೊರೆಯಲಿಲ್ಲ. ಕೋಲ್ಕತ್ತ ಬೌಲರ್‌ಗಳು ಕಾಡಿದರು.
ಸುನಿಲ್ ನಾರಾಯಣ 38 ಎಸೆತಗಳಲ್ಲಿ 81 ರನ್ ಗಳಿಸಿದರು. ಐದನೇ ಓವರ್‌ನಲ್ಲಿ ನವೀನ್ ಉಲ್ ಹಕ್ ಎಸೆತವನ್ನು ಆಡುವ ಭರದಲ್ಲಿ ಸಾಲ್ಟ್ (32; 14ಎ, 4X6, 6X1) ಔಟಾದರು. ಆದರೆ ಸುನಿಲ್ ಅಬ್ಬರದ ಆಟ ನಿಲ್ಲಲಿಲ್ಲ. ಸುನಿಲ್ 7 ಸಿಕ್ಸರ್ ಮತ್ತು ಅರ್ಧ ಡಜನ್ ಬೌಂಡರಿ ಸಿಡಿಸಿದರು. ಅವರಿಗೆ ಅಂಗಕ್ರಿಷ್ ರಘುವಂಶಿ (32; 26ಎ, 4X3, 6X1) ಉತ್ತಮ ಜೊತೆ ನೀಡಿದರು. ಇವರಿಬ್ಬರೂ ಎರಡನೇ ವಿಕೆಟ್ ಜತೆಯಾಟದಲ್ಲಿ 79 ರನ್ ಸೇರಿಸಿದರು.
ಸಂಕ್ಷಿಪ್ತ ಸ್ಕೋರು:
ಕೋಲ್ಕತ್ತ ನೈಟ್ ರೈಡರ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 235 (ಫಿಲ್ ಸಾಲ್ಟ್ 32, ಸುನಿಲ್ ನಾರಾಯಣ 81, ಅಂಗಕ್ರಿಷ್ ರಘುವಂಶಿ 32, ಶ್ರೇಯಸ್ ಅಯ್ಯರ್ 23, ರಮಣದೀಪ್ ಸಿಂಗ್ ಔಟಾಗದೆ 25. ನವೀನ್ ಉಲ್ ಹಕ್ 49ಕ್ಕೆ3)
ಲಖನೌ ಸೂಪರ್ ಜೈಂಟ್ಸ್: 16.1 ಓವರ್‌ಗಳಲ್ಲಿ 137 (ಕೆ.ಎಲ್.ರಾಹುಲ್ 25, ಮಾರ್ಕಸ್ ಸ್ಟೊಯಿನಿಸ್ 36, ಹರ್ಷಿತ್ ರಾಣಾ 24ಕ್ಕೆ3, ವರುಣ್ ಚಕ್ರವರ್ತಿ 30ಕ್ಕೆ3) ಪಂದ್ಯ ಶ್ರೇಷ್ಠ: ಸುನಿಲ್ ನಾರಾಯಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.