ಬೆಂಗಳೂರು: ಉತ್ತಮ ಬೌಲಿಂಗ್ ಮಾಡಿದ ಎಂ.ಜಿ. ನವೀನ್ ಮತ್ತು ಅರ್ಧಶತಕ ಸಿಡಿಸಿದ ಆರ್.ಎಲ್. ಚೇತನ್ ಅವರ ಬಲದಿಂದ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಬೆಂಗಳೂರು ತಂಡವು 9 ವಿಕೆಟ್‌ಗಳಿಂದ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ ಸುಲಭ ಜಯ ಸಾಧಿಸಿತು.
ಮಧ್ಯಾಹ್ನ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ತಂಡದ ನಾಯಕ ಮಯಂಕ್ ಅಗರವಾಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ನವೀನ್ (8ಕ್ಕೆ2) ಮತ್ತು ಆದಿತ್ಯ ಗೋಯಲ್ (43ಕ್ಕೆ3) ಅವರ ಅಮೋಘ ಬೌಲಿಂಗ್ ಮುಂದೆ ಗುಲ್ಬರ್ಗ ತಂಡವು 16.4 ಓವರ್‌ಗಳಲ್ಲಿ 116 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ನಾಯಕ ದೇವದತ್ತ ಪಡಿಕ್ಕಲ್ (20; 9ಎ, 4X4, 6X1) ಮತ್ತು ಪ್ರವೀಣ ದುಬೆ (19; 23ಎ, 4X2) ಅವರು ಒಂದಿಷ್ಟು ಹೋರಾಟ ನಡೆಸಿದರು.
ಆದರೆ ಉಳಿದ ಬ್ಯಾಟರ್‌ಗಳು ಹೆಚ್ಚು ರನ್ ಗಳಿಸಲಿಲ್ಲ. ಇದರಿಂದಾಗಿ ತಂಡವು ಸಾಧಾರಣ ಮೊತ್ತ ಗಳಿಸಿತು.
ಗುರಿ ಬೆನ್ನಟ್ಟಿದ ಬೆಂಗಳೂರು ತಂಡವು 11.2 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿ ಜಯಿಸಿತು. ಚೇತನ್ (53; 34ಎ, 4X5, 6X3) ಮತ್ತು ಮಯಂಕ್ ಅಗರವಾಲ್ (ಔಟಾಗದೆ 47; 29ಎ, 4X6, 6X1) ಅವರ ಶತಕದ ಜೊತೆಯಾಟದಿಂದಾಗಿ ತಂಡವು ಬೇಗನೆ ಗುರಿ ಮುಟ್ಟಿತು. ಆರಂಭಿಕ ಜೋಡಿಯು 59 ಎಸೆತಗಳಲ್ಲಿ 101 ರನ್ ಸೇರಿಸಿದರು.
ಸಂಕ್ಷಿಪ್ತ ಸ್ಕೋರು:
ಗುಲ್ಬರ್ಗ ಮಿಸ್ಟಿಕ್ಸ್: 16.4 ಓವರ್‌ಗಳಲ್ಲಿ 116 (ಲವನೀತ್ ಸಿಸೊಡಿಯಾ 14, ದೇವದತ್ತ ಪಡಿಕ್ಕಲ್ 20, ಪ್ರವೀಣ ದುಬೆ 19, ಲವೀಶ್ ಕೌಶಲ್ 22ಕ್ಕೆ2, ಆದಿತ್ಯ ಗೋಯಲ್ 43ಕ್ಕೆ3, ಎಂ.ಜಿ. ನವೀನ್ 8ಕ್ಕೆ2, ಮೊಹಸಿನ್ ಖಾನ್ 8ಕ್ಕೆ2) ಬೆಂಗಳೂರು ಬ್ಲಾಸ್ಟರ್ಸ್: 11.2 ಓವರ್‌ಗಳಲ್ಲಿ 1 ವಿಕೆಟ್‌ಗೆ 117 (ಎಲ್.ಆರ್. ಚೇತನ್ 53, ಮಯಂಕ್ ಅಗರವಾಲ್ ಔಟಾಗದೆ 47, ಭುವನ್ ರಾಜು ಔಟಾಗದೆ 7, ವೈಶಾಖ ವಿಜಯಕುಮಾರ್ 44ಕ್ಕೆ1) ಫಲಿತಾಂಶ: ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ 9 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ: ಎಂ.ಜಿ. ನವೀನ್.
ಮಂಗಳೂರು ಡ್ರ್ಯಾಗನ್ಸ್ –ಹುಬ್ಬಳ್ಳಿ ಟೈಗರ್ಸ್ (ಮಧ್ಯಾಹ್ನ 3ರಿಂದ)
ಬೆಂಗಳೂರು ಬ್ಲಾಸ್ಟರ್ಸ್–ಮೈಸೂರು ವಾರಿಯರ್ಸ್ (ರಾತ್ರಿ 7ರಿಂದ)
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.