ADVERTISEMENT

ಮಹಾರಾಜ ಟ್ರೋಫಿ | ಕಾರ್ತಿಕ್–ಕರುಣ್ ಜೊತೆಯಾಟದ ಬಲ

ಮಹಾರಾಜ ಟ್ರೋಫಿ ಕ್ರಿಕೆಟ್:ಮನೋಜ್ ಭಾಂಡಗೆ ಅಬ್ಬರ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2024, 16:22 IST
Last Updated 1 ಸೆಪ್ಟೆಂಬರ್ 2024, 16:22 IST
ಮೈಸೂರು ವಾರಿಯರ್ಸ್ ತಂಡದ ನಾಯಕ ಕರುಣ್ ನಾಯರ್ ಬ್ಯಾಟಿಂಗ್‌  
ಮೈಸೂರು ವಾರಿಯರ್ಸ್ ತಂಡದ ನಾಯಕ ಕರುಣ್ ನಾಯರ್ ಬ್ಯಾಟಿಂಗ್‌     

ಬೆಂಗಳೂರು: ಆರಂಭಿಕ ಬ್ಯಾಟರ್ ಎಸ್‌.ಯು. ಕಾರ್ತಿಕ್ ಮತ್ತು ನಾಯಕ ಕರುಣ್ ನಾಯರ್ ಅವರ ಅಬ್ಬರದ ಅರ್ಧಶತಕಗಳ ಬಲದಿಂದ ಮೈಸೂರು ವಾರಿಯರ್ಸ್ ತಂಡವು ಮಹಾರಾಜ ಟ್ರೋಫಿ ಫೈನಲ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ಗೆ ದೊಡ್ಡ ಮೊತ್ತದ ಸವಾಲೊಡ್ಡಿತು. ಮನೋಜ್ ಭಾಂಡಗೆ ಅವರ ಬಿರುಸಿನ ಬ್ಯಾಟಿಂಗ್ ಕೂಡ ತಂಡಕ್ಕೆ ಬಲ ತುಂಬಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ತಂಡದ ನಾಯಕ ಮಯಂಕ್ ಅಗರವಾಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಬೌಲರ್‌ಗಳು ಮೈಸೂರು ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸುವಲ್ಲಿ ವಿಫಲರಾದರು. ನವೀನ್ ಎಂ.ಜಿ ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಕಾರ್ತಿಕ್ ಸಿ.ಎ ವಿಕೆಟ್ ಗಳಿಸಿದರು. ಈ ಹಂತದಲ್ಲಿ ಇನ್ನೊಬ್ಬ ಆರಂಭಿಕ ಬ್ಯಾಟರ್ ಎಸ್‌.ಯು. ಕಾರ್ತಿಕ್  ಅವರೊಂದಿಗೆ ಜೊತೆಯಾದ ನಾಯಕ ಕರುಣ್ ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ 81 ರನ್‌ ಸೇರಿಸಿದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 207 ರನ್‌ ಗಳಿಸಿತು. 

ಶುಭಾಂಗ್ ಹೆಗಡೆ ಹಾಕಿದ 14ನೇ ಓವರ್‌ನಲ್ಲಿ ಕಾರ್ತಿಕ್ (71; 44ಎ) ವಿಕೆಟ್ ಪತನವಾಯಿತು.  ಅವರು 7 ಬೌಂಡರಿ ಮತ್ತು 3 ಸಿಕ್ಸರ್‌ ಹೊಡೆದರು. ಜೊತೆಯಾಟವು ಮುರಿಯಿತು. ಹರ್ಷಿಲ್ ಧಮಾನಿ 6 ರನ್ ಗಳಿಸಿ ನಿರ್ಗಮಿಸಿದರು. ಕ್ರೀಸ್‌ನಲ್ಲಿದ್ದ ಕರುಣ್ ಜೊತೆಗೂಡಿದ ಮನೋಜ್ ಭಾಂಡಗೆ ಮಿಂಚಿದರು. ಇಬ್ಬರ ಜೊತೆಯಾಟದಲ್ಲಿ 48 ರನ್‌ಗಳು ಸೇರಿದವು. ಕರುಣ್ 45 ಎಸೆತಗಳಲ್ಲಿ 66 ರನ್ ಗಳಿಸಿದರು.  6 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿದರು.  18ನೇ ಓವರ್‌ನಲ್ಲಿ ಅವರ ವಿಕೆಟ್ ಗಳಿಸಿದ ನವೀನ್ ಜೊತೆಯಾಟವನ್ನು ಮುರಿದರು. 

ADVERTISEMENT

ಆದರೆ ಮನೋಜ್ ಆಟಕ್ಕೆ ಕಡಿವಾಣ ಹಾಕಲು ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಕ್ರೀಡಾಂಗಣದಲ್ಲಿ ಪಂದ್ಯ ನೋಡಲು ಸೇರಿದ್ದ ಅಭಿಮಾನಿಗಳನ್ನು ಮನೋಜ್ (ಔಟಾಗದೆ 44) ಮನರಂಜಿಸಿದರು. 5 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದ ಅವರು ಮನಸೂರೆಗೊಂಡರು. ಕೇವಲ 13 ಎಸೆತಗಳನ್ನು ಆಡಿದ ಅವರು ಬೌಲರ್‌ಗಳಿಗೆ ಬೆವರಿಳಿಸಿದರು.  

ಸಂಕ್ಷಿಪ್ತ ಸ್ಕೋರು: ಮೈಸೂರು ವಾರಿಯರ್ಸ್: 20 ಓವರ್‌ಗಳಲ್ಲಿ 4ಕ್ಕೆ207 (ಎಸ್‌.ಯು. ಕಾರ್ತಿಕ್ 71, ಕರುಣ್ ನಾಯರ್ 66, ಮನೋಜ್ ಭಾಂಡಗೆ ಔಟಾಗದೆ 44, ಎಂ.ಜಿ. ನವೀನ್ 44ಕ್ಕೆ2) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.