ಬೆಂಗಳೂರು: ಕರುಣ್ ನಾಯರ್ ನಾಯಕತ್ವದ ಮೈಸೂರು ವಾರಿಯರ್ಸ್ ಮಹಾರಾಜ ಟ್ರೋಫಿ ಗೆದ್ದಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ 45 ರನ್‌ಗಳಿಂದ ಬೆಂಗಳೂರು ಬ್ಲಾಸ್ಟರ್ಸ್ ಎದುರು ಜಯಿಸಿದ ಮೈಸೂರು ತಂಡವು ಪ್ರಶಸ್ತಿಗೆ ಮುತ್ತಿಕ್ಕಿತು. ಹೋದ ವರ್ಷವೂ ಫೈನಲ್ ತಲುಪಿದ್ದ ಮೈಸೂರು ತಂಡವು ಹುಬ್ಬಳ್ಳಿ ಟೈಗರ್ಸ್ ಎದುರು ಸೋತಿತ್ತು. ಈ ಬಾರಿ ಸೆಮಿಫೈನಲ್‌ನಲ್ಲಿ ಹುಬ್ಬಳ್ಳಿ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿತ್ತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಬೆಂಗಳೂರು ತಂಡವು ಮೈಸೂರು ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ವಿಫಲವಾಯಿತು. ಮೈಸೂರು ತಂಡವು ಆರಂಭಿಕ ಬ್ಯಾಟರ್ ಎಸ್.ಯು. ಕಾರ್ತಿಕ್ , ನಾಯಕ ಕರುಣ್ ನಾಯರ್ ಅವರ ಅರ್ಧಶತಕಗಳು ಮತ್ತು ಮನೋಜ್ ಭಾಂಡಗೆಯ ಮಿಂಚಿನ ಬ್ಯಾಟಿಂಗ್‌ನಿಂದಾಗಿ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 207 ರನ್ ಗಳಿಸಿತು.
ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಮಯಂಕ್ ಅಗರವಾಲ್ ನಾಯಕತ್ವದ ಬೆಂಗಳೂರು ತಂಡಕ್ಕೆ ಮಧ್ಯಮವೇಗಿ ವಿದ್ಯಾಧರ್ ಪಾಟೀಲ (19ಕ್ಕೆ3) ಮತ್ತು ಅನುಭವಿ ಸ್ಪಿನ್ನರ್ ಕೆ. ಗೌತಮ್ (23ಕ್ಕೆ2) ಸಿಂಹಸ್ವಪ್ನರಾದರು. ಬೆಂಗಳೂರು ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 162 ರನ್ ಗಳಿಸಿತು.
ಕಾರ್ತಿಕ್–ಕರುಣ್ ಜೊತೆಯಾಟ: ನವೀನ್ ಎಂ.ಜಿ ಅವರು ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಕಾರ್ತಿಕ್ ಸಿ.ಎ ವಿಕೆಟ್ ಗಳಿಸಿದರು. ಈ ಹಂತದಲ್ಲಿ ಇನ್ನೊಬ್ಬ ಆರಂಭಿಕ ಬ್ಯಾಟರ್ ಎಸ್.ಯು. ಕಾರ್ತಿಕ್ ಅವರೊಂದಿಗೆ ಜೊತೆಯಾದ ನಾಯಕ ಕರುಣ್ ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ 81 ರನ್ ಸೇರಿಸಿದರು.
ಶುಭಾಂಗ್ ಹೆಗಡೆ ಹಾಕಿದ 14ನೇ ಓವರ್‌ನಲ್ಲಿ ಕಾರ್ತಿಕ್ (71; 44ಎ) ವಿಕೆಟ್ ಪತನವಾಯಿತು. ಅವರು 7 ಬೌಂಡರಿ ಮತ್ತು 3 ಸಿಕ್ಸರ್ ಹೊಡೆದರು. ಹರ್ಷಿಲ್ ಧಮಾನಿ 6 ರನ್ ಗಳಿಸಿ ನಿರ್ಗಮಿಸಿದರು. ಕ್ರೀಸ್‌ನಲ್ಲಿದ್ದ ಕರುಣ್ ಜೊತೆಗೂಡಿದ ಮನೋಜ್ ಭಾಂಡಗೆ ಮಿಂಚಿದರು. ಕರುಣ್ 45 ಎಸೆತಗಳಲ್ಲಿ 66 ರನ್ ಗಳಿಸಿದರು. 6 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿದರು. 18ನೇ ಓವರ್‌ನಲ್ಲಿ ಅವರ ವಿಕೆಟ್ ಗಳಿಸಿದ ನವೀನ್ ಅವರು ಜೊತೆಯಾಟ ಮುರಿದರು.
ಆದರೆ ಮನೋಜ್ ಆಟಕ್ಕೆ ಕಡಿವಾಣ ಹಾಕಲು ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಕ್ರೀಡಾಂಗಣದಲ್ಲಿ ಪಂದ್ಯ ನೋಡಲು ಸೇರಿದ್ದ ಅಭಿಮಾನಿಗಳನ್ನು ಮನೋಜ್ (ಔಟಾಗದೆ 44) ಮನರಂಜಿಸಿದರು. 5 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದ ಅವರು ಮನಸೂರೆಗೊಂಡರು. ಕೇವಲ 13 ಎಸೆತಗಳನ್ನು ಆಡಿದ ಅವರು ಬೌಲರ್‌ಗಳಿಗೆ ಬೆವರಿಳಿಸಿದರು.
ಸಂಕ್ಷಿಪ್ತ ಸ್ಕೋರು: ಮೈಸೂರು ವಾರಿಯರ್ಸ್: 20 ಓವರ್‌ಗಳಲ್ಲಿ 4ಕ್ಕೆ207 (ಎಸ್.ಯು. ಕಾರ್ತಿಕ್ 71, ಕರುಣ್ ನಾಯರ್ 66, ಮನೋಜ್ ಭಾಂಡಗೆ ಔಟಾಗದೆ 44, ಎಂ.ಜಿ. ನವೀನ್ 44ಕ್ಕೆ2) ಬೆಂಗಳೂರು ಬ್ಲಾಸ್ಟರ್ಸ್: 20 ಓವರ್‌ಗಳಲ್ಲಿ 8ಕ್ಕೆ162 (ಎಲ್.ಆರ್. ಚೇತನ್ 51, ಕ್ರಾಂತಿಕುಮಾರ್ ಔಟಾಗದೆ 39, ಅನಿರುದ್ಧ ಜೋಶಿ 18, ಎಂ.ಜಿ. ನವೀನ್ 17, ವಿದ್ಯಾಧರ್ ಪಾಟೀಲ 19ಕ್ಕೆ3, ಕೆ. ಗೌತಮ್ 23ಕ್ಕೆ2) ಫಲಿತಾಂಶ: ಮೈಸೂರು ವಾರಿಯರ್ಸ್ ತಂಡಕ್ಕೆ 45 ರನ್‌ಗಳ ಜಯ. ಪಂದ್ಯದ ಆಟಗಾರ:
ಮಧ್ಯಮವೇಗಿ ವಿದ್ಯಾಧರ್ ಪಾಟೀಲಗೆ ಮೂರು ವಿಕೆಟ್ 5 ಸಿಕ್ಸರ್ ಸಿಡಿಸಿದ ಮನೋಜ್ ಭಾಂಡಗೆ ಎಸ್.ಯು. ಕಾರ್ತಿಕ್ ಉಪಯುಕ್ತ ಅರ್ಧಶತಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.