ಬೆಂಗಳೂರು: ಎಡಗೈ ಬ್ಯಾಟರ್ ಆರ್. ಸ್ಮರಣ್ ಅವರ ಅಬ್ಬರದ ಶತಕದಿಂದಾಗಿ ಗುಲ್ಬರ್ಗ ಮಿಸ್ಟಿಕ್ಸ್ ತಂಡವು ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.
ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಫಲಿತಾಂಶವು ಕೊನೆಯ ಎಸೆತದಲ್ಲಿ ನಿರ್ಧಾರವಾಯಿತು. 197 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಗುಲ್ಬರ್ಗ ತಂಡವು ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿಯೇ 7 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಛಲದ ಬ್ಯಾಟಿಂಗ್ ಮಾಡಿದ ಸ್ಮರಣ್ (ಔಟಾಗದೆ 104; 60ಎ, 4X11, 6X4) ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 200 ರನ್ ಗಳಿಸಿತು.
ಸ್ಮರಣ್ ಅವರು ಕೆ.ವಿ. ಅನೀಶ್ (24; 17ಎ) ಅವರೊಂದಿಗೆ 3ನೇ ವಿಕೆಟ್ ಜೊತೆಯಾಟದಲ್ಲಿ 53 ರನ್ ಸೇರಿಸಿದರು. ಪ್ರವೀಣ ದುಬೆ (37; 21ಎ) ಅವರೊಂದಿಗೆ 6ನೇ ವಿಕೆಟ್ ಜೊತೆಯಾ
ಟದಲ್ಲಿ 83 ರನ್ ಸೇರಿಸಿದ್ದು ಗೆಲುವಿನಲ್ಲಿ ಪ್ರಮುಖ ಘಟ್ಟವಾಯಿತು. ಆದರೆ 19ನೇ ಓವರ್‌ನಲ್ಲಿ ವಿದ್ಯಾಧರ ಪಾಟೀಲ ಹಾಕಿದ ಓವರ್‌ನಲ್ಲಿ ದುಬೆ ಔಟಾದರು. ಇದರಿಂದಾಗಿ ಆತಂಕ ಮೂಡಿತು. ಕೊನೆಯ ಓವರ್‌ನಲ್ಲಿ ತಂಡಕ್ಕೆ 10 ರನ್‌ಗಳ ಅಗತ್ಯವಿತ್ತು. ಸ್ಮರಣ್ ಅವರೊಂದಿಗೆ ಜೊತೆಗೂಡಿದ ರಿತೇಶ್ ಭಟ್ಕಳ 4 ಎಸೆತಗಳಲ್ಲಿ 6 ರನ್ ಗಳಿಸಿದರು. ಆದರೆ ರಿತೇಶ್ ಐದನೇ ಎಸೆತದಲ್ಲಿ ರನ್‌ಔಟ್ ಆದರು. ಕೊನೆಯ ಎಸೆತದಲ್ಲಿ ಕ್ರೀಸ್‌ಗೆ ಬಂದ ಸ್ಮರಣ್ ಅವರು ಮನೋಜ್ ಭಾಂಡಗೆ ಎಸೆತವನ್ನು ಬೌಂಡರಿಗೆರೆ ದಾಟಿಸಿದರು.
ಕರುಣ್–ದ್ರಾವಿಡ್ ಜೊತೆಯಾಟ: ಟಾಸ್ ಗೆದ್ದ ಗುಲ್ಬರ್ಗ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೈಸೂರು ತಂಡವು ಆರಂಭದಲ್ಲಿಯೇ ಆಘಾತ ಅನುಭವಿಸಿತು. ಪೃಥ್ವಿರಾಜ್ ಶೇಖಾವತ್ ಹಾಕಿದ ನಾಲ್ಕನೇ ಓವರ್‌ನಲ್ಲಿ ಆರಂಭಿಕ ಜೋಡಿ ಎಸ್.ಯು. ಕಾರ್ತಿಕ್ ಮತ್ತು ಸಿ.ಎ. ಕಾರ್ತಿಕ್ ಅವರಿಬ್ಬರೂ ಔಟಾದರು. ನಾಯಕ ಕರುಣ್ ನಾಯರ್ (66; 35ಎ, 4X8, 6X3) ಮತ್ತು ಸಮಿತ್ ದ್ರಾವಿಡ್ (33; 24ಎ, 4X4, 6X1) ಮೂರನೇ ವಿಕೆಟ್ ಜೊತೆಯಾಟದಲ್ಲಿ 81 ರನ್ ಗಳಿಸಿದರು.
ಕೊನೆಯ ಹಂತದ ಓವರ್‌ಗಳಲ್ಲಿ ಜೆ. ಸುಚಿತ್ 13 ಎಸೆತಗಳಲ್ಲಿ 40 ರನ್ ಗಳಿಸಿದರು. ಇದರಿಂದಾಗಿ ತಂಡವು ದೊಡ್ಡ ಮೊತ್ತ ಗಳಿಸಿತು.
ಸಂಕ್ಷಿಪ್ತ ಸ್ಕೋರು:
ಮೈಸೂರು ವಾರಿಯರ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 196 (ಕರುಣ್ ನಾಯರ್ 66, ಸಮಿತ್ ದ್ರಾವಿಡ್ 33, ಜೆ. ಸುಚಿನ್ 40, ಮೊನಿಷ್ ರೆಡ್ಡಿ 25ಕ್ಕೆ2, ಪೃಥ್ವಿರಾಜ್ ಶೇಖಾವತ್ 28ಕ್ಕೆ2, ಯಶೋವರ್ಧನ್ ಪರಂತಾಪ್ 31ಕ್ಕೆ2)
ಗುಲ್ಬರ್ಗ ಮಿಸ್ಟಿಕ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 200 (ಕೆ.ವಿ. ಅನೀಶ್ 24, ಆರ್.ಸ್ಮರಣ್ ಔಟಾಗದೆ 104, ಪ್ರವೀಣ ದುಬೆ 37, ವಿದ್ಯಾಧರ ಪಾಟೀಲ 42ಕ್ಕೆ2, ಮನೋಜ್ ಭಾಂಡಗೆ 40ಕ್ಕೆ2) ಫಲಿತಾಂಶ: ಗುಲ್ಬರ್ಗ ಮಿಸ್ಟಿಕ್ಸ್‌ಗೆ 3 ವಿಕೆಟ್ ಜಯ. ಪಂದ್ಯದ ಆಟಗಾರ: ಆರ್. ಸ್ಮರಣ್.
ಶಿವಮೊಗ್ಗ ಲಯನ್ಸ್: 20 ಓವರ್‌ಗಳಲ್ಲಿ 9ಕ್ಕೆ 163 (ಧುರಿ 29, ಹಾರ್ದಿಕ್ ರಾಜ್ 69, ಲವೀಶ್ ಕೌಶಲ್ 34ಕ್ಕೆ 2, ಶುಭಾಂಗ್ ಹೆಗ್ಡೆ 32ಕ್ಕೆ 2).
ಬೆಂಗಳೂರು ಬ್ಲಾಸ್ಟರ್ಸ್: 17.2 ಓವರ್‌ಗಳಲ್ಲಿ 3ಕ್ಕೆ 168 (ಆದಿತ್ಯ ಗೋಯಲ್ 29, ಮಯಂಕ್ ಅಗರವಾಲ್ 42, ಭುವನ್ ಎಂ.ರಾಜು ಔಟಾಗದೇ 59, ಸೂರಜ್ ಅಹುಜಾ 23; ರೋಹಿತ್ ಕೆ. 23ಕ್ಕೆ 2). ಫಲಿತಾಂಶ: ಬೆಂಗಳೂರು ಬ್ಲಾಸ್ಟರ್ಸ್‌ಗೆ 7 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ: ಭುವನ್ ಎಂ. ರಾಜು
ಇಂದಿನ ಪಂದ್ಯಗಳು
ಬೆಂಗಳೂರು ಬ್ಲಾಸ್ಟರ್ಸ್–ಹುಬ್ಬಳ್ಳಿ ಟೈಗರ್ಸ್ (ಮಧ್ಯಾಹ್ನ 3)
ಮೈಸೂರು ವಾರಿಯರ್ಸ್–ಮಂಗಳೂರು ಡ್ರ್ಯಾಗನ್ಸ್ (ರಾತ್ರಿ 7)
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.