ADVERTISEMENT

ಮಹಾರಾಜ ಟ್ರೋಫಿ | ವಿದ್ವತ್ ದಾಳಿ: ಗೆದ್ದ ಹುಬ್ಬಳ್ಳಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 15:25 IST
Last Updated 19 ಆಗಸ್ಟ್ 2024, 15:25 IST
ವಿದ್ವತ್ ಕಾವೇರಪ್ಪ 
ವಿದ್ವತ್ ಕಾವೇರಪ್ಪ    

ಬೆಂಗಳೂರು: ವೇಗಿ ವಿದ್ವತ್ ಕಾವೇರಪ್ಪ ಅವರ ಪರಿಣಾಮಕಾರಿ ದಾಳಿ ಹಾಗೂ ತಿಪ್ಪಾರೆಡ್ಡಿಯವರ  ಉತ್ತಮ ಬ್ಯಾಟಿಂಗ್‌ ಬಲದಿಂದ ಹುಬ್ಬಳ್ಳಿ ಟೈಗರ್ಸ್ ತಂಡವು ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸತತ ಮೂರನೇ ಜಯ ಸಾಧಿಸಿತು. ಬೆಂಗಳೂರು ಬ್ಲಾಸ್ಟರ್ಸ್‌ ಮೊದಲ ಸೋಲಿನ ಕಹಿಯುಂಡಿತು. 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಹುಬ್ಬಳ್ಳಿ ತಂಡವು 5 ವಿಕೆಟ್‌ಗಳಿಂದ ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ ಜಯಿಸಿತು. ಬೆಂಗಳೂರು ತಂಡಕ್ಕೆ ಇದು ನಾಲ್ಕನೇ ಪಂದ್ಯವಾಗಿದೆ. ಕಳೆದ ಮೂರರಲ್ಲಿ ಜಯಿಸಿತ್ತು. 

ಟಾಸ್ ಗೆದ್ದ ಹುಬ್ಬಳ್ಳಿ ತಂಡದ ನಾಯಕ ಮನೀಷ್ ಪಾಂಡೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಬೆಂಗಳೂರು ತಂಡವು ಆರಂಭಿಕ ಬ್ಯಾಟರ್ ಎಲ್‌.ಆರ್. ಚೇತನ್ (48; 35ಎ, 4X5, 6X2) ಮತ್ತು ಶುಭಾಂಗ್ ಹೆಗಡೆ (ಔಟಾಗದೆ 52, 36ಎ, 4X5, 6X1) ಅವರ ನೆರವಿನಿಂದ 19.5 ಓವರ್‌ಗಳಲ್ಲಿ 142 ರನ್‌ ಗಳಿಸಿತು. ವಿದ್ವತ್ ಮತ್ತು ಮನ್ವಂತ್ ಅವರು ತಲಾ 3 ವಿಕೆಟ್ ಗಳಿಸಿದರು. ಅವರಿಬ್ಬರ ದಾಳಿಯ ಮುಂದೆ ಉಳಿದೆಲ್ಲ ಬ್ಯಾಟರ್‌ಗಳೂ ಬೇಗನೆ ಔಟಾದರು. 

ADVERTISEMENT

ಗುರಿ ಬೆನ್ನಟ್ಟಿದ ಹುಬ್ಬಳ್ಳಿ ತಂಡವು 18.5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 144 ರನ್‌ ಗಳಿಸಿ ಗೆದ್ದಿತು. 3ನೇ ಓವರ್‌ನಲ್ಲಿಯೇ ಮೊಹಮ್ಮದ್ ತಾಹ ಔಟಾಗಿದ್ದರಿಂದ ತಂಡವು ಹಿನ್ನಡೆಯ ಆತಂಕ ಎದುರಿಸಿತ್ತು. ಆದರೆ ತಿಪ್ಪಾರೆಡ್ಡಿ (47; 37ಎ, 4X4, 6X3) ಮತ್ತು ಕೃಷನ್ ಶ್ರೀಜಿತ್ (41; 35ಎ, 4X4, 6X1) ಅವರು ತಂಡಕ್ಕೆ ಆಸರೆಯಾದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 81 ರನ್‌ ಸೇರಿಸಿದರು. ಇದರಿಂದಾಗಿ ತಂಡವು ಶತಕದ ಗಡಿ ದಾಟಿತು. 

ಆದರೆ ತಿಪ್ಪಾರೆಡ್ಡಿ ಮತ್ತು ಶ್ರೀಜಿತ್ ಅವರಿಬ್ಬರೂ ಅರ್ಧಶತಕ ಪೂರೈಸಲು ಬೌಲರ್‌ಗಳು ಬಿಡಲಿಲ್ಲ. ಕ್ರಾಂತಿಕುಮಾರ್ (29ಕ್ಕೆ3) ಮತ್ತು ಶುಭಾಂಗ್ (10ಕ್ಕೆ1) ಮಿಂಚಿದರು. ಆದರೆ ಈ ಸವಾಲು ಮೀರಿ ನಿಂತ ಅನೀಶ್ವರ್ ಗೌತಮ್ (ಔಟಾಗದೆ 14) ಮತ್ತು ಮನ್ವಂತ್ ಕುಮಾರ್ (ಔಟಾಗದೆ 10) ತಂಡವನ್ನು ಗೆಲುವಿನ ದಡ ಸೇರಿಸಿದರು. 

ಸಂಕ್ಷಿಪ್ತ ಸ್ಕೋರು:

ಬೆಂಗಳೂರು ಬ್ಲಾಸ್ಟರ್ಸ್: 19.5 ಓವರ್‌ಗಳಲ್ಲಿ 142 (ಎಲ್‌.ಆರ್. ಚೇತನ್ 48, ಶುಭಾಂಗ್ ಹೆಗಡೆ ಔಟಾಗದೆ 52, ವಿದ್ವತ್ ಕಾವೇರಪ್ಪ 23ಕ್ಕೆ3, ಎಲ್. ಮನ್ವಂತ್ ಕುಮಾರ್ 38ಕ್ಕೆ3)

ಹುಬ್ಬಳ್ಳಿ ಟೈಗರ್ಸ್: 18.5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 144 (ತಿಪ್ಪಾ ರೆಡ್ಡಿ 47, ಕೃಷನ್ ಶ್ರೀಜಿತ್ 41, ಕ್ರಾಂತಿಕುಮಾರ್ 29ಕ್ಕೆ3) ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ 5 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ: ವಿದ್ವತ್ ಕಾವೇರಪ್ಪ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.