ADVERTISEMENT

ಮಹಾರಾಜ ಟ್ರೋಫಿ: ಕ್ರಿಕೆಟ್‌ ಹೂರಣ ನೀಡಿದವರು...

ಪಿಚ್‌ ಕ್ಯುರೇಟರ್‌ ಪ್ರಶಾಂತ್‌ ನೇತೃತ್ವದಲ್ಲಿ 35 ಮಂದಿ ಶ್ರಮ

ಮೋಹನ್ ಕುಮಾರ ಸಿ.
Published 13 ಆಗಸ್ಟ್ 2022, 5:45 IST
Last Updated 13 ಆಗಸ್ಟ್ 2022, 5:45 IST
ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದ ಪಿಚ್ ಅನ್ನು ಆಟಕ್ಕೆ ಅಣಿಗೊಳಿಸುತ್ತಿರುವ ಕೆಎಸ್‌ಸಿಎ ಸಿಬ್ಬಂದಿ
ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದ ಪಿಚ್ ಅನ್ನು ಆಟಕ್ಕೆ ಅಣಿಗೊಳಿಸುತ್ತಿರುವ ಕೆಎಸ್‌ಸಿಎ ಸಿಬ್ಬಂದಿ   

ಮೈಸೂರು: ಕೆಪಿಎಲ್‌ನ ಹೊಸ ಅವತರಿಣಿಕೆ ‘ಮಹಾರಾಜ ಟ್ರೋಫಿ’ ಟಿ20 ಕ್ರಿಕೆಟ್‌ ಟೂರ್ನಿಯ ಮೊದಲ 18 ಪಂದ್ಯಗಳು ಸಾಂಸ್ಕೃತಿಕ ನಗರಿಯಲ್ಲಿ ಯಶಸ್ಸಿನ ಹಾದಿಯಲ್ಲಿವೆ. ತೆರೆಯ ಹಿಂದೆ ಹತ್ತಾರು ಮಂದಿ ಮಳೆಯಲ್ಲೂ ಬೆವರು ಹರಿಸಿ ಚುಟುಕು ಕ್ರಿಕೆಟ್‌ನ ರಸದೌತಣವನ್ನು ಉಣಬಡಿಸಿದ್ದಾರೆ.

ಬಿಸಿಸಿಐ ಪಿಚ್‌ ಕ್ಯುರೇಟರ್‌ ಎಲ್‌.ಪ್ರಶಾಂತ್ ರಾವ್‌ ನೇತೃತ್ವದ 35 ಜನರ ತಂಡವು ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣವನ್ನು ರಾತ್ರಿ– ಹಗಲೆನ್ನೆದೆ ಕಾಯ್ದಿದೆ. ತಿಂಗಳ ಹಿಂದೆಯೇ ಆಗಮಿಸಿದ್ದ ಈ ತಂಡವು ಮಳೆಯಿಂದ ಟೂರ್ನಿಯ ಒಂದೂ ಪಂದ್ಯ ರದ್ದಾಗದಂತೆ ನೋಡಿಕೊಂಡಿರುವುದು ವಿಶೇಷ!

ಪ್ರಶಾಂತ್ ಅವರೊಂದಿಗೆ ಮೊದಲ ಮಹಿಳಾ ಪಿಚ್‌ ಕ್ಯುರೇಟರ್‌ ಜಸಿಂತಾ ಕಲ್ಯಾಣ್‌, ಯಂತ್ರೋಪಕರಣಗಳ ಉಸ್ತುವಾರಿ ಲಕ್ಷ್ಮಿನಾರಾಯಣ, ಕ್ರೀಡಾಂ ಗಣದ ಸಂಚಾಲಕ ಮಹದೇವ ಅವರ ಶ್ರಮ ಹಾಗೂ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ವಿವಿಧ ವಲಯದ ಕ್ರೀಡಾಂಗಣಗಳ 25 ಸಿಬ್ಬಂದಿ ಹಾಗೂ ಮೈಸೂರು ಸುತ್ತಮುತ್ತಲ 10 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ADVERTISEMENT

ಟೂರ್ನಿಯ ಒಂದೆ ರಡು ಪಂದ್ಯ ಹೊರತುಪಡಿಸಿದರೆ ಬಹುತೇಕ ಎಲ್ಲ ಪಂದ್ಯಗಳನ್ನು ಮುಂಗಾರು ಬಿಟ್ಟೂ ಬಿಡದಂತೆ ಕಾಡಿದೆ. ಬೌಂಡರಿ ಗೆರೆಯಲ್ಲಿ 15 ಟಾರ್ಪಲಿನ್ ಗ್ರೌಂಡ್‌ ಕವರ್‌ಗಳನ್ನು ಸಿದ್ಧಪಡಿಸಿಕೊಂಡಿರುವ ಸಿಬ್ಬಂದಿ ದೇಶದ ಗಡಿ ಕಾಯುವ ಯೋಧರಂತೆ ಧಾವಿಸಿ ಪಿಚ್‌, ಹುಲ್ಲುಹಾಸನ್ನು ರಕ್ಷಿಸುತ್ತಿದ್ದಾರೆ. ಟಿಕೆಟ್‌ ಖರೀದಿಸಿ ಬಂದ ಕ್ರಿಕೆಟ್‌ ಪ್ರೇಮಿಗೆ ಒಂದೂ ದಿನವೂ ನಿರಾಸೆಯಾಗದಂತೆ ನೋಡಿಕೊಂಡಿದ್ದಾರೆ.

ಯಂತ್ರಗಳ ನೆರವು: ಮಳೆ ಬಂದಾಗ ಅಂಗಳವನ್ನು ಕವರ್‌ಗಳಿಂದ ಮುಚ್ಚ ಲಾಗುತ್ತದೆ. ಕವರ್‌ಗಳ ಮೇಲೆ ನಿಂತಿರುವ ನೀರನ್ನು ಅಂಚಿಗೆ ದಾಟಿಸಲಾಗುತ್ತದೆ. 2 ಸೂಪರ್‌ ಸಾಪರ್‌ಗಳು ಹುಲ್ಲಿನಂಗಳದಲ್ಲಿನ ತೇವವನ್ನು ಹೀರುತ್ತವೆ. ಇದಲ್ಲದೆ ಪಿಚ್‌ ಹದಗೊಳಿಸಲು 1 ಟನ್‌ ಸಾಮರ್ಥ್ಯದ 2 ರೋಲರ್‌ಗಳು, ಹುಲ್ಲು ಕತ್ತರಿಸುವ ಯಂತ್ರಗಳು ಅಂಗಳದಲ್ಲಿವೆ.

ತಿಂಗಳ ಹಿಂದೆಯೇ ತಯಾರಿ: ‘ಮಹಾರಾಜ ಟ್ರೋಫಿಗೆ ಅಂಗಳವನ್ನು ಅಣಿಗೊಳಿಸುವ ಪ್ರಕ್ರಿಯೆ ತಿಂಗಳ ಹಿಂದೆಯೇ ಆರಂಭವಾಯಿತು. ಮಳೆ ಯಾದರೆ ಕೈಯಲ್ಲಿ ನೀರನ್ನೆತ್ತಲು ಆಗುವು ದಿಲ್ಲ. ಬೆಂಗಳೂರಿನಿಂದ ಯಂತ್ರಗಳನ್ನು ತರಿಸಿ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಬಿಸಿಸಿಐ ಪಿಚ್‌ ಕ್ಯುರೇಟರ್‌ ಎಲ್‌. ಪ್ರಶಾಂತ್‌ ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉದ್ಘಾಟನೆಯ ದಿನ ಮಳೆ ಬಿಟ್ಟು–ಬಿಟ್ಟು ಬಂತು. ನಮಗೆ ಗೊತ್ತಿಲ್ಲದ ಮಳೆಯೇನಲ್ಲ. ತಯಾರಿ ಮಾಡಿಕೊಂಡಿದ್ದರಿಂದ ಯಾವ ಪಂದ್ಯ ರದ್ದಾಗ ದಂತೆ ನೋಡಿಕೊಂಡಿದ್ದೇವೆ. ಅದಕ್ಕೆ ಕೌಶಲ ವಿರುವ ಸಿಬ್ಬಂದಿ ಕಾರಣ. ಸಂಸ್ಥೆಯ ಶಿವಮೊಗ್ಗ, ಹುಬ್ಬಳ್ಳಿ–ಧಾರವಾಡ, ಬೆಂಗಳೂರಿನ ಆಲೂರು, ಚಿನ್ನಸ್ವಾಮಿ ಅಂಗಳದಿಂದ ಬಂದಿದ್ದಾರೆ’ ಎಂದರು.

‘ಮಂಡ್ಯ, ಚಾಮರಾಜನಗರದ ಮಣ್ಣು’
ಮಾನಸಗಂಗೋತ್ರಿಯ ಕ್ರಿಕೆಟ್‌ ಅಂಗಳದಲ್ಲಿ 5 ಪಿಚ್‌ಗಳು ಇದ್ದು, 3 ಪಿಚ್‌ಗಳನ್ನು ಮಹಾರಾಜ ಟ್ರೋಫಿ ಟೂರ್ನಿಗೆ ಸಿದ್ಧಪಡಿಸಲಾಗಿದೆ. ಅದರಲ್ಲಿ ಎರಡು ಪಿಚ್‌ಗಳು ಮಂಡ್ಯ ಮಣ್ಣಿನಿಂದ ನಿರ್ಮಿಸಿದ್ದರೆ, ಮೂರನೆಯದು ಚಾಮರಾಜನಗರದ್ದು!

‘ಪಿಚ್‌ ತಯಾರಿಸಿದರೆ 20 ವರ್ಷ ಬರುತ್ತದೆ. ಮೈಸೂರಿನಲ್ಲಿ ಮಂಡ್ಯ ಮಣ್ಣು ಬಳಸಿ ನಿರ್ಮಿಸಿರುವ ಪಿಚ್‌ 5 ವರ್ಷ ಹಳೆಯದ್ದು. ಚಾಮರಾಜನಗರ ಮಣ್ಣಿನಿಂದ ರೂಪಿಸಿದ ಪಿಚ್‌ಗೆ 15 ವರ್ಷವಾಗಿದೆ’ ಎಂದು ಪಿಚ್‌ ಕ್ಯುರೇಟರ್‌ ಪ್ರಶಾಂತ್ ಹೇಳಿದರು.

ಹಾಸನ ಮೂಲದ ಪ್ರಶಾಂತ್‌ ಅವರಿಗೆ ಬಿಸಿಸಿಐ, ಉತ್ತಮ ಕ್ಯುರೇಟರ್‌ ಪ್ರಶಸ್ತಿ ನೀಡಿದೆ. ನೂರಾರು ಪಂದ್ಯಗಳಿಗೆ ಪಿಚ್‌ ರೂಪಿಸಿರುವ ಅವರು, ಕಳೆದ ಹತ್ತು ವರ್ಷದಿಂದ ಐಪಿಎಲ್‌ಗೆ ಕೆಲಸ ಮಾಡಿದ್ದಾರೆ. ಮುಂಬೈ, ಕಾನ್ಪುರಾ, ಚೆನ್ನೈ, ಹೈದರಾಬಾದ್‌ ಅಂಗಳದ ಪಿಚ್‌ ರೂಪಿಸುವಲ್ಲಿ ಅವರ ಶ್ರಮವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.