ಬೆಂಗಳೂರು: ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಲಯದಲ್ಲಿರುವ ಮೈಸೂರು ವಾರಿಯರ್ಸ್ ತಂಡದ ನಾಯಕ ಕರುಣ್ ನಾಯರ್ ಬಿರುಸಿನ ಶತಕ ಗಳಿಸುವ ಮೂಲಕ ಮಗದೊಮ್ಮೆ ಅಬ್ಬರಿಸಿದ್ದಾರೆ.
43 ಎಸೆತಗಳಲ್ಲಿ ಶತಕ...
ಮಂಗಳೂರು ಡ್ರ್ಯಾಗನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕರುಣ್ ಕೇವಲ 43 ಎಸೆತಗಳಲ್ಲಿ ಶತಕ ಗಳಿಸಿದರು. 13 ಬೌಂಡರಿ ಮತ್ತು 9 ಭರ್ಜರಿ ಸಿಕ್ಸರ್‌ನೊಂದಿಗೆ 258.33ರ ಸರಾಸರಿಯಲ್ಲಿ ರನ್ ಗಳಿಸಿ, ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು.
ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಮರಳಿ ಪಡೆಯುವ ಗುರಿ...
ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಗಳಿಸಿರುವ ಭಾರತದ ಎರಡನೇ ಬ್ಯಾಟರ್ ಎನಿಸಿರುವ ಕರುಣ್ ನಾಯರ್, ಟೀಮ್ ಇಂಡಿಯಾದಲ್ಲಿ ಮರಳಿ ಸ್ಥಾನ ಪಡೆಯುವ ಗುರಿ ಹೊಂದಿದ್ದಾರೆ.
ಈ ಕುರಿತು 'ಇಎಸ್‌ಪಿನ್ ಕ್ರಿಕ್‌ಇನ್ಪೋ'ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. 'ಭಾರತ ಟೆಸ್ಟ್ ತಂಡಕ್ಕೆ ಮರಳುವ ಕನಸು ಕಾಣುತ್ತಿದ್ದೇನೆ. ಇದೇ ಹಂಬಲವು ನನ್ನನ್ನು ಮುಂದಕ್ಕೆ ಹೋಗಲು ಪ್ರೇರೇಪಿಸುತ್ತದೆ' ಎಂದು ಹೇಳಿದ್ದಾರೆ.
ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಈವರೆಗೆ 222 ರನ್ ಗಳಿಸಿರುವ ಕರುಣ್, ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. 'ತಂಡಕ್ಕಾಗಿ ಟ್ರೋಫಿ ಗೆಲ್ಲುವುದು ನನ್ನ ಗುರಿ' ಎಂದು ಹೇಳಿದ್ದಾರೆ.
32 ವರ್ಷದ ಕರುಣ್ ಅವರಿಗೆ ಐಪಿಎಲ್ ಟೂರ್ನಿಯಲ್ಲೂ ನಿರೀಕ್ಷೆ ಮಾಡಿದಷ್ಟು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಆದರೆ 2023-24ರ ರಣಜಿ ಟ್ರೋಫಿಯಲ್ಲಿ ವಿದರ್ಭ ಪರ 690 ರನ್ ಗಳಿಸುವ ಮೂಲಕ ತಮ್ಮ ಛಾಪು ಮೂಡಿಸಿದ್ದರು. ಆದರೆ ಫೈನಲ್‌ನಲ್ಲಿ ಮುಂಬೈ ವಿರುದ್ಧ ವಿದರ್ಭ ಸೋಲು ಕಂಡಿತ್ತು.
'ಯಾವುದೇ ಪಂದ್ಯವಾದರೂ ಅವಕಾಶ ಸಿಕ್ಕಿದ್ದನ್ನು ಸರಿಯಾಗಿ ಬಳಸಿಕೊಳ್ಳುವುದೇ ನನ್ನ ಗುರಿಯಾಗಿದೆ' ಎಂದು ಅವರು ಹೇಳಿದ್ದಾರೆ.
2016ರಲ್ಲಿ ತ್ರಿಶತಕ ಸಾಧನೆ...
2016ರಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈಯಲ್ಲಿ ನಡೆದ ಪಂದ್ಯದಲ್ಲಿ ಕರುಣ್ ನಾಯರ್ ತ್ರಿಶತಕ ಸಾಧನೆ ಮಾಡಿದ್ದರು. ವೀರೇಂದ್ರ ಸೆಹ್ವಾಗ್ ಬಳಿಕ ಈ ಸಾಧನೆ ಮಾಡಿದ ಭಾರತದ ಎರಡನೇ ಬ್ಯಾಟರ್ ಎನಿಸಿದ್ದರು. ಆದರೆ ಬಳಿಕ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದರು.
2004ರಲ್ಲಿ ಪಾಕಿಸ್ತಾನ ಮತ್ತು 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವೀರೇಂದ್ರ ಸೆಹ್ವಾಗ್ ತ್ರಿಶತಕ ಸಾಧನೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.