ADVERTISEMENT

ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್: ಖ್ಯಾತನಾಮರ ಹಣಾಹಣಿಗೆ ವೇದಿಕೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 16:30 IST
Last Updated 14 ಆಗಸ್ಟ್ 2024, 16:30 IST
ಮಯಂಕ್ ಅಗರವಾಲ್ 
ಮಯಂಕ್ ಅಗರವಾಲ್    

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರದಿಂದ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. 

ಸೆಪ್ಟೆಂಬರ್ 1ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ 6 ತಂಡಗಳು ಕಣಕ್ಕಿಳಿಯಲಿವೆ. ಎಲ್ಲ ಪಂದ್ಯಗಳೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. 

ಭಾರತ ತಂಡ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಫ್ರ್ಯಾಂಚೈಸಿಗಳಲ್ಲಿ ಆಡಿರುವ ರಾಜ್ಯದ ಖ್ಯಾತನಾಮ ಆಟಗಾರರು ಕಣಕ್ಕಿಳಿಯಲಿದ್ದಾರೆ. ಮನೀಷ್ ಪಾಂಡೆ, ಮಯಂಕ್ ಅಗರವಾಲ್, ಕರುಣ್ ನಾಯರ್, ಅಭಿನವ್ ಮನೋಹರ್, ದೇವದತ್ತ ಪಡಿಕ್ಕಲ್, ವೈಶಾಖ ವಿಜಯಕುಮಾರ್, ಶ್ರೇಯಸ್ ಗೋಪಾಲ್, ಕೆ. ಗೌತಮ್ ಮತ್ತು ವಿದ್ವತ್ ಕಾವೇರಪ್ಪ ಆಡಲಿದ್ದಾರೆ. 

ADVERTISEMENT

ಅಲ್ಲದೇ ಉದಯೋನ್ಮುಖ ಆಟಗಾರರಾದ ಸ್ಮರಣ್ ರವಿ, ಕೆ.ವಿ. ಅನೀಶ್‌, ಅನೀಶ್ವರ್ ಗೌತಮ್, ನಿಕಿನ್ ಜೋಸ್, ಎಸ್‌.ಯು. ಕಾರ್ತಿಕ್, ಮನ್ವಂತ್ ಕುಮಾರ್ ಮತ್ತು ಎಲ್. ಆರ್. ಚೇತನ್ ಅವರೂ ತಮ್ಮ ಸಾಮರ್ಥ್ಯ ಮೆರೆಯುವ ಹುಮ್ಮಸ್ಸಿನಲ್ಲಿದ್ದಾರೆ. ಅನುಭವಿ ಮತ್ತು ಯುವ ಆಟಗಾರರ ಈ ಪೈಪೋಟಿಯು ‘ಶ್ರಾವಣ ಮಾಸ’ಕ್ಕೆ ರಂಗು ತುಂಬುವ ನಿರೀಕ್ಷೆ ಇದೆ. 

ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಮಂಗಳೂರು ಡ್ರ್ಯಾಗನ್ಸ್ ತಂಡಗಳು ಈ ಬಾರಿಯ ಬಿಡ್‌ ಪ್ರಕ್ರಿಯೆಯಲ್ಲಿ ಯುವ ಆಟಗಾರರ ಮೇಲೆ ಹೆಚ್ಚು ಸಂಪನ್ಮೂಲ ವಿನಿಯೋಗಿಸಿದವು. 

ಗುರುವಾರ ನಡೆಯುವ ಉದ್ಘಾಟನೆ ಪಂದ್ಯದಲ್ಲಿ ಮಯಂಕ್ ನಾಯಕತ್ವದ ಬೆಂಗಳೂರು ತಂಡವು ಗುಲ್ಬರ್ಗ ಮಿಸ್ಟಿಕ್ಸ್‌ ವಿರುದ್ಧ ಸೆಣಸಲಿದೆ. ಬೆಂಗಳೂರು ತಂಡದಲ್ಲಿ ಚೇತನ್, ಅನಿರುದ್ಧ ಜೋಶಿ, ಶುಭಾಂಗ್ ಹೆಗಡೆ ಪ್ರಮುಖ ಆಟಗಾರರಾಗಿದ್ದಾರೆ. 

ಗುಲ್ಬರ್ಗ ತಂಡವು ಬ್ಯಾಟರ್ ಪಡಿಕ್ಕಲ್, ಬೌಲಿಂಗ್ ಆಲ್‌ರೌಂಡರ್ ವೈಶಾಖ, ಪ್ರವೀಣ ದುಬೆ, ಆರ್‌. ಸ್ಮರಣ್ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. 

ದಿನದ ಇನ್ನೊಂದು ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್‌ ಮತ್ತು ಮೈಸೂರು ವಾರಿಯರ್ಸ್ ತಂಡಗಳು ಮುಖಾಮುಖಿಯಾಗಲಿವೆ. 

ಕರುಣ್ ನಾಯರ್ ನಾಯಕತ್ವದ ಮೈಸೂರು ತಂಡವು ಅನುಭವಿಗಳಾದ ಕೃಷ್ಣಪ್ಪ ಗೌತಮ್, ಜೆ. ಸುಚಿತ್, ಪ್ರಸಿದ್ಧಕೃಷ್ಣ, ಮನೋಜ್ ಬಾಂಢಗೆ ಅವರ ಮೇಲೆ ಹೆಚ್ಚು ನಿರೀಕ್ಷೆ ಇಟ್ಟಿದೆ. ಹೊಸಪ್ರತಿಭೆ ಸಮಿತ್ ದ್ರಾವಿಡ್ (ಭಾರತ ತಂಡದ ನಿಕಟಪೂರ್ವ ಕೋಚ್ ರಾಹುಲ್ ದ್ರಾವಿಡ್ ಅವರ ಮಗ) ಈ ತಂಡದಲ್ಲಿದ್ಧಾರೆ.

ಬಿರುಸಿನ ಬ್ಯಾಟರ್ ಅಭಿನವ್ ಮನೋಹರ್, ಮಧ್ಯಮವೇಗಿ ವಿ. ಕೌಶಿಕ್ ಅವರು ಶಿವಮೊಗ್ಗ ತಂಡದ ಪ್ರಮುಖ ಆಟಗಾರರಾಗಿದ್ಧಾರೆ. 

ಇಂದಿನ ಪಂದ್ಯಗಳು

ಬೆಂಗಳೂರು ಬ್ಲಾಸ್ಟರ್ಸ್–ಗುಲ್ಬರ್ಗ ಮಿಸ್ಟಿಕ್ಸ್ (ಮಧ್ಯಾಹ್ನ 3ರಿಂದ)

ಶಿವಮೊಗ್ಗ ಲಯನ್ಸ್–ಮೈಸೂರು ವಾರಿಯರ್ಸ್ (ರಾತ್ರಿ 7ರಿಂದ)

ನೇರಪ್ರಸಾರ: 

ದೇವದತ್ತ ‍ಪಡಿಕ್ಕಲ್ 

Cut-off box - ‘ಪ್ರಶಸ್ತಿ ಬಿಟ್ಟುಕೊಡಲ್ಲ‘ ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ ತಂಡವು ಪ್ರಶಸ್ತಿ ಉಳಿಸಿಕೊಳ್ಳುವ ಛಲದಲ್ಲಿದೆ. ತಂಡದಲ್ಲಿ ಅನುಭವಿ ಮತ್ತು ಯುವ ಆಟಗಾರರ ಬಲ ತಂಡಕ್ಕಿದೆ ‘ನಾವು ಕಳೆದ ಕೆಲವು ವಾರಗಳಿಂದ ಉತ್ತಮವಾಗಿ ಸಿದ್ಧತೆ ಮಾಡಿಕೊಂಡಿದ್ದೇವೆ. ತಂಡದಲ್ಲಿ ಎಲ್ಲ ಆಟಗಾರರು ಪರಸ್ಪರ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಬಾರಿಯೂ ಟ್ರೋಫಿ ಗೆಲ್ಲುತ್ತೇವೆ. ಬ್ಯಾಟಿಂಗ್ ಬೌಲಿಂಗ್‌ ಎರಡರಲ್ಲೂ ತಂಡವು ಸಮತೋಲನ ಹೊಂದಿದೆ’ ಎಂದು ತಂಡದ ನಾಯಕ ಮನೀಷ್ ಪಾಂಡೆ ಹೇಳಿದರು. ‘ಮಳೆಗಾಲದ ಕಾರಣದಿಂದ ಹುಬ್ಬಳ್ಳಿ ಮೈಸೂರಿನಲ್ಲಿ ಪಂದ್ಯಗಳನ್ನು ನಡೆಸಲಾಗುತ್ತಿಲ್ಲ. ಬೆಂಗಳೂರಿನಲ್ಲಿ ಎಲ್ಲ ಪಂದ್ಯಗಳನ್ನು ಆಯೋಜಿಸುತ್ತಿರುವುದು ಸೂಕ್ತವಾಗಿದೆ. ಇಲ್ಲಿ ಮಳೆ ಬಂದರೂ ಸಬ್‌ ಏರ್ ಸಿಸ್ಟಮ್ ಇರುವುದರಿಂದ ಬೇಗನೆ ಮೈದಾನ ಒಣಗುತ್ತದೆ. ಪಂದ್ಯಕ್ಕೆ ಸಿದ್ಧವಾಗುತ್ತದೆ’ ಎಂದು ಫ್ರ್ಯಾಂಚೈಸ್ ಮಾಲೀಕರಾದ ಶಿವೇಕ್ ಜಿಂದಾಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.  ಬುಧವಾರ ಸಂಜೆ ನಡೆದ ತಂಡದ ಜೆರ್ಸಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೋಚ್ ಯರೇಗೌಡ ಆರ್. ವಿನಯಕುಮಾರ್ ವಿದ್ವತ್ ಕಾವೇರಪ್ಪ ಫ್ರಾಂಚೈಸಿ ಮಾಲೀಕರಾದ ಸುಶೀಲ್ ಕುಮಾರ್ ಜಿಂದಾಲ್ ಮತ್ತು ಅಭಿಷೇಕ್ ಜಿಂದಾಲ್  ಅವರು ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.