ಬೆಂಗಳೂರು: ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಅನೀಶ್ವರ್ ಗೌತಮ್ (ಔಟಾಗದೇ 95, 58ಎ) ಮತ್ತು ಕೃಷ್ಣನ್ ಶ್ರೀಜಿತ್ (77, 44ಎ) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ತಂಡ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಸೋಮವಾರ ಮಂಗಳೂರು ಡ್ರ್ಯಾಗನ್ಸ್ ಮೇಲೆ 42 ರನ್‌ಗಳ ಸುಲಭ ಜಯಪಡೆಯಿತು.
ಈ ಗೆಲುವಿನೊಡನೆ ಪಾಯಿಂಟ್ಸ್ ಪಟ್ಟಿಯಲ್ಲಿ ಮರಳಿ ಅಗ್ರಸ್ಥಾನಕ್ಕೇರಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟ್ ಮಾಡಲು ಕಳಿಸಲ್ಪಟ್ಟ ಹುಬ್ಬಳ್ಳಿ ಟೈಗರ್ಸ್ 3 ವಿಕೆಟ್‌ಗೆ 209 ರನ್‌ಗಳ ದೊಡ್ಡ ಮೊತ್ತ ಗಳಿಸಿತು. ಈ ಬಾರಿ ತಂಡವೊಂದು 200 ದಾಟುತ್ತಿರುವುದು ಮೂರನೇ ಬಾರಿ. ಉತ್ತರವಾಗಿ ಮಂಗಳೂರು ಡ್ರ್ಯಾಗನ್ಸ್ ನಾಲ್ಕು ಎಸೆತಗಳಿರುವಂತೆ 167 ರನ್‌ಗಳಿಗೆ ಆಟ ಮುಗಿಸಿತು.
ಆರಂಭ ಆಟಗಾರರಾದ ಕಾರ್ತಿಕೇಯ ಕೆ.ಪಿ ಮತ್ತು ಮೊಹಮ್ಮದ್ ತಾಹಾ ಅವರನ್ನು ಟೈಗರ್ಸ್ ತಂಡ 13 ರನ್‌ಗಳಾಗುವಷ್ಟರಲ್ಲಿ (2.1 ಓವರ್) ಕಳೆದುಕೊಂಡಿತ್ತು. ಆದರೆ ಶ್ರೀಜಿತ್ ಜೊತೆಗೂಡಿದ ಅನೀಶ್ವರ್ ಪಂದ್ಯದ ಗತಿಯನ್ನು ಬದಲಾಯಿಸಿದರು. ಮೂರನೇ ವಿಕೆಟ್‌ಗೆ ಕೇವಲ 83 ಎಸೆತಗಳಲ್ಲಿ 148 ರನ್‌ಗಳು ಹರಿದುಬಂದವು.
ಅನೀಶ್ವರ್ ಅವರ ಅಜೇಯ ಆಟದಲ್ಲಿ ಐದು ಭರ್ಜರಿ ಸಿಕ್ಸರ್‌ಗಳ ಜೊತೆಗೆ ಎಂಟು ಬೌಂಡರಿಗಳು ಒಳಗೊಂಡಿದ್ದವು. ಅದ್ವಿತ್ ಶೆಟ್ಟಿ ಅಂತಿಮ ಓವರ್‌ನಲ್ಲಿ ಸಿಕ್ಸರ್ ಸೇರಿದಂತೆ 14 ರನ್‌ಗಳನ್ನು ಮಾತ್ರ ನೀಡಿ ಶತಕಕ್ಕೆ ಅವಕಾಶ ಕೊಡಲಿಲ್ಲ. ಶ್ರೀಜಿತ್ ಅವರ 77 ರನ್‌ಗಳ ಇನಿಂಗ್ಸ್‌ನಲ್ಲಿ ಏಳು ಬೌಂಡರಿ, ಆರು ಸಿಕ್ಸರ್‌ಗಳಿದ್ದವು. ಮನೀಶ್ ಪಾಂಡೆ ಲಗುಬಗನೇ 24 ರನ್‌ಗಳಿಸಿ ಅಜೇಯರಾಗುಳಿದರು.
ಈ ಭಾರಿ ಮೊತ್ತಕ್ಕೆ ಉತ್ತರವಾಗಿ ಮಂಗಳೂರು ಡ್ರ್ಯಾಗನ್ಸ್ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡು ಒತ್ತಡಕ್ಕೀಡಾಯಿತು. ಕೆ.ಸಿದ್ಧಾರ್ಥ್ (30) ಮತ್ತು ಲೋಚನಗೌಡ (35) ನಾಲ್ಕನೇ ವಿಕೆಟ್‌ಗೆ 28 ಎಸೆತಗಳಲ್ಲಿ 55 ರನ್ ಸೇರಿಸಿ ಕೆಲಕಾಲ ಹೋರಾಟ ತೋರಿದರು.
ಸಂಕ್ಷಿಪ್ತ ಸ್ಕೋರು: ಹುಬ್ಬಳ್ಳಿ ಟೈಗರ್ಸ್: 20 ಓವರುಗಳಲ್ಲಿ 3 ವಿಕೆಟ್‌ಗೆ 209 (ಕೃಷ್ಣನ್ ಶ್ರೀಜಿತ್ 77, ಅನೀಶ್ವರ ಗೌತಮ್ ಔಟಾಗದೇ 95, ಮನೀಶ್ ಪಾಂಡೆ ಔಟಾಗದೇ 24); ಮಂಗಳೂರು ಡ್ರ್ಯಾಗನ್ಸ್: 19.2 ಓವರುಗಳಲ್ಲಿ 167 ರೋಹನ್ ಪಾಟೀಲ್ 25, ಕೆ.ಸಿದ್ಧಾರ್ಥ್ 30, ಲೋಚನ್ ಗೌಡ 35, ಶ್ರೇಯಸ್ ಗೋಪಾಲ್ 38; ನಿಶ್ಚಿತ್ ಪೈ 21ಕ್ಕೆ3, ರಿಶಿ ಬೋಪಣ್ಣ 28ಕ್ಕೆ3). ಹುಬ್ಬಳ್ಳಿ ಟೈಗರ್ಸ್‌ಗೆ 42 ರನ್ ಜಯ. ಪಂದ್ಯದ ಆಟಗಾರ: ಅನೀಶ್ವರ ಗೌತಮ್
ನಾಳಿನ ಪಂದ್ಯಗಳು: ಗುಲ್ಬರ್ಗ ಮಿಸ್ಟಿಕ್ಸ್– ಶಿವಮೊಗ್ಗ ಲಯನ್ಸ್ (ಮಧ್ಯಾಹ್ನ3). ಹುಬ್ಬಳ್ಳಿ ಟೈಗರ್ಸ್– ಮೈಸೂರು ವಾರಿಯರ್ಸ್ (ರಾತ್ರಿ 7)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.