ಮುಂಬೈ: ಐಪಿಎಲ್ 2023ರ ಕ್ರಿಕೆಟ್ ಪಂದ್ಯವನ್ನು ಅಕ್ರಮವಾಗಿ ಫೇರ್‌ಪ್ಲೆ ಆ್ಯಪ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುವ ಮೂಲಕ ವಯಕಾಮ್ ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಬಹುಭಾಷಾ ನಟಿ ತಮನ್ನಾ ಭಾಟಿಯಾಗೆ ಮುಂಬೈನ ಸೈಬರ್ ಕ್ರೈಂ ಪೊಲೀಸರು ಸಮನ್ಸ್ ಜಾರಿ ಮಾಡಿದ್ಧಾರೆ.
ಏಪ್ರಿಲ್ 29ರಂದು ವಿಚಾರಣೆಗೆ ಹಾಜರಾಗುವಂತೆ ತಮನ್ನಾಗೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ನಟ ಸಂಜಯ್ ದತ್ ಅವರಿಗೂ ಸಮನ್ಸ್ ನೀಡಲಾಗಿತ್ತು. ಆದರೆ, ಅವರು ವಿಚಾರಣೆಗೆ ಹಾಜರಾಗಿಲ್ಲ. ತಾನು ವಿದೇಶದಲ್ಲಿರುವ ಕಾರಣ ವಿಚಾರಣೆಗೆ ಬೇರೊಂದು ಸಮಯ ಮತ್ತು ದಿನಾಂಕ ನಿಗದಿಗೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ತಮನ್ನಾ ಮತ್ತು ಸಂಜಯ್ ದತ್ ಅವರು ಮಹದೇವ್ ಬೆಟ್ಟಿಂಗ್ ಅಪ್ಲಿಕೇಶನ್‌ನ ಅಂಗಸಂಸ್ತೆ FairPlayಅಪ್ಲಿಕೇಶನ್ ಅನ್ನು ಪ್ರಚಾರ ಮಾಡಿದ ಮತ್ತು ಪ್ರತಿನಿಧಿಸಿದ ಆರೋಪ ಎದುರಿಸುತ್ತಿದ್ದಾರೆ.
2023ರಲ್ಲಿ ಕೆಲವು ಐಪಿಎಲ್ ಪಂದ್ಯಗಳನ್ನು ಆ್ಯಪ್‌ನಲ್ಲಿ ಅಕ್ರಮವಾಗಿ ಸ್ಟ್ರೀಮ್ ಮಾಡಲಾಗಿದೆ ಎಂದು ಈ ಸಂಬಂಧ ದಾಖಲಾಗಿರುವ ದೂರನ್ನು ಉಲ್ಲೇಖಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರ ಸೈಬರ್ ಸೆಲ್ ಈಗಾಗಲೇ ಗಾಯಕ ಬಾದ್‌ಶಾ ಮತ್ತು ನಟರಾದ ಸಂಜಯ್ ದತ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರ ಮ್ಯಾನೇಜರ್‌ಗಳ ಹೇಳಿಕೆಗಳನ್ನು ದಾಖಲಿಸಿದೆ ಎಂದು ಅವರು ಹೇಳಿದ್ದಾರೆ.
ಮಹಾದೇವ್ ಆ್ಯಪ್‌ನ ಅಕ್ರಮ ವಹಿವಾಟು ಮತ್ತು ಬೆಟ್ಟಿಂಗ್ ಕುರಿತು ವಿವಿಧ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ.
ಬಾಹುಬಲಿ ಚಿತ್ರ ಮತ್ತು ಇತ್ತೀಚಿನ ನೆಟ್‌ಫ್ಲಿಕ್ಸ್ ‘ಲಸ್ಟ್ ಸ್ಟೋರೀಸ್ 2’ ಮೂಲಕ ತಮನ್ನಾ ಹೆಸರುವಾಸಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.