ದುಬೈ: ಶ್ರೀಲಂಕಾ ಕ್ರಿಕೆಟ್ ತಾರೆ ಮಹೇಲಾ ಜಯವರ್ಧನೆ, ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಶಾನ್ ಪೊಲಾಕ್ ಮತ್ತು ಇಂಗ್ಲೆಂಡಿನ ಮಾಜಿ ಆಟಗಾರ್ತಿ ಜೆನೆತ್ ಬ್ರಿಟಿನ್ ಅವರಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ನೀಡಲಾಗಿದೆ.
ಭಾನುವಾರ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಕೆಟಿಗ ಕ್ಲೈವ್ ಲಾಯ್ಡ್ ಅವರು ಈ ಮೂವರು ಕ್ರಿಕೆಟಿಗರನ್ನು ಹಾಲ್ ಆಫ್ ಫೇಮ್‌ಗೆ ಸೇರ್ಪಡೆ ಮಾಡಲಿದ್ದಾರೆ. 2009ರಲ್ಲಿ ಆರಂಭವಾದ ಹಾಲ್‌ನಲ್ಲಿ ಇದುವರೆಗೆ 106 ಖ್ಯಾತನಾಮ ಕ್ರಿಕೆಟಿಗರನ್ನು ಸೇರ್ಪಡೆ ಮಾಡಲಾಗಿದೆ.
ಬ್ರಿಟಿನ್ ಅವರು 1979–1998ರ ಅವಧಿಯಲ್ಲಿ ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರ್ತಿಯಾಗಿದ್ದರು. ಮಹಿಳಾ ಕ್ರಿಕೆಟ್ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 2017ರಲ್ಲಿ ಅವರು ನಿಧನರಾಗಿದ್ದಾರೆ.
ಕ್ರಿಕೆಟ್ ಕ್ಷೇತ್ರದ ಪ್ರಮುಖ ಬ್ಯಾಟರ್‌ಗಳಲ್ಲಿ ಜಯವರ್ಧನೆ ಅವರೂ ಒಬ್ಬರು. ಶ್ರೀಲಂಕಾ ತಂಡವು 2014ರ ಟಿ20 ವಿಶ್ವಕಪ್ ಜಯಿಸಲು ಅವರ ಕಾಣಿಕೆ ಮಹತ್ವದ್ದಾಗಿತ್ತು. ಅವರ ಕಾಲಘಟ್ಟದಲ್ಲಿ ಲಂಕಾ ತಂಡವು ನಾಲ್ಕು ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ಫೈನಲ್ ತಲುಪಿತ್ತು. ಮುತ್ತಯ್ಯ ಮುರಳೀಧರನ್ ಮತ್ತು ಕುಮಾರ ಸಂಗಕ್ಕಾರ ಅವರ ನಂತರ ಮಹೇಲಾ ಈ ಗೌರವ ಪಡೆದ ಲಂಕಾ ಆಟಗಾರನಾಗಿದ್ದಾರೆ.
ದಕ್ಷಿಣ ಆಫ್ರಿಕಾದ ಶಾನ್ ಪೊಲಾಕ್ ಅವರು ವಿಶ್ವಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದಾರೆ. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಮೂರು ಸಾವಿರ ರನ್ ಮತ್ತು ಮುನ್ನೂರು ವಿಕೆಟ್‌ಗಳನ್ನು ಗಳಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆ ಅವರದ್ದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.