ಬೆಂಗಳೂರು: ಮಧ್ಯಮವೇಗಿ ಎಲ್.ಆರ್. ಕುಮಾರ್ ಮತ್ತು ತಿಪ್ಪಾರೆಡ್ಡಿ ಅವರ ಉತ್ತಮ ಆಟದ ಬಲದಿಂದ ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ ತಂಡವು ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಜಯಿಸಿತು.
ಮಳೆಯಿಂದಾಗಿ ತಡೆಯುಂಟಾದ ಪಂದ್ಯದಲ್ಲಿ ಮನೀಷ್ ಪಾಂಡೆ ನಾಯಕತ್ವದ ಹುಬ್ಬಳ್ಳಿ ತಂಡವು 15 ರನ್‌ಗಳಿಂದ (ವಿ. ಜಯದೇವನ್ ಪದ್ಧತಿ) ಮಂಗಳೂರು ಡ್ರ್ಯಾಗನ್ಸ್ ವಿರುದ್ಧ ಜಯಿಸಿತು. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಪಂದ್ಯಕ್ಕೆ ಮಳೆಯಿಂದಾಗಿ ತಡೆಯುಂಟಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಮಂಗಳೂರು ತಂಡವು 16 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 143 ರನ್ ಗಳಿಸಿತು. ರೋಹನ್ ಪಾಟೀಲ (24; 11ಎ) ಮತ್ತು ಸಿದ್ಧರ್ಥ್ (44; 27ಎ ) ತಂಡವು ಉತ್ತಮ ಮೊತ್ತ ಕಲೆಹಾಕಲು ನೆರವಾದರು.
ಇದಕ್ಕುತ್ತರವಾಗಿ ಹುಬ್ಬಳ್ಳಿ ತಂಡದ ಆರಂಭಿಕ ಬ್ಯಾಟರ್ ತಿಪ್ಪಾರೆಡ್ಡಿ (ಔಟಾಗದೆ 19) ಮತ್ತು ಮನೀಷ್ ಪಾಂಡೆ (ಔಟಾಗದೆ 24) ಬ್ಯಾಟ್ ಬೀಸಿದರು. ತಂಡವು 5.1 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿದ ಸಂದರ್ಭದಲ್ಲಿ ಮಳೆ ಜೋರಾಗಿ ಸುರಿಯಿತು. ಇದರಿಂದಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ವಿ. ಜಯದೇವನ್ ಪದ್ಧತಿಯಡಿಯಲ್ಲಿ ರನ್‌ರೇಟ್ ಲೆಕ್ಕಾಚಾರದಲ್ಲಿ ಹುಬ್ಬಳ್ಳಿ ಜಯಗಳಿಸಿತು.
ಪಾಂಡೆ ಫೀಲ್ಡಿಂಗ್‌ನಲ್ಲಿಯೂ ಮಿಂಚಿದರು. ಅವರು ಎರಡು ಕ್ಯಾಚ್ ಪಡೆದರು.
ಸಂಕ್ಷಿಪ್ತ ಸ್ಕೋರು:
ಮಂಗಳೂರು ಡ್ರ್ಯಾಗನ್ಸ್: 16 ಓವರ್‌ಗಳಲ್ಲಿ 7ಕ್ಕೆ 143 (ಮ್ಯಾಕ್ನಿಲ್ ನೊರೊನಾ 23, ರೋಹನ್ ಪಾಟೀಲ 24, ನಿಕಿನ್ ಜೋಸ್ 33, ಸಿದ್ಧಾರ್ಥ್ 44, ಎಲ್.ಆರ್. ಕುಮಾರ್ 30ಕ್ಕೆ3)
ಹುಬ್ಬಳ್ಳಿ ಟೈಗರ್ಸ್: 5.1 ಓವರ್‌ಗಳಲ್ಲಿ 1 ವಿಕೆಟ್‌ಗೆ 69 (ತಿಪ್ಪಾರೆಡ್ಡಿ ಔಟಾಗದೆ 19, ಮೊಹಮ್ಮದ್ ತಹಾ 12, ಮನೀಷ್ ಪಾಂಡೆ ಔಟಾಗದೆ 24, ಎಂ.ಬಿ. ದರ್ಶನ್ 24ಕ್ಕೆ1) ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ 15 ರನ್ ಜಯ. ಪಂದ್ಯದ ಆಟಗಾರ: ತಿಪ್ಪಾರೆಡ್ಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.