ಬ್ರಿಜ್‌ಟೌನ್ (ಬಾರ್ಬಾಡೋಸ್): ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಮಾಲ್ಕಂ ಮಾರ್ಷಲ್ ಅವರ ಸಮಾಧಿ ಅವಗಣನೆಗೆ ಒಳಗಾಗಿದೆ. ಒಂದು ಕಾಲದಲ್ಲಿ ಜಗತ್ತಿನ ಖ್ಯಾತನಾಮ ಬ್ಯಾಟರ್‌ಗಳನ್ನು ನಡುಗಿಸಿದ್ದ ವೆಸ್ಟ್ ಇಂಡೀಸ್‌ನ ಈ ಸಾಧಕ ನಿಧನರಾಗಿ 25 ವರ್ಷಗಳಾಗಿದ್ದು, ಅವರಿಗೆ ಸಲ್ಲಬೇಕಾದ ಗೌರವ ನೀಡುವಲ್ಲಿ ತಾಯ್ನಾಡು ಮರೆತಿದೆ.
ಇಲ್ಲಿನ ಗ್ರಾಂಟ್ಲಿ ಆ್ಯಡಮ್ಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅನತಿ ದೂರದಲ್ಲಿರುವ ಸೇಂಟ್ ಬಾರ್ತಲೋಮಿಯೊ ಚರ್ಚ್ ಬದಿಯ ಸ್ಮಶಾನದಲ್ಲಿ ಈ ಸಮಾಧಿಯಿದೆ. ಆದರೆ ಕಪ್ಪು ಶಿಲೆಯ ಸಮಾಧಿಯಿರುವ ಜಾಗವನ್ನು ಸ್ಥಳೀಯಾಡಳಿತ ನಿರ್ಲಕ್ಷಿಸಿದೆ. ಈ ಜಾಗ ಕುಡುಕರ ಅಡ್ಡೆಯಾಗಿದೆ. ಇಲ್ಲಿ ಮದ್ಯದ ಬಾಟಲುಗಳು, ಸೇದಿ ಬಿಸಾಕಿದ ಸಿಗರೇಟು ತುಂಡಗಳು ಹೇರಳವಾಗಿ ಬಿದ್ದಿವೆ. ಅವರನ್ನು ಜನ ಮರೆತಿದ್ದಾರೆ.
ಮಾರ್ಷಲ್ ಕ್ಯಾನ್ಸರ್‌ನಿಂದ 41ನೇ ವಯಸ್ಸಿನಲ್ಲೇ ಮೃತಪಟ್ಟಿದ್ದರು. ಅವರು 1980ರ ದಶಕದ ಆರಂಭದಲ್ಲಿ ತಂಡದ ಇತರ ವೇಗದ ಬೌಲರ್‌ಗಳಾದ ಮೈಕೆಲ್ ಹೋಲ್ಡಿಂಗ್, ಜೋಲ್ ಗಾರ್ನರ್, ಆ್ಯಂಡಿ ರಾಬರ್ಟ್ಸ್ ಜೊತೆಗೂಡಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು. ಆದರೆ ಈಗಿನ ಪೀಳಿಗೆ ಅವರ ಕೊಡುಗೆ ಮರೆತಂತಿದೆ.
‘ಆಗಿನ ಕಾಲದ ಕ್ರಿಕೆಟಿಗರಿಗೆ ಈಗಿನಷ್ಟು ಹಣ ಮತ್ತು ಆಕರ್ಷಣೆ ಇರಲಿಲ್ಲ. ಈಗಿನ ಕಾಲದ ಕ್ರಿಕೆಟಿಗರನ್ನು ಜನ ಅಷ್ಟು ಸುಲಭವಾಗಿ ಮರೆಯುವುದಿಲ್ಲ’ ಎಂದು ಕ್ರಿಕೆಟ್ ಅಭಿಮಾನಿ ಎಂದು ಹೇಳಿಕೊಂಡ ಕೆವಿನ್ ಎಂಬವರು ಹೇಳಿದರು. ಆದರೆ ಹಲವರಿಗೆ ಇಲ್ಲಿ ಈ ಮಹಾನ್ ಬೌಲರ್ ಸಮಾಧಿಯಿರುವುದೇ ಗೊತ್ತಿಲ್ಲ.
ಮಾರ್ಷಲ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು 1991ರಲ್ಲಿ ಆಡಿದ್ದರು. 81 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 376 ವಿಕೆಟ್‌ಗಳನ್ನು ಪಡೆದಿದ್ದಾರೆ. ಅದೂ ಅಚ್ಚರಿಯ 20.94ರ ಸರಾಸರಿಯಲ್ಲಿ! ಅವರು ಹ್ಯಾಂಪ್‌ಶೈರ್ ಕೌಂಟಿ ತಂಡಕ್ಕೂ ಆಡಿದ್ದರು. ಅಲ್ಲಿನ ಕ್ರೀಡಾಂಗಣವನ್ನು ಸಂಪರ್ಕಿಸುವ ರಸ್ತೆಗೆ ಮಾರ್ಷಲ್ ಅವರ ಹೆಸರಿಡಲಾಗಿದೆ.
1999ರಲ್ಲಿ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಕೆಲವೇ ತಿಂಗಳ ನಂತರ ಅವರು ಮೃತರಾಗಿದ್ದರು.
ಸರ್ ಗ್ಯಾರ್ಫೀಲ್ಡ್ ಸೋಬರ್ಸ್ ಮತ್ತು ಜೋಲ್ ಗಾರ್ನರ್ ಅವರೂ ಬಾರ್ಬಾಡೋಸ್‌ನವರು.
T
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.