ಮುಂಬೈ: ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ಬುಧವಾರ ಫ್ರ್ಯಾಂಚೈಸ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರ್ಯಾಂಚೈಸ್ ಮುಂಬೈ ಇಂಡಿಯನ್ಸ್ ತಂಡದಿಂದ ಬಿಡುಗಡೆಗೊಂಡ ಬಳಿಕ ಅವರು ಈ ನಿರ್ಧಾರ ತಳೆದಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಎಂಬ ಹಿರಿಮೆ ಹೊಂದಿರುವ ಮಾಲಿಂಗ, ಈ ತಿಂಗಳ ಆರಂಭದಲ್ಲಿ ತಮ್ಮ ಅಲಭ್ಯತೆ ಕುರಿತು ತಿಳಿಸಿದ್ದರು ಎಂದು ಮುಂಬೈ ಇಂಡಿಯನ್ಸ್ ತಂಡ ಹೇಳಿದೆ.
ಮಲಿಂಗ ಅವರು ಈಗಾಗಲೇ ಟೆಸ್ಟ್ ಹಾಗೂ ಏಕದಿನ ಮಾದರಿಗಳಿಗೆ ನಿವೃತ್ತಿ ಘೋಷಿಸಿದ್ದಾರೆ. ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯಗಳಲ್ಲಿ ಮಾತ್ರ ಮುಂದುವರಿದ್ದಾರೆ.
37 ವರ್ಷದ ಯಾರ್ಕರ್ ತಜ್ಞ ಮಾಲಿಂಗ, 122 ಐಪಿಎಲ್ ಪಂದ್ಯಗಳಿಂದ 170 ವಿಕೆಟ್ ಗಳಿಸಿದ್ದರು. 13ರನ್‌ಗೆ 5 ವಿಕೆಟ್ ಅವರ ಶ್ರೇಷ್ಠ ಸಾಧನೆಯಾಗಿದೆ.
‘ಕುಟುಂಬದೊಂದಿಗೆ ಚರ್ಚಿಸಿದ್ದು, ಫ್ರ್ಯಾಂಚೈಸ್ ಕ್ರಿಕೆಟ್‌ಗೆ ವಿದಾಯ ಹೇಳಲು ಇದು ಸಕಾಲ ಎಂದು ನನಗನಿಸುತ್ತದೆ. ಕೊರೊನಾ ಹಾವಳಿ ಹಾಗೂ ಪ್ರಯಾಣದ ಮೇಲಿನ ನಿರ್ಬಂಧಗಳ ಕಾರಣದಿಂದ ಫ್ರ್ಯಾಂಚೈಸ್ ಟೂರ್ನಿಗಳಲ್ಲಿ ಭಾಗವಹಿಸುವುದು ಕಠಿಣವಾಗಲಿದೆ. ಹೀಗಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ‘ ಎಂದು ಮಾಲಿಂಗ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.