ADVERTISEMENT

IND vs NZ | ಸ್ಮೃತಿ ಶತಕ; ಭಾರತಕ್ಕೆ ಸರಣಿ ಜಯ

ಮಿಂಚಿದ ದೀಪ್ತಿ ಶರ್ಮಾ

ಪಿಟಿಐ
Published 29 ಅಕ್ಟೋಬರ್ 2024, 16:17 IST
Last Updated 29 ಅಕ್ಟೋಬರ್ 2024, 16:17 IST
<div class="paragraphs"><p>ಭಾರತ ತಂಡದ ಸ್ಮೃತಿ ಮಂದಾನ ಶತಕ ಗಳಿಸಿ ಸಂಭ್ರಮಿಸಿದರು&nbsp; </p></div>

ಭಾರತ ತಂಡದ ಸ್ಮೃತಿ ಮಂದಾನ ಶತಕ ಗಳಿಸಿ ಸಂಭ್ರಮಿಸಿದರು 

   

–ಬಿಸಿಸಿಐ ಎಕ್ಸ್‌ ಚಿತ್ರ

ಅಹಮದಾಬಾದ್: ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದ ಸ್ಮೃತಿ ಮಂದಾನ ಅವರ ಶತಕದ ಬಲದಿಂದ ಭಾರತ ತಂಡವು ನ್ಯೂಜಿಲೆಂಡ್ ಎದುರಿನ ಏಕದಿನ ಕ್ರಿಕೆಟ್ ಸರಣಿಯನ್ನು ಗೆದ್ದುಕೊಂಡಿತು. 

ADVERTISEMENT

ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಭಾರತ ತಂಡವು 6 ವಿಕೆಟ್‌ಗಳಿಂದ ಜಯಿಸಿತು. ಇದರೊಂದಿಗೆ ಸರಣಿಯನ್ನು 2–1ರಿಂದ ತನ್ನದಾಗಿಸಿಕೊಂಡಿತು. 

ಕಳೆದ ಕೆಲವು ಪಂದ್ಯಗಳಿಂದ ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದ ಸ್ಮೃತಿ ಈ ಪಂದ್ಯದಲ್ಲಿ ಲಯ ಕಂಡುಕೊಂಡರು. 122 ಎಸೆತಗಳಲ್ಲಿ 100 ರನ್ ಗಳಿಸಿದರು. ಅದರಲ್ಲಿ 10 ಬೌಂಡರಿಗಳಿದ್ದವು. ಏಕದಿನ ಕ್ರಿಕೆಟ್‌ನಲ್ಲಿ ಸ್ಮೃತಿ ಗಳಿಸಿದ 8ನೇ ಶತಕ ಇದಾಗಿದೆ.  ನಾಯಕಿ ಹರ್ಮನ್‌ಪ್ರೀತ್ ಕೌರ್ (59; 63ಎ, 4X6) ಕೂಡ ಅರ್ಧಶತಕದ ಕಾಣಿಕೆ ನೀಡಿದರು. ಅವರು ಸ್ಮೃತಿ ಜೊತೆಗೂಡಿ 117 ರನ್ ಸೇರಿಸಿದರು. 

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವು ಮಧ್ಯಮ ಕ್ರಮಾಂಕದ ಬ್ಯಾಟರ್ ಬ್ರೂಕ್ ಹ್ಯಾಲಿಡೇ (86; 96ಎ, 4X9, 6X3) ಅವರ ಆಟದ ಬಲದಿಂದ 49.5 ಓವರ್‌ಗಳಲ್ಲಿ 232 ರನ್ ಗಳಿಸಿತು. ಇದಕ್ಕುತ್ತರವಾಗಿ ಆತಿಥೇಯ ತಂಡವು 44.2 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 236 ರನ್ ಗಳಿಸಿತು. 

ಸರಣಿಯ ಎರಡನೇ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಬಳಗವು ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಬೌಲರ್‌ಗಳು ಭಾರತ ತಂಡಕ್ಕೆ ಆರಂಭದಲ್ಲಿಯೇ ಯಶಸ್ಸು ತಂದಕೊಟ್ಟರು. ಅದರಲ್ಲೂ ಪ್ರಿಯಾ ಮಿಶ್ರಾ (41ಕ್ಕೆ2) ಮತ್ತು ದೀಪ್ತಿ ಶರ್ಮಾ (39ಕ್ಕೆ3) ಅವರು ಗಮನ ಸೆಳೆದರು. 

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್: 49.5 ಓವರ್‌ಗಳಲ್ಲಿ 232 (ಜಾರ್ಜಿಯಾ ಪಿಮರ್ 39, ಬ್ರೂಕ್ ಹ್ಯಾಲಿಡೇ 86, ಇಸಾಬೆಲಾ ಗೇಜ್ 25, ಲಿಯಾ ತಹುಹು ಔಟಾಗದೆ 24, ಪ್ರಿಯಾ ಮಿಶ್ರಾ 41ಕ್ಕೆ2, ದೀಪ್ತಿ ಶರ್ಮಾ 39ಕ್ಕೆ3) ಭಾರತ: 44.2 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 236 (ಸ್ಮೃತಿ ಮಂದಾನ 100, ಯಷ್ಟಿಕಾ ಭಾಟಿಯಾ 35, ಹರ್ಮನ್‌ಪ್ರೀತ್ ಕೌರ್ ಔಟಾಗದೆ 59, ಜೆಮಿಮಾ ರಾಡ್ರಿಗಸ್ 22, ಹೆನಾ ರೋವ್ 47ಕ್ಕೆ2) ಫಲಿತಾಂಶ: ಭಾರತ ತಂಡಕ್ಕೆ 6 ವಿಕೆಟ್‌ಗಳ ಜಯ. 2–1ರಿಂದ ಸರಣಿ ಗೆಲುವು. ಪಂದ್ಯದ ಆಟಗಾರ್ತಿ: ಸ್ಮೃತಿ ಮಂದಾನ, ಸರಣಿ ಆಟಗಾರ್ತಿ: ದೀಪ್ತಿ ಶರ್ಮಾ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.