ದೆಹಲಿ: ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ-20 ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ನಡೆದ 'ಟೈ' ಪಂದ್ಯದಲ್ಲಿ ಬಂಗಾಳದ ವಿರುದ್ಧ ಸೂಪರ್ ಓವರ್‌ನಲ್ಲಿ ಗೆಲುವು ದಾಖಲಿಸಿರುವ ಕರ್ನಾಟಕ ತಂಡವು ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.
ಪಂದ್ಯದ ಅಂತಿಮ ಎಸೆತದಲ್ಲಿ ಅಧ್ಭುತ ಪೀಲ್ಡಿಂಗ್ ಮಾಡುವ ಮೂಲಕ ರನೌಟ್ ಮಾಡಿದ ಬಳಿಕ ಸೂಪರ್ ಓವರ್‌ನಲ್ಲಿ ಗೆಲುವಿನ ಸಿಕ್ಸರ್ ಬಾರಿಸಿರುವ ಕರ್ನಾಟಕದ ನಾಯಕ ಮನೀಶ್ ಪಾಂಡೆ ಗೆಲುವಿನ ರೂವಾರಿ ಎನಿಸಿದರು.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ಕರುಣ್ ನಾಯರ್ (55*) ಬಿರುಸಿನ ಅರ್ಧಶತಕದ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 160 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು.
ಬಳಿಕ ಗುರಿ ಬೆನ್ನತ್ತಿದ ಬಂಗಾಳ, ಋತಿಕ್ ಚಟರ್ಜಿ (51) ಹಾಗೂ ರಿತ್ವಿಕ್ ಚೌಧರಿ (36*) ಅಮೋಘ ಆಟದ ಹೊರತಾಗಿಯೂ ಎಂಟು ವಿಕೆಟ್ ನಷ್ಟಕ್ಕೆ 160 ರನ್ ಗಳಿಸಲಷ್ಟೇ ಸಮರ್ಥವಾಯಿತು.
ಅಂತಿಮ ಓವರ್‌ನಲ್ಲಿ 20 ಹಾಗೂ ಕೊನೆಯ ಎಸೆತದಲ್ಲಿ ಬಂಗಾಳ ಗೆಲುವಿಗೆ 1 ರನ್ನಿನ ಅಗತ್ಯವಿತ್ತು. ಆದರೆ ನೇರ ಥ್ರೋ ಮೂಲಕ ರನೌಟ್ ಮಾಡಿದ ಮನೀಶ್, ಬಂಗಾಳ ಕನಸಿಗೆ ತಣ್ಣೀರೆರಚಿದರು.
ಬಳಿಕ ಸೂಪರ್ ಓವರ್‌ನಲ್ಲಿ ಕರ್ನಾಟಕ ಗೆಲುವಿಗೆ 6 ರನ್‌ಗಳ ಅಗತ್ಯವಿತ್ತು. ಈ ಸಂದರ್ಭದಲ್ಲಿ ಮಗದೊಮ್ಮೆ ಮಿಂಚಿದ ಪಾಂಡೆ, ಸಿಕ್ಸರ್ ಸಿಡಿಸುವ ಮೂಲಕ ತಂಡಕ್ಕೆ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.