ಮೊಹಾಲಿ: ರವಿಚಂದ್ರನ್ ಅಶ್ವಿನ್, ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ ಅವರನ್ನು ‘ಮಂಕಡಿಂಗ್’ ರೀತಿಯಲ್ಲಿ ರನ್‌ಔಟ್ ಮಾಡಿದ್ದು, ಅದು ವಿವಾದದ ಸ್ವರೂಪ ಪಡೆದಿದ್ದು ಎಲ್ಲರಿಗೂ ಗೊತ್ತೇ ಇದೆ.
ಆ ಘಟನೆಯ ನಂತರ ಬ್ಯಾಟ್ಸ್‌ಮನ್‌ಗಳಲ್ಲಿ ಒಂದು ಬಗೆಯ ಭಯ ಮನೆ ಮಾಡಿದೆ. ಅಶ್ವಿನ್ ಬೌಲಿಂಗ್‌ಗೆ ಬಂದಾಗ ಕ್ರೀಸ್ ಬಿಟ್ಟು ಮುಂದೆ ಹೋಗಲು ನಾನ್‌ಸ್ಟ್ರೈಕ್‌ನಲ್ಲಿರುವ ಬ್ಯಾಟ್ಸ್‌ಮನ್‌ಗಳು ಹೆದರುತ್ತಿದ್ದಾರೆ ಎಂಬುದಕ್ಕೆ ಸೋಮವಾರ ನಡೆದ ಕಿಂಗ್ಸ್ ಇಲೆವನ್ ಪಂಜಾಬ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯ ಸಾಕ್ಷಿಯಾಯಿತು.
ಮುಜೀಬ್ ಉರ್ ರಹಮಾನ್ ಸೇರಿದಂತೆ ಇತರೆ ಬೌಲರ್‌ಗಳು ಚೆಂಡನ್ನು ಎಸೆಯುವಾಗ ಆರಾಮವಾಗೇ ಕ್ರೀಸ್‌ನಲ್ಲಿ ನಿಲ್ಲುತ್ತಿದ್ದ ವಾರ್ನರ್, ಅಶ್ವಿನ್ ಬೌಲ್ ಮಾಡಲು ಬಂದಾಗ ತುಸು ಹೆಚ್ಚೇ ಜಾಗ್ರತರಾಗಿಬಿಡುತ್ತಿದ್ದರು.
ಅಶ್ವಿನ್ ಬೌಲ್ ಮಾಡುವ ವೇಳೆ ಕ್ರೀಸ್ ಬಿಟ್ಟು ಅಲ್ಪ ಮುಂದೆ ಹೋಗುತ್ತಿದ್ದ ಅವರು ಮರು ಕ್ಷಣವೇ ಎಡಬದಿಗೆ ಬಾಗಿ ಬ್ಯಾಟ್ ಅನ್ನು ಕ್ರೀಸ್‌ನಲ್ಲಿ ಇಡುತ್ತಿದ್ದರು. ಈ ವಿಡಿಯೊವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ ಅಧಿಕೃತ ವೆಬ್‌ಸೈಟ್‌ನಲ್ಲಿ ಹಾಕಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಆಸ್ಟ್ರೇಲಿಯಾದ ಎಡಗೈ ಬ್ಯಾಟ್ಸ್‌ಮನ್ ವಾರ್ನರ್, ಈ ಪಂದ್ಯದಲ್ಲಿ ಅಜೇಯ 70ರನ್ ದಾಖಲಿಸಿದ್ದರು. 62 ಎಸೆತಗಳನ್ನು ಎದುರಿಸಿದ್ದ ಅವರು 6 ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.