ಕೋಲ್ಕತ್ತ: ಭಾರತದ ಕ್ರಿಕೆಟಿಗ ಮನೋಜ್ ತಿವಾರಿ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುರುವಾರ ವಿದಾಯ ಹೇಳಿದ್ದಾರೆ.
2008– 2015ರ ನಡುವೆ ಭಾರತ ತಂಡದಲ್ಲಿ 12 ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಿರುವ ಅವರು, 2021ರಲ್ಲಿ ರಾಜಕಾರಣಕ್ಕೆ ಕಾಲಿಟ್ಟರು. ಪ್ರಸ್ತುತ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕ್ಯಾಬಿನೆಟ್‌ನಲ್ಲಿ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವರಾಗಿದ್ದಾರೆ.
12 ಏಕದಿನ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶತಕ ಸೇರಿದಂತೆ ಒಟ್ಟು 287 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 29 ಶತಕದೊಂದಿಗೆ 48.56 ಸರಾಸರಿಯಲ್ಲಿ 9,908 ಕಲೆ ಹಾಕಿದ್ದಾರೆ.
2012ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿ ಪ್ರಶಸ್ತಿಯ ಸಂಭ್ರಮವನ್ನು ಅನುಭವಿಸಿದ್ದ ಅವರು, ನಂತರ ಡೆಲ್ಲಿ ಡೇರ್ ಡೆವಿಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡಗಳನ್ನು ಪ್ರತಿನಿಧಿಸಿದ್ದರು. ಒಟ್ಟು 183 ಟಿ20 ಪಂದ್ಯಗಳಲ್ಲಿ 3,436 ರನ್ ಗಳಿಸಿದ್ದಾರೆ.
37 ವರ್ಷದ ಅವರು 2022-23ರ ಋತುವಿನಲ್ಲಿ ಬಂಗಾಳ ತಂಡಕ್ಕಾಗಿ ಆಡಿದ್ದರು. ಅವರ ಮಾರ್ಗದರ್ಶನದಲ್ಲಿ ತಂಡವು ಫೈನಲ್ ಪ್ರವೇಶಿಸಿದ್ದು, ಸೌರಾಷ್ಟ್ರದ ಎದುರು ಬಂಗಾಲ ಸೋತಿತ್ತು. ಈ ಪಂದ್ಯ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದಿದ್ದು, ಇದು ತಿವಾರಿ ಅವರ ಕೊನೆಯ ಪ್ರಥಮ ದರ್ಜೆ ಪಂದ್ಯವೂ ಆಗಿದೆ.
ಇನ್‌ಸ್ಟಾಗ್ರಾಂನಲ್ಲಿ ‘ಕ್ರಿಕೆಟ್‌ಗೆ ಗುಡ್‌ಬೈ’ ಎಂದು ಪೋಸ್ಟ್ ಹಾಕುವ ಮೂಲಕ 19 ವರ್ಷಗಳ ಕ್ರಿಕೆಟ್ ವೃತ್ತಿಜೀವನದಿಂದ ನಿವೃತ್ತಿ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.