ಲಂಡನ್: ಪಾಕಿಸ್ತಾನದ ಹಲವು ಉದಯೋನ್ಮುಖ ಕ್ರಿಕೆಟಿಗರಿಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯೇ ಮಾದರಿ. ಅವರ ಆಟದ ಶೈಲಿ, ನಡೆಯುವ ರೀತಿ ಎಲ್ಲವನ್ನೂ ಯುವ ಆಟಗಾರರು ಅನುಕರಿಸುತ್ತಿರುವುದಾಗಿ ಪಾಕಿಸ್ತಾನ ತಂಡದ ಮಾಜಿ ನಾಯಕ ಯೂನಿಸ್ ಖಾನ್ ಬಹಿರಂಗ ಪಡಿಸಿದ್ದಾರೆ.
ಇಂಡಿಯಾ ಟುಡೇ ಆಯೋಜಿಸಿರುವ ’ಸಲಾಂ ಕ್ರಿಕೆಟ್ 2019’ ಕಾರ್ಯಕ್ರಮದಲ್ಲಿ ಯೂನಿಸ್ ಖಾನ್ ಮಾತನಾಡಿದ್ದಾರೆ.
’ವಿರಾಟ್ ಕೊಹ್ಲಿ ಅವರನ್ನೂ ಸಹ ಪಾಕಿಸ್ತಾನಿಯರು ಪ್ರೀತಿಸುತ್ತಾರೆ. ಪಾಕಿಸ್ತಾನದ ಇಂದಿನ ಹಲವು ಆಟಗಾರರು ಕೊಹ್ಲಿ ರೀತಿ ಆಟವಾಡಲು ಬಯಸುತ್ತಿದ್ದಾರೆ ಹಾಗೂ ಅವರಂತೆ ದೈಹಿಕವಾಗಿ ಸದೃಢರಾಗಿರಲು ಸಹ. ಅವರ ಆಂಗಿಕ ಶೈಲಿಯನ್ನೂ ಅನುಸರಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಯಶಸ್ಸಿನಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಯೂನಿಸ್ ಅಭಿಪ್ರಾಯಪಟ್ಟಿದ್ದಾರೆ.
’ಏಷ್ಯಾ ಕಪ್‌ನಲ್ಲಿ ಕೊಹ್ಲಿ ಕಣಕ್ಕಿಳಿದಿರಲಿಲ್ಲ, ಕ್ರೀಡಾಂಗಣ ಸಹ ಪೂರ್ಣ ತುಂಬಿರಲಿಲ್ಲ. ವಿಶ್ವಕಪ್‌ನಲ್ಲಿ ಭಾರತದ ಪಾಲಿಗೆ ಅವರು ನಿರ್ಣಾಯಕ’ ಎಂದಿದ್ದಾರೆ.
ಸಂಪ್ರದಾಯಿಕ ಎದುರಾಳಿಗಳಾದ ಭಾರತ–ಪಾಕಿಸ್ತಾನ ತಂಡಗಳ ನಡುವೆ ಜೂನ್ 16ರಂದು ಮ್ಯಾನ್‌ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಪಂದ್ಯ ನಡೆಯಲಿದೆ. ಸೋಮವಾರ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಸೆಣಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.