ADVERTISEMENT

ಕ್ರಿಕೆಟ್ | ಭಾರತದ ಎದುರಿನ ಸರಣಿ ನಿಗದಿಯಂತೆ ನಡೆಯಲಿದೆ: ಮಾರ್ನಸ್‌ ಲಾಬುಶೇನ್‌

ಪಿಟಿಐ
Published 4 ಮೇ 2020, 19:30 IST
Last Updated 4 ಮೇ 2020, 19:30 IST
ಮಾರ್ನಸ್‌ ಲಾಬುಶೇನ್‌ 
ಮಾರ್ನಸ್‌ ಲಾಬುಶೇನ್‌    

ಸಿಡ್ನಿ: ‘ಮುಂಬರುವ ಭಾರತದ ಎದುರಿನ ಕ್ರಿಕೆಟ್‌ ಸರಣಿಯು ನಿಗದಿತ ವೇಳಾಪಟ್ಟಿಯ ಪ್ರಕಾರವೇ ನಡೆಯಲಿದೆ’ ಎಂದು ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಆಟಗಾರ ಮಾರ್ನಸ್‌ ಲಾಬುಶೇನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ ತಂಡವು ಈ ವರ್ಷದ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, 2021ರ ಜನವರಿವರೆಗೂ ಕಾಂಗರೂ ನಾಡಿನಲ್ಲಿ ಇರಲಿದೆ. ಈ ಅವಧಿಯಲ್ಲಿ ತಲಾ ಮೂರು ಪಂದ್ಯಗಳ ಟ್ವೆಂಟಿ–20 ಹಾಗೂ ಏಕದಿನ ಸರಣಿ ಹಾಗೂ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದೆ.

ಕೊರೊನಾ ಬಿಕ್ಕಟ್ಟು ಉಲ್ಬಣಿಸುತ್ತಿರುವ ಕಾರಣ ಆಸ್ಟ್ರೇಲಿಯಾ ಸರ್ಕಾರವು ತನ್ನ ಗಡಿಗಳನ್ನು ಮುಚ್ಚಿದ್ದು, ಅಂತರರಾಷ್ಟ್ರೀಯ ವಿಮಾನಯಾನಕ್ಕೂ ನಿರ್ಬಂಧ ಹೇರಿದೆ. ಹೀಗಾಗಿ ಭಾರತವು ಅಕ್ಟೋಬರ್‌ನಲ್ಲಿ ಕಾಂಗರೂ ನಾಡಿಗೆ ಹೋಗುವುದು ಅನುಮಾನ ಎಂಬ ಮಾತುಗಳು ಕೇಳಿಬಂದಿವೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿರುವ ಲಾಬುಶೇನ್‌ ‘ಭಾರತವು ನಿಗದಿಯಂತೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಒಂದು ವೇಳೆ ವಿರಾಟ್‌ ಕೊಹ್ಲಿ ಬಳಗ ಪ್ರವಾಸದಿಂದ ಹಿಂದೆ ಸರಿದರೆ ನಮಗೆಲ್ಲರಿಗೂ ನಿರಾಸೆಯ ಜೊತೆಗೆ ಆಘಾತವೂ ಆಗಲಿದೆ’ ಎಂದಿದ್ದಾರೆ.

‘ನಮ್ಮ ದೇಶವು ಅತ್ಯಾಧುನಿಕ ವೈದ್ಯಕೀಯ ಸೌಕರ್ಯಗಳನ್ನು ಒಳಗೊಂಡಿದೆ. ಕೊರೊನಾ ಶಂಕಿತರನ್ನು ಶೀಘ್ರವೇ ಪತ್ತೆಹಚ್ಚಿ ಅವರನ್ನು ಸ್ವಯಂ ಪ್ರತ್ಯೇಕ ವಾಸಕ್ಕೆ ಕಳುಹಿಸುವ ಕಾರ್ಯ ಭರದಿಂದ ಸಾಗಿದೆ. ಹೀಗಾಗಿ ಕೊರೊನಾ ಪ್ರಕರಣಗಳು ಇಳಿಮುಖವಾಗಿವೆ. ಕೋವಿಡ್‌–19ನಿಂದ ಸಾವನ್ನಪ್ಪಿದವರ ಸಂಖ್ಯೆಯೂ ನಮ್ಮಲ್ಲಿ ಕಡಿಮೆ ಇದೆ. ಹೀಗಾಗಿ ಭಾರತದವರು ನಮ್ಮ ದೇಶಕ್ಕೆ ಬಂದು ಕ್ರಿಕೆಟ್‌ ಸರಣಿ ಆಡುವುದಕ್ಕೆ ಭಯಪಡಬೇಕಾದ ಅಗತ್ಯವಿಲ್ಲ’ ಎಂದು ತಿಳಿಸಿದ್ದಾರೆ.

‘ಕೊರೊನಾ ಬಿಕ್ಕಟ್ಟು ಬಗೆಹರಿದು ಕ್ರಿಕೆಟ್‌ ಚಟುವಟಿಕೆಗಳು ಗರಿಗೆದರಿದ ಬಳಿಕ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಮತ್ತಷ್ಟು ಸುಧಾರಣೆ ತಂದುಕೊಳ್ಳಲು ಪ್ರಯತ್ನಿಸುತ್ತೇನೆ. ಇದರಿಂದ ವೈಯಕ್ತಿಕವಾಗಿ ನನಗೆ ಹೆಚ್ಚು ಅನುಕೂಲವಾಗಲಿದೆ’ ಎಂದು 25 ವರ್ಷ ವಯಸ್ಸಿನ ಆಲ್‌ರೌಂಡರ್‌ ನುಡಿದಿದ್ದಾರೆ.

‘ಕ್ರಿಕೆಟ್‌ನಲ್ಲಿ ಪರಿಪೂರ್ಣ ಆಟಗಾರನಾಗಿ ರೂಪುಗೊಳ್ಳುವುದು ತುಂಬಾ ಕಷ್ಟ. ಇದು ಈ ಆಟದ ವೈಶಿಷ್ಟ್ಯ. ದಿನ ದಿನವೂ ಹೊಸತನವನ್ನು ಮೈಗೂಡಿಸಿಕೊಂಡು ಸಾಗಬೇಕಾಗುತ್ತದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.