ನವದೆಹಲಿ: ಆಸ್ಟ್ರೇಲಿಯಾ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತಮ್ಮನ್ನು ಉಳಿಸಿಕೊಳ್ಳದೇ ಇರುವ ಕ್ರಮವನ್ನು ‘ಸುಂದರ’ ಎಂದು ಬಣ್ಣಿಸಿದ್ದಾರೆ.
ಆರ್‌ಸಿಬಿ ತಂಡವು ವಿರಾಟ್ ಕೊಹ್ಲಿ, ಯಶ್ ದಯಾಳ್ ಮತ್ತು ರಜತ್ ಪಾಟೀದಾರ್ ಅವರನ್ನು ಮಾತ್ರ ಉಳಿಸಿಕೊಂಡಿದೆ. ಮ್ಯಾಕ್ಸ್‌ವೆಲ್ ಸೇರಿದಂತೆ ಉಳಿದೆಲ್ಲ ಆಟಗಾರರನ್ನು ಬಿಡುಗಡೆ ಮಾಡಿದೆ. ಮ್ಯಾಕ್ಸ್‌ವೆಲ್ ಅವರು 2021ರಿಂದ ಆರ್‌ಸಿಬಿಯಲ್ಲಿದ್ದರು. ಮಧ್ಯಮ ಕ್ರಮಾಂಕದಲ್ಲಿ ತಮ್ಮ ಅಬ್ಬರದ ಆಟದ ಮೂಲಕ ಗಮನ ಸೆಳೆದಿದ್ದರು. ಆರ್‌ಸಿಬಿ ತಂಡವು ಮೂರು ಪ್ಲೇ ಆಫ್ ಅರ್ಹತೆ ಪಡೆದಾಗ ಅವರು ತಂಡದಲ್ಲಿದ್ದರು.
‘ಅವರು ನನಗೆ ಆರ್‌ಸಿಬಿಯ ಮೊ ಬೊಬಾಟ ಮತ್ತು ಆ್ಯಂಡಿ ಫ್ಲವರ್ ಅವರಿಂದ ಫೋನ್ ಕರೆ ಬಂದಿತು. ಆ ಝೂಮ್ ಕರೆಯಲ್ಲಿ ಅವರಿಬ್ಬರೂ ನನ್ನ ಜೊತೆ ಮಾತನಾಡಿದರು. ನನ್ನನ್ನು ತಂಡದಲ್ಲಿ ಉಳಿಸಿಕೊಳ್ಳದಿರುವ ಕಾರಣಗಳನ್ನು ತುಂಬಾ ಚೆನ್ನಾಗಿ ವಿವರಿಸಿದರು. ಅವರ ವಿವರಣೆ ನಿಜಕ್ಕೂ ಸುಂದರವಾಗಿತ್ತು. ಆಮೇಲೆ ನಾವು ಕ್ರಿಕೆಟ್ ಬಗ್ಗೆಯೇ ಅರ್ಧಗಂಟೆ ಮಾತನಾಡಿದೆವು. ಅವರ ಯೋಜನೆ ಮತ್ತು ಭವಿಷ್ಯದ ಚಿಂತನೆಗಳ ಕುರಿತೂ ವಿವರಿಸಿದರು’ ಎಂದು ಮ್ಯಾಕ್ಸ್‌ವೆಲ್ ಅವರು ಇಎಸ್‌ಪಿಎನ್‌ಕ್ರಿಕ್‌ಇನ್ಫೋ ವೆಬ್‌ಸೈಟ್‌ನ ಅರೌಂಡ್ ದ ವಿಕೆಟ್ ಶೋನಲ್ಲಿ ಹೇಳಿದ್ದಾರೆ.
‘ಅವರ ಯೋಜನೆಯ ಕುರಿತು ನಾನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡೆ. ಅವರಿಗೆ ಮೂವರು ಭಾರತೀಯ ಆಟಗಾರರು ಬೇಕಾಗಿದ್ದಾರೆ. ಮುಂದಿನ ನಡೆಯಲ್ಲಿ ಅವರು ಆ ಮೂವರು ಆಟಗಾರರೊಂದಿಗೆ ಸರಿಹೊಂದುವಂತೆ ಸ್ಥಳೀಯ ಮತ್ತು ವಿದೇಶಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಅವರು ವಿವರಿಸಿದ ರೀತಿಯಿಂದಾಗಿ ನಾನು ಬಹಳ ಖುಷಿಯಾಗಿರುವೆ. ಪ್ರತಿಯೊಂದು ತಂಡವೂ ಅವರ ಮಾದರಿಯನ್ನು ಅನುಸರಿಸಿದರೆ ಯಾವುದೇ ಗೊಂದಲಕ್ಕೆ ಅವಕಾಶವಿರುವುದಿಲ್ಲ. ಎಲ್ಲವೂ ಸಾಂಗವಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.